ಆರು ವರ್ಷಗಳ ಬಳಿಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗುರುವಾರ ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಏಪೆಕ್ ಶೃಂಗಸಭೆಯ ಸಂದರ್ಭದಲ್ಲಿ ಮುಖಾಮುಖಿಯಾಗಿದ್ದಾರೆ.
“ನಾವು ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದಿದ್ದೇವೆ, ನಮ್ಮ ನಡುವೆ ಒಳ್ಳೆಯ ಸಂಬಂಧವಿದೆ. ಮತ್ತೆ ಅವರನ್ನು ನೋಡಿದ ಸಂತೋಷ. ನಾವು ಇಂದೇ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಬಹುದು,” ಎಂದು ಟ್ರಂಪ್ ಮಾಧ್ಯಮ ಪ್ರತಿನಿಧಿಗಳ ಮುಂದೆ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಕೈ ಕುಲುಕುವಾಗ ಹೇಳಿದರು.
ಇದಕ್ಕೂ ಮುಂಚೆ ಇಬ್ಬರು ನಾಯಕರು 2019ರಲ್ಲಿ ಜಪಾನ್‌ನ ಒಸಾಕಾದಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಭೇಟಿಯಾಗಿದ್ದರು.
“ನನ್ನ ಹಳೆಯ ಸ್ನೇಹಿತನಾದ, ಅತ್ಯಂತ ಗೌರವಯುತ ಚೀನಾದ ಅಧ್ಯಕ್ಷರೊಂದಿಗೆ ಇಲ್ಲಿರುವುದು ಗೌರವದ ವಿಷಯ. ನಾವು ಈಗಾಗಲೇ ಹಲವಾರು ವಿಷಯಗಳಲ್ಲಿ ಒಪ್ಪಂದಕ್ಕೊಳಗಾಗಲಿದ್ದೇವೆ, ಇನ್ನೂ ಕೆಲವು ವಿಷಯಗಳಲ್ಲಿ ಸಹಮತಕ್ಕೆ ಬರಲಿದ್ದೇವೆ. ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಒಬ್ಬ ಶ್ರೇಷ್ಠ ನಾಯಕ; ಚೀನಾ ಒಂದು ಮಹಾನ್ ರಾಷ್ಟ್ರ. ನಮ್ಮ ಸಂಬಂಧ ಮುಂದಿನ ದಿನಗಳಲ್ಲಿ ಮತ್ತಷ್ಟು ಅನ್ಯೋನ್ಯವಾಗಲಿದೆ. ಅವರು ಬಹಳ ಕಠಿಣ ಮಾತುಕತಾಕಾರರು. ಆದರೆ ನಮ್ಮ ಸಭೆ ಯಶಸ್ವಿಯಾಗುತ್ತದೆ ಎಂಬುದರಲ್ಲಿ ನನಗೆ ಸಂಶಯವೇ ಇಲ್ಲ” ಎಂದು ಟ್ರಂಪ್ ಹೇಳಿದರು.
ಇದಕ್ಕೆ ಪ್ರತಿಯಾಗಿ ಮಾತನಾಡಿದ ಷಿ ಜಿನ್‌ಪಿಂಗ್, “ನಮ್ಮ ರಾಷ್ಟ್ರಗಳ ಪರಿಸ್ಥಿತಿಗಳು ವಿಭಿನ್ನವಾಗಿರುವುದರಿಂದ ಕೆಲವೊಮ್ಮೆ ನಮ್ಮ ಅಭಿಪ್ರಾಯಗಳು ಒಂದೇ ಆಗುವುದಿಲ್ಲ. ಇದು ಸಹಜ. ವಿಶ್ವದ ಪ್ರಮುಖ ಎರಡು ಆರ್ಥಿಕ ಶಕ್ತಿಗಳಾಗಿರುವ ಅಮೆರಿಕಾ ಮತ್ತು ಚೀನಾ ಸರಿ ದಿಕ್ಕಿನಲ್ಲಿ ಸಾಗಬೇಕು.ಚೀನಾ ಮತ್ತು ಅಮೆರಿಕಾ ಪರಸ್ಪರ ಸ್ಪರ್ಧಿಗಳು ಅಲ್ಲ, ಬದಲಾಗಿ ಸಹಭಾಗಿಗಳಾಗಬೇಕು ಎಂದು ನಾನು ಅನೇಕ ಬಾರಿ ಸಾರ್ವಜನಿಕವಾಗಿ ಹೇಳಿದ್ದೇನೆ. ಇದು ಇತಿಹಾಸದಿಂದ ಕಲಿತ ಪಾಠ ಹಾಗೂ ವಾಸ್ತವಿಕತೆಯ ಅಗತ್ಯ” ಎಂದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಟನಲ್ ರೋಡ್ ದೈತ್ಯ ಯೋಜನೆಯನ್ನು ಸಾರ್ವಜನಿಕ ಚರ್ಚೆಗಿಡಲಿ ಸರ್ಕಾರ
ಟ್ರಂಪ್ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಗಾಜಾ ಶಾಂತಿ ಒಪ್ಪಂದ ಮತ್ತು ಥಾಯ್ಲೆಂಡ್–ಕಾಂಬೋಡಿಯಾ ಗಡಿಸಮಸ್ಯೆ ಪರಿಹಾರದ ಮಧ್ಯಸ್ಥಿಕೆಗೆ ಕ್ಸಿ ಪ್ರಶಂಸೆ ವ್ಯಕ್ತಪಡಿಸಿದರು. ನೀವು ಮಲೇಷಿಯಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಥಾಯ್ಲೆಂಡ್-ಕಾಂಬೋಡಿಯಾ ಗಡಿಯಲ್ಲಿ ಶಾಂತಿ ಒಪ್ಪಂದದ ಜಂಟಿ ಘೋಷಣೆಗೆ ಸಾಕ್ಷಿಯಾಗಿದ್ದೀರಿ. ಚೀನಾ ಸಹ ತನ್ನದೇ ರೀತಿಯಲ್ಲಿ ಗಡಿವಿವಾದಗಳನ್ನು ಶಾಂತಿಯುತವಾಗಿ ನಿರ್ವಹಿಸಲು ಪ್ರಯತ್ನಿಸುತ್ತಿದೆ ಎಂದು ಕ್ಸಿ ಜಿನ್‌ಪಿಂಗ್ ಹೇಳಿದರು.
ಈ ಭೇಟಿಯು ಚೀನಾದಿಂದ ಹೈಟೆಕ್ ಕ್ಷೇತ್ರಕ್ಕೆ ಅತ್ಯಗತ್ಯವಾದ ಅಪರೂಪದ ಖನಿಜಗಳ ರಫ್ತಿನ ಮೇಲೆ ಕಠಿಣ ನಿರ್ಬಂಧವನ್ನು ವಿಧಿಸುವ ಪ್ರಸ್ತಾಪದಿಂದಾಗಿ ಈ ತಿಂಗಳು ಚೀನಾ ಮತ್ತು ಅಮೆರಿಕ ನಡುವೆ ವಾಣಿಜ್ಯ ವಹಿವಾಟು ಉಲ್ಬಣಗೊಂಡಿದೆ. ಇದಕ್ಕೆ ಪ್ರತಿಯಾಗಿ ಟ್ರಂಪ್, ಚೀನಾದ ರಫ್ತುಗಳ ಮೇಲೆ ಶೇಕಡಾ 100ರಷ್ಟು ಸುಂಕವನ್ನು ವಿಧಿಸುವುದಾಗಿ ಮತ್ತು ಅಮೆರಿಕದ ಸಾಫ್ಟ್‌ವೇರ್‌ನಿಂದ ತಯಾರಾದ ಉತ್ಪನ್ನಗಳ ರಫ್ತಿಗೆ ನಿರ್ಬಂಧ ಹೇರುವ ಬೆದರಿಕೆಯನ್ನು ಒಡ್ಡಿದ್ದಾರೆ.
ದಕ್ಷಿಣ ಕೊರಿಯಾದ ಬೂಸಾನ್ ತಲುಪುವ ಮುನ್ನ ಟ್ರಂಪ್, “ಚೀನಾ ಪರಮಾಣು ಶಸ್ತ್ರಾಸ್ತ್ರ ಸಂಗ್ರಹ ಹೆಚ್ಚಿಸುತ್ತಿರುವ ಹಿನ್ನೆಲೆ, ಅಮೆರಿಕಾ ತನ್ನ ಪರಮಾಣು ಪರೀಕ್ಷೆಗಳನ್ನು ಪುನರಾರಂಭಿಸುತ್ತದೆ,” ಎಂದು ಘೋಷಿಸಿದ್ದರು. ಆದರೆ ಕ್ಸಿ ಅವರೊಂದಿಗೆ ನಡೆದ ಸಭೆಯಲ್ಲಿ ಈ ಕುರಿತು ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.





