2021ರ ಜನವರಿ 6ರಂದು ನಡೆದ ಕ್ಯಾಪಿಟಲ್ ಹಿಲ್ ಗಲಭೆಗೆ ಜನರನ್ನು ಟ್ರಂಪ್ ಪ್ರಚೋದಿಸಿದ್ದಾರೆ ಎಂದು ಬಿಂಬಿಸುವ ವಿಡಿಯೋವನ್ನು ಪ್ರಸಾರ ಮಾಡಿದ್ದಕ್ಕಾಗಿ, ಬಿಬಿಸಿ ವಿರುದ್ಧ 100 ಕೋಟಿ ಡಾಲರ್ (85,000 ಕೋಟಿ ರೂ.) ಪರಿಹಾರ ಕೇಳುವ ಮೊಕದ್ದಮೆ ಹೂಡುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಕ್ಷಮೆಯಾಚಿಸಿ ಅಥವಾ ಮೊಕದ್ದಮೆ ಎದರಿಸಿ ಎಂದು ಬಿಬಿಸಿಗೆ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ವಿಡಿಯೋ ಎಡಿಟಿಂಗ್‌ನಲ್ಲಾದ ದೋಷವನ್ನು ಬಿಬಿಸಿ ಮುಖ್ಯಸ್ಥರು ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಬಿಬಿಸಿಯ ಇಬ್ಬರು ಪ್ರಮುಖರು ರಾಜೀನಾಮೆ ನೀಡಿದ್ದಾರೆ.
ಇತ್ತೀಚೆಗೆ ಬಿಬಿಸಿ ಸಾಕ್ಷ್ಯಾಚಿತ್ರವೊಂದನ್ನು ಬಿಡುಗಡೆ ಮಾಡಿತ್ತು. ಚಿತ್ರದಲ್ಲಿ, ಟ್ರಂಪ್ ಅವರ ಎರಡು ಭಾಷಣಗಳನ್ನು ‘ಎಡಿಟ್’ ಮಾಡಿ, ಟ್ರಂಪ್ ಅವರು ಕ್ಯಾಪಿಟಲ್ ಹಿಲ್ ಗಲಭೆ ಪ್ರಚೋದನೆ ನೀಡಿದ್ದಾರೆ ಎಂಬುದಾಗಿ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆರೋಪ ಕೇಳಿಬಂದ ಬೆನ್ನಲ್ಲೇ, ಬಿಬಿಸಿ ಮಹಾನಿರ್ದೇಶಕ ಟಿಮ್ ಡೇವಿ ಮತ್ತು ನೂತನ ಮುಖ್ಯಸ್ಥೆ ಡೆಬೊರಾ ಟರ್ನೆಸ್ ಭಾನುವಾರ ರಾಜೀನಾಮೆ ನೀಡಿದ್ದರು.
ಈ ನಡುವೆ, ಟ್ರಂಪ್ ಅವರ ವಕೀಲರು ಬಿಬಿಸಿಗೆ ನೋಟಿಸ್ ಕಳಿಸಿದ್ದಾರೆ. ಅದರಲ್ಲಿ; ಬಿಬಿಸಿ ಕ್ಷಮೆಯಾಚಿಸಬೇಕು, ಸಾಕ್ಷ್ಯಚಿತ್ರವನ್ನು ಹಿಂತೆಗೆದುಕೊಳ್ಳಬೇಕು ಹಾಗೂ ಟ್ರಂಪ್‌ಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಟ್ರಂಪ್ ವಿಡಿಯೋ ಕುರಿತು ಯುಕೆ ಸಂಸದೀಯ ಸಮಿತಿಯೊಂದಿಗೆ ಮಾಹಿತಿ ಹಂಚಿಕೊಂಡಿರುವ ಬಿಬಿಸಿ ಅಧ್ಯಕ್ಷ ಸಮೀರ್ ಶಾ ಅವರು “ವಿಡಿಯೋವನ್ನು ಎಡಿಟ್ ಮಾಡಿದ ರೀತಿಯು ‘ತೀರ್ಪಿನ ದೋಷ’ಕ್ಕೆ ಕಾರಣವಾಗಿದೆ. ಭಾಷಣವನ್ನು ಸಂಪಾದಿಸಿದ ವಿಧಾನವು ಗಲಭೆಗೆ ಪ್ರಚೋದನೆ ನೀಡುವ ರೀತಿಯಲ್ಲಿದೆ ಎಂಬುದನ್ನು ನಾವು ಒಪ್ಪುತ್ತೇವೆ. ತಪ್ಪಿನ ಕಾರಣಕ್ಕಾಗಿ ನಾವು ಕ್ಷಮೆಯಾಚಿತ್ತೇವೆ” ಎಂದು ಹೇಳಿದ್ದಾರೆ.
ಬಿಬಿಸಿ ಪ್ರಕಟಿಸಿದ ಟ್ರಂಪ್ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್, “ಬಿಬಿಸಿ ಸಾಯುತ್ತಿದೆ. ಏಕೆಂದರೆ, ಅದು ಟ್ರಂಪ್ ವಿರೋಧಿ ನಕಲಿ ಸುದ್ದಿಯನ್ನು ಪ್ರಕಟಿಸಿದೆ” ಎಂದು ಹೇಳಿದ್ದಾರೆ.




