“ರಷ್ಯಾದಿಂದ ತೈಲ ಖರೀದಿಸುವುದನ್ನು ಭಾರತ ನಿಲ್ಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಹೇಳಿದ್ದಾರೆ. ಈ ಮಾತು ತಪ್ಪಿದರೆ ಭಾರತದ ಮೇಲೆ ಭಾರಿ ಸುಂಕವನ್ನು ವಿಧಿಸಲಾಗುವುದು” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಎಚ್ಚರಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಟ್ರಂಪ್, “ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ಭಾರತ ಮುಂದುವರೆಸಿದರೆ ಭಾರಿ ಸುಂಕವೂ ಮುಂದುವರೆಯಲಿದೆ. ನಾನು ಈ ಬಗ್ಗೆ ಪ್ರಧಾನಿ ಮೋದಿ ಜೊತೆ ಮಾತನಾಡಿದ್ದೇನೆ. ರಷ್ಯಾದೊಂದಿಗೆ ತೈಲಾ ಖರೀದಿ ಮಾಡುವುದಿಲ್ಲ ಎಂದು ಹೇಳಿದ್ದಾರೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ: ಡೊನಾಲ್ಡ್ ಟ್ರಂಪ್ ಪುನರುಚ್ಚಾರ
ಮಾರುಕಟ್ಟೆಯ ಸ್ಥಿತಿಗೆ ಅನುಗುಣವಾಗಿ ಭಾರತವು ಶಕ್ತಿಯ ಮೂಲವನ್ನು ವಿಸ್ತರಿಸಲಿದೆ ಮತ್ತು ವೈವಿಧ್ಯೀಕರಣಗೊಳಿಸಲಿದೆ ಎಂದು ಭಾರತ ಕಳೆದ ವಾರವಷ್ಟೇ ಹೇಳಿದೆ. ಈ ಬೆನ್ನಲ್ಲೇ ಟ್ರಂಪ್, ರಷ್ಯಾದೊಂದಿಗೆ ವಹಿವಾಟು ನಿಲ್ಲಿಸುವುದಾಗಿ ಮೋದಿ ತಮಗೆ ಮಾತು ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಭಾರತ ಮಾತ್ರ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.
ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸಿ ಪರೋಕ್ಷವಾಗಿ ಯುದ್ಧಕ್ಕೆ ಸಹಾಯ ಮಾಡುತ್ತಿದೆ ಎಂದು ಅಮೆರಿಕ ಆರೋಪಿಸುತ್ತಿದೆ. ಈ ಕಾರಣವನ್ನೇ ಮುಂದಿಟ್ಟುಕೊಂಡು ಟ್ರಂಪ್ ಭಾರತದ ವಸ್ತುಗಳ ಮೇಲಿನ ಸುಂಕವನ್ನು ಶೇ.25ರಿಂದ ಶೇ.50ಕ್ಕೆ ಏರಿಸಿದ್ದಾರೆ. ಅಮೆರಿಕದ ಈ ಕ್ರಮವನ್ನು ಭಾರತ, “ಅನ್ಯಾಯ, ಅನುಚಿತ ಮತ್ತು ಅಸಮಂಜಸ” ಎಂದು ಹೇಳಿದೆ.
ಈ ಸಂದರ್ಭದಲ್ಲೇ ಭಾರತ ಮತ್ತು ಪಾಕಿಸ್ತಾನ ಯುದ್ದ ನಿಲ್ಲಲು ತಾನೇ ಕಾರಣ. ವ್ಯಾಪಾರ ನಿಲ್ಲಿಸುವ ಎಚ್ಚರಿಕೆ ನೀಡಿ ಯುದ್ಧ ನಿಲ್ಲಿಸಿದೆ ಎಂದೂ ಹೇಳಿದ್ದಾರೆ. ಕದನ ವಿರಾಮದ ಬಳಿಕ ಹಲವು ಬಾರಿ ಈ ಹೇಳಿಕೆಯನ್ನು ಟ್ರಂಪ್ ಹೇಳಿದ್ದಾರೆ. ಭಾರತ ಮಾತ್ರ ಇದನ್ನು ಅಲ್ಲಗಳೆದಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಯಾವುದೇ ಹೇಳಿಕೆ ನೀಡದಿರುವುದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.





