ಎರಡನೇ ಬಾರಿಗೆ ಕಳೆದ ವರ್ಷ ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರ ಜನಪ್ರಿಯತೆಯ ಅಲೆ ಕೇವಲ ಒಂದೇ ವರ್ಷದಲ್ಲಿ ತೀವ್ರ ಇಳಿಕೆ ಕಂಡಿದ್ದು, ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಅವರ ಅನುಮೋದನಾ ದರ ಐತಿಹಾಸಿಕ ಕಡಿಮೆ ಮಟ್ಟಕ್ಕೆ ಕುಸಿದಿದೆ.
ಅಮೆರಿಕ ರಾಜಕೀಯದಲ್ಲಿ ಡೊನಾಲ್ಡ್ ಟ್ರಂಪ್ ಎಂಬುದು ಸದಾ ಚರ್ಚೆಯಲ್ಲಿರುವ ಹೆಸರು. ಅವರು ರಾಜಕೀಯಕ್ಕೆ ಪ್ರವೇಶಿಸಿದ ದಿನದಿಂದಲೇ ಜನಪ್ರಿಯತೆ ಮತ್ತು ವಿವಾದಗಳು ಜೊತೆಯಾಗಿಯೇ ಬಂದಿವೆ. ಆದರೆ ಇತ್ತೀಚೆಗೆ ಅದರಲ್ಲೂ 2ನೇ ಬಾರಿಗೆ ಅಧ್ಯಕ್ಷ ಸ್ಥಾನ ಅಲಂಕರಿಸಿದ ಬಳಿಕ ಪ್ರಕಟವಾಗುತ್ತಿರುವ ಜನಾಭಿಪ್ರಾಯ ಸಮೀಕ್ಷೆಗಳು ಟ್ರಂಪ್ ಅವರ ಜನಪ್ರಿಯತೆ ನಿಜವಾಗಿಯೂ ಇಳಿಮುಖವಾಗುತ್ತಿದೆಯೇ? ಎಂಬುದರ ಕುರಿತು ವರದಿ ಬಿತ್ತಿರಿಸಿವೆ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಶೇಕಡಾವಾರು ಅಂಕಿಅಂಶಗಳನ್ನು ನೋಡುವುದಕ್ಕಿಂತಲೂ, ಅದರ ಹಿಂದಿರುವ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳುವುದು ಅಗತ್ಯ.
ಜನಪ್ರಿಯತೆ ಅಥವಾ ‘ಅನುಮೋದನೆ ಪ್ರಮಾಣ’ (approval rating) ಎಂದರೆ, ನಿರ್ದಿಷ್ಟ ಸಮಯದಲ್ಲಿ ಜನರು ಆಡಳಿತ ಅಥವಾ ನಾಯಕನ ಕಾರ್ಯಕ್ಷಮತೆಯನ್ನು ಹೇಗೆ ಮೌಲ್ಯಮಾಪನ ಮಾಡುತ್ತಿದ್ದಾರೆ ಎಂಬುದರ ಸೂಚಕ. ಇದು ಅಂತಿಮ ತೀರ್ಪಲ್ಲ; ಆದರೆ ಸಾರ್ವಜನಿಕ ಮನೋಭಾವವನ್ನು ಅಳೆಯುವ ಸಾಧನ ಎಂದು ಹೇಳಬಹುದು. ಟ್ರಂಪ್ ವಿಷಯದಲ್ಲಿ ಈ ಅಂಕಿಅಂಶಗಳು ಸದಾ ಅಸ್ಥಿರವಾಗಿಯೇ ಇರುತ್ತವೆ. ಅವರ ರಾಜಕೀಯ ಶೈಲಿಯೇ ಅಂಥದ್ದು. ತೀವ್ರ ಬೆಂಬಲ ಮತ್ತು ತೀವ್ರ ವಿರೋಧ, ಎರಡೂ ಜೊತೆಯಲ್ಲೇ ಇರುತ್ತವೆ.
ʼದ ಅಮೆರಿಕನ್ ಬಜಾರ್ʼ ಪ್ರಕಟಿಸಿರುವ ಓಹಿಯೋ ಸಮೀಕ್ಷಾ ವರದಿಯಲ್ಲಿ ಟ್ರಂಪ್ ಅವರ ಜನಪ್ರಿಯತೆ ಗಣನೀಯ ಕುಸಿತ ಕಂಡಿರುವುದನ್ನು ತೋರಿಸುತ್ತದೆ. ಆಗಸ್ಟ್ ತಿಂಗಳ ಬಳಿಕ ಟ್ರಂಪ್ ಅವರ ಕೆಲಸದ ಕ್ಷಮತೆಯ ಅನುಮೋದನೆ ಶೇ. 49ರಿಂದ 46ಕ್ಕೆ ಇಳಿದಿದೆ, ಹಾಗೂ ಅವರ ವಿರುದ್ಧದ ನಿರಾಕರಣೆ ಪ್ರಮಾಣ ಶೇ. 42ರಿಂದ 48ಕ್ಕೆ ಏರಿದೆ. ಇದರರ್ಥ, ವರ್ಷಾಂತ್ಯದ ಹೊತ್ತಿಗೆ ಓಹಿಯೋದಲ್ಲಿ ಟ್ರಂಪ್ ಅವರ ಕಾರ್ಯಕ್ಷಮತೆಯನ್ನು ಮೆಚ್ಚುವವರಿಗಿಂತ, ಅದನ್ನು ವಿರೋಧಿಸುವವರೇ ಹೆಚ್ಚಿದ್ದಾರೆ ಎಂದಾಗುತ್ತದೆ. ಓಹಿಯೋ ರಾಜ್ಯ ಅಮೆರಿಕದ ರಾಜಕೀಯದಲ್ಲಿ ಐತಿಹಾಸಿಕವಾಗಿ ಪ್ರಾಮುಖ್ಯತೆ ಪಡೆದ ‘ಬ್ಯಾಟಲ್‌ಗ್ರೌಂಡ್’ ರಾಜ್ಯವಾಗಿದ್ದು, ರಾಷ್ಟ್ರದ ರಾಜಕೀಯ ದಿಕ್ಕನ್ನು ಸೂಚಿಸುವ ಸೂಚಕವಾಗಿಯೂ ಪರಿಗಣಿಸಲಾಗುತ್ತದೆ. ಅಂಥ ರಾಜ್ಯದಲ್ಲೇ ಟ್ರಂಪ್ ಅವರ ಅನುಮೋದನೆ (ಜನಪ್ರಿಯತೆ ಪ್ರಮಾಣ) ಶೇಕಡಾ 50ಕ್ಕಿಂತ ಕೆಳಗಿಳಿದಿರುವುದು ರಾಜಕೀಯವಾಗಿ ಮಹತ್ವದ ಬೆಳವಣಿಗೆ ಎನ್ನಬಹುದು.

ಇದೇ ಸಮಯದಲ್ಲಿ, ಎಮರ್ಸನ್ ಕಾಲೇಜ್ ಪಾಲಿಂಗ್ ಸಂಸ್ಥೆ ನಡೆಸಿದ ಹೊಸ ಸಮೀಕ್ಷೆಯ ಪ್ರಕಾರ, ಓಹಿಯೋದಲ್ಲಿ ರಾಜ್ಯಪಾಲ ಹಾಗೂ ಯುಎಸ್ ಸೆನೆಟ್ ಚುನಾವಣೆಗಳು ತೀವ್ರ ಪೈಪೋಟಿಯ ಹಂತದಲ್ಲಿವೆ. ರಾಜ್ಯಪಾಲ ಸ್ಥಾನಕ್ಕೆ ಡೆಮಾಕ್ರಾಟ್ ಅಭ್ಯರ್ಥಿ ಆಮಿ ಆಕ್ಟನ್‌ಗೆ 46% ಬೆಂಬಲ ದೊರೆತಿದ್ದು, ರಿಪಬ್ಲಿಕನ್ ಅಭ್ಯರ್ಥಿ ವಿವೇಕ್ ರಾಮಸ್ವಾಮಿಗೆ 45% ಬೆಂಬಲ ಸಿಕ್ಕಿದೆ. ಶೇ. 9 ರಷ್ಟು ಮತದಾರರು ಇನ್ನೂ ಯಾವ ಪಕ್ಷಕ್ಕೆ ಬೆಂಬಲ ನೀಡಬೇಕೆಂಬುದನ್ನು ನಿರ್ಧರಿಸಿಲ್ಲ. ಮತದಾರರ ಲಿಂಗಾಧಾರಿತ ಅಭಿಪ್ರಾಯದಲ್ಲೂ ಬದಲಾವಣೆ ಕಂಡುಬಂದಿದೆ. ಆಗಸ್ಟ್‌ನಲ್ಲಿ ಮಹಿಳಾ ಮತದಾರರು ರಾಮಸ್ವಾಮಿ ಮತ್ತು ಆಕ್ಟನ್ ನಡುವೆ ಸಮಾನವಾಗಿ ಬೆಂಬಲ ನೀಡಿದ್ದರೂ, ನಾಲ್ಕು ತಿಂಗಳ ನಂತರ ಸ್ಪಷ್ಟವಾಗಿ ಆಕ್ಟನ್ ಪರ ವಾಲಿದ್ದಾರೆ. ಈಗ ಮಹಿಳೆಯರಲ್ಲಿ ಶೇ.56 ಆಕ್ಟನ್‌ರನ್ನು ಬೆಂಬಲಿಸುತ್ತಿದ್ದರೆ, ಶೇ. 37 ಮಾತ್ರ ವಿವೇಕ್‌ಗೆ ಬೆಂಬಲ ನೀಡುತ್ತಿದ್ದಾರೆ. ಪುರುಷ ಮತದಾರರಲ್ಲಿ ವಿವೇಕ್ ಮುಂಚೂಣಿಯಲ್ಲಿದ್ದು, ಶೇ. 55 ಪುರುಷರು ಅವರ ಪರವಾಗಿದ್ದಾರೆ.
ಯುವ ಮತದಾರರ ಕುರಿತ ಸಮೀಕ್ಷೆಯು ಕುತೂಹಲಕಾರಿ ಚಿತ್ರಣ ನೀಡುತ್ತದೆ. 2024ರ ಚುನಾವಣೆಯಲ್ಲಿ ಮತ ಹಾಕದವರು, ವಿಶೇಷವಾಗಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹೆಚ್ಚು ಪ್ರಮಾಣದಲ್ಲಿ ತಮ್ಮನ್ನು ರಿಪಬ್ಲಿಕನ್‌ಗಳೆಂದು ಗುರುತಿಸಿಕೊಂಡಿದ್ದಾರೆ. ಈ ವಯೋವರ್ಗದಲ್ಲಿ ಶೇ. 38 ಮಂದಿ ರಿಪಬ್ಲಿಕನ್‌ಗಳೆಂದು ಹೇಳಿಕೊಂಡರೆ, ಶೇ. 31 ಮಂದಿ ಸ್ವತಂತ್ರರು ಅಥವಾ ಡೆಮಾಕ್ರಟ್‌ಗಳಾಗಿದ್ದಾರೆ. ವಲಸೆ ನೀತಿಯ ಕುರಿತಾದ ಸಾರ್ವಜನಿಕ ಅಭಿಪ್ರಾಯದಲ್ಲೂ ಬದಲಾವಣೆ ಕಂಡುಬಂದಿದೆ. ಓಹಿಯೋದಲ್ಲಿ ದಾಖಲೆ ಇಲ್ಲದ ವಲಸಿಗರನ್ನು ದೊಡ್ಡ ಪ್ರಮಾಣದಲ್ಲಿ ದೇಶದಿಂದ ಹೊರಹಾಕುವುದು ರಾಜ್ಯಕ್ಕೆ ಒಳ್ಳೆಯದು ಎಂದು ಶೇ. 53 ರಷ್ಟು ಮತದಾರರು ನಂಬಿದ್ದಾರೆ. ಆದರೆ ಇದು ರಾಜ್ಯಕ್ಕೆ ಕೆಟ್ಟದಾಗಬಹುದು ಎಂದು ಶೇ.47 ಮಂದಿ ಅಭಿಪ್ರಾಯಪಟ್ಟಿದ್ದಾರೆ. ಆಗಸ್ಟ್‌ನೊಂದಿಗೆ ಹೋಲಿಸಿದರೆ, ಈ ಕ್ರಮ ಒಳ್ಳೆಯದು ಎನ್ನುವವರ ಪ್ರಮಾಣ 57ರಿಂದ 53ಕ್ಕೆ ಇಳಿದಿದ್ದು, ಕೆಟ್ಟದ್ದು ಎನ್ನುವವರ ಪ್ರಮಾಣ 43ರಿಂದ 47ಕ್ಕೆ ಏರಿದೆ.
ರಾಜ್ಯಪಾಲ ಮತ್ತು ಯುಎಸ್ ಸೆನೆಟ್ ಚುನಾವಣೆಗಳು, ಟ್ರಂಪ್ ಅವರ ನಾಯಕತ್ವ ರಿಪಬ್ಲಿಕನ್ ಮತಗಳನ್ನು ಸಂಪೂರ್ಣವಾಗಿ ಸೆಳೆಯುವಲ್ಲಿ ವಿಫಲವಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ವಿಶೇಷವಾಗಿ ಮಹಿಳಾ ಮತದಾರರು ರಾಮಸ್ವಾಮಿ ಬದಲು ಆಮಿ ಆಕ್ಟನ್ ಕಡೆ ವಾಲಿರುವುದು, ಟ್ರಂಪ್ ಶೈಲಿಯ ರಾಜಕೀಯಕ್ಕೆ ಮಹಿಳೆಯರಲ್ಲಿ ಹೆಚ್ಚುತ್ತಿರುವ ಅಸಮಾಧಾನವನ್ನು ಸೂಚಿಸುತ್ತದೆ. ಈ ವರ್ಗದ ಬೆಂಬಲ ಕುಸಿತವು ನೇರವಾಗಿ ಟ್ರಂಪ್ ಅವರ ಒಟ್ಟಾರೆ ಜನಪ್ರಿಯತೆಗೂ ಧಕ್ಕೆ ತರುತ್ತಿದೆ. ಯುವ ಮತದಾರರು ತಮ್ಮನ್ನು ರಿಪಬ್ಲಿಕನ್‌ಗಳೆಂದು ಗುರುತಿಸಿಕೊಂಡರೂ, ಮತದಾನದಲ್ಲಿ ಡೆಮಾಕ್ರಟ್‌ಗಳ ಪರ ಹೋಗುತ್ತಿರುವುದು, ಟ್ರಂಪ್ ರಾಜಕೀಯ ಭಾಷೆ ಮತ್ತು ನೀತಿಗಳು ಯುವಜನತೆಗೆ ಸಂಪೂರ್ಣವಾಗಿ ಹಿಡಿಸುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ. ವಲಸೆ ನೀತಿಯ ವಿಚಾರದಲ್ಲಿಯೂ ಬೆಂಬಲ ಕಡಿಮೆಯಾಗುತ್ತಿರುವುದು ಗಮನಾರ್ಹ. ದೊಡ್ಡ ಪ್ರಮಾಣದ ಗಡಿಪಾರು ಒಳ್ಳೆಯದು ಎನ್ನುವವರ ಪ್ರಮಾಣ ಇಳಿದಿರುವುದು, ಟ್ರಂಪ್ ಅವರ ಕಠಿಣ ವಲಸೆ ನಿಲುವು ಎಲ್ಲ ವರ್ಗಗಳಲ್ಲೂ ಒಪ್ಪಿಗೆಯಲ್ಲ ಎಂಬುದನ್ನು ತೋರಿಸುತ್ತದೆ. ಈ ಎಲ್ಲಾ ಅಂಶಗಳು ಸೇರಿ, ಓಹಿಯೋದಲ್ಲಿ ಟ್ರಂಪ್ ಅವರ ಜನಪ್ರಿಯತೆ ಕುಸಿಯುತ್ತಿರುವುದು ಕೇವಲ ವೈಯಕ್ತಿಕ ಅಸಮಾಧಾನವಲ್ಲ, ಬದಲಾಗಿ ಮತದಾರರ ಸಾಮಾಜಿಕ, ಲಿಂಗ ಮತ್ತು ತಲೆಮಾರಿನ ಮಟ್ಟದ ಬದಲಾವಣೆಗಳ ಪ್ರತಿಫಲ ಎನ್ನುವುದನ್ನು ಸ್ಪಷ್ಟಪಡಿಸುತ್ತವೆ.
ಭಾರತೀಯ ಜನಾಭಿಪ್ರಾಯದಲ್ಲಿ ಟ್ರಂಪ್ ಬಗ್ಗೆ ಒಪ್ಪಿಗೆಯೂ ಇದೆ, ಅಸಮಾಧಾನವೂ ಇದೆ. ಕೆಲವರು ಅವರನ್ನು ಭಾರತದ ಪರ ನಿಂತ ಬಲಿಷ್ಠ ನಾಯಕ ಎಂದು ಬಿಂಬಿಸುತ್ತಾರೆ. ಇನ್ನೂ ಕೆಲವರು ಅವರ ಅನಿಶ್ಚಿತ ನಿರ್ಧಾರಗಳು, ವಲಸೆ ನೀತಿಗಳು ಮತ್ತು ಇಸ್ಲಾಂ ವಿರೋಧಿ ಹೇಳಿಕೆಗಳ ಕಾರಣದಿಂದ ತಾತ್ಸಾರದಿಂದಲೂ ನೋಡುತ್ತಾರೆ. ಆದರೂ, ಈ ಅಭಿಪ್ರಾಯಗಳು ಅಮೆರಿಕದಂತೆ ಭಾರತದ ಆಂತರಿಕ ರಾಜಕೀಯವನ್ನು ಪ್ರಭಾವಿಸುವಷ್ಟು ಗಟ್ಟಿಯಾಗಿಲ್ಲ. ಟ್ರಂಪ್ ಅವರ ಜನಪ್ರಿಯತೆ ಮತ್ತು ಭಾರತದ ಪ್ರಧಾನಿ ಮೋದಿ ಅವರ ಪ್ರಭಾವಗಳ ನಡುವೆ ಪ್ರಮುಖ ಸಾಮ್ಯತೆಯೊಂದಿದೆ. ಅದು, ಇಬ್ಬರ ರಾಜಕೀಯವೂ ವ್ಯಕ್ತಿಕೇಂದ್ರಿತ ನಾಯಕತ್ವದ ಮೇಲೆ ನಿಂತಿರುವುದು. ಪಕ್ಷಕ್ಕಿಂತ ನಾಯಕನೇ ರಾಜಕೀಯದ ಕೇಂದ್ರಬಿಂದುವಾಗಿದ್ದು, ಅವರ ಶೈಲಿ, ಭಾಷೆ ಮತ್ತು ಬಲಿಷ್ಠ ನಾಯಕತ್ವದ ಚಿತ್ರಣವೇ ಜನಬೆಂಬಲವನ್ನು ರೂಪಿಸಿದೆ. ಟ್ರಂಪ್ ಅಮೆರಿಕದಲ್ಲಿ ಸಾಮಾನ್ಯ ಜನರ ಅಸಮಾಧಾನ ಮತ್ತು ಕೋಪವನ್ನು ಹಿಡಿದರೆ, ಮೋದಿ ಭಾರತದಲ್ಲಿ ರಾಷ್ಟ್ರಭಕ್ತಿ ಮತ್ತು ನಿರ್ಧಾರಾತ್ಮಕ ನಾಯಕತ್ವದ ಭಾವನೆಯನ್ನು ರಾಜಕೀಯ ಶಕ್ತಿಯಾಗಿ ಬಳಸಿದ್ದಾರೆ. ಈ ಭಾವನಾತ್ಮಕ ಸಂಪರ್ಕವೇ ಇಬ್ಬರಿಗೂ ಬಲವಾದ ಬೆಂಬಲ ನೀಡಿದೆ. ಸದ್ಯ ಈ ಜನಪ್ರಿಯತೆ ಎರಡೂ ದೇಶಗಳಲ್ಲಿ ಕುಸಿದಿರುವುದು ಸ್ಪಷ್ಟವಾಗಿದೆ.
ಇದನ್ನೂ ಓದಿ: ಟ್ರಂಪ್‌ಗೆ ಭಯಪಡುವ ಮೋದಿ, ಅಂಬಾನಿ-ಅದಾನಿಯ ‘ರಿಮೋಟ್ ಕಂಟ್ರೋಲ್’ನಲ್ಲಿದ್ದಾರೆ: ರಾಹುಲ್ ಗಾಂಧಿ
ಸಮೀಕ್ಷೆಗಳು ಸೂಚಿಸುವಂತೆ, ಡೊನಾಲ್ಡ್ ಟ್ರಂಪ್ ಅವರ ಜನಪ್ರಿಯತೆ ಕುಸಿತವು ಅಮೆರಿಕದ ಮತದಾರರ ಮನೋಭಾವದಲ್ಲಿ ನಡೆಯುತ್ತಿರುವ ಪರಿವರ್ತನೆಯ ಸೂಚನೆ. ಮಹಿಳೆಯರು, ಯುವಕರು ಮತ್ತು ಮಧ್ಯಮ ಮತದಾರರಲ್ಲಿ ಹೆಚ್ಚುತ್ತಿರುವ ಅಸಮಾಧಾನ, ಟ್ರಂಪ್ ಅವರ ವ್ಯಕ್ತಿಕೇಂದ್ರಿತ ರಾಜಕೀಯದ ಮಿತಿಗಳನ್ನು ಬಯಲಿಗೆ ತಂದಿದೆ. ಇದೇ ವೇಳೆ, ವಲಸೆ ಮತ್ತು ಆರ್ಥಿಕ ನೀತಿಗಳ ಕುರಿತ ಬದಲಾದ ಅಭಿಪ್ರಾಯಗಳು, ಅವರ ‘ಕಠಿಣ ನಿಲುವು’ಗಳಿಗೆ ಸಾರ್ವತ್ರಿಕ ಒಪ್ಪಿಗೆಯಿಲ್ಲ ಎಂಬುದನ್ನೂ ತೋರಿಸುತ್ತಿವೆ. ಇದು ಟ್ರಂಪ್‌ಗೆ ಮಾತ್ರ ಸೀಮಿತವಾಗಿರುವ ರಾಜಕೀಯ ಸಂಕೇತವಲ್ಲ. ಭಾರತದಲ್ಲಿಯೂ ಮೋದಿ ಅಲೆಯ ತೀವ್ರತೆ ಕಡಿಮೆಯಾಗುತ್ತಿರುವಂತೆ, ಅಲೆ ರಾಜಕೀಯದಿಂದ ಕಾರ್ಯಕ್ಷಮತೆ ಮತ್ತು ದೈನಂದಿನ ಬದುಕಿನ ಪ್ರಶ್ನೆಗಳತ್ತ ಮತದಾರರು ಮುಖಮಾಡುತ್ತಿರುವುದರ ಪ್ರತಿಬಿಂಬವಾಗಿದೆ. ಮುಂದಿನ ಚುನಾವಣೆಗಳಲ್ಲಿ, ನಾಯಕನ ಭಾವಚಿತ್ರಕ್ಕಿಂತ ಜನರ ಅನುಭವಗಳೇ ರಾಜಕೀಯ ಫಲಿತಾಂಶವನ್ನು ನಿರ್ಧರಿಸುವ ಕಾಲ ಆರಂಭವಾಗಿದೆ ಎಂಬುದಕ್ಕೆ ಈ ಬೆಳವಣಿಗೆಗಳು ಸ್ಪಷ್ಟ ಸೂಚನೆ ನೀಡುತ್ತವೆ.





