ತುರ್ತು ಅಧಿಕಾರವನ್ನು ಬಳಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಬಹುತೇಕ ಸುಂಕಗಳು ಕಾನೂನುಬಾಹಿರವಾಗಿವೆ ಎಂದು ಅಮೆರಿಕ ಫೆಡರಲ್ ಮೇಲ್ಮನವಿ ನ್ಯಾಯಾಲಯ ತೀರ್ಪು ನೀಡಿದೆ.
ಡೊನಾಲ್ಡ್ ಟ್ರಂಪ್ ಅವರು ಇದೇ ವರ್ಷದ ಏಪ್ರಿಲ್‌ನಲ್ಲಿ ಹಲವು ರಾಷ್ಟ್ರಗಳ ಮೇಲೆ ಮೊದಲ ಬಾರಿಗೆ ಸುಂಕವನ್ನು ವಿಧಿಸಿದ್ದರು. ಅದಾದ ಬಳಿಕ, ‘ಪ್ರತಿಸುಂಕ’ದ ಹೆಸರಿನಲ್ಲಿ ಚೀನಾ, ಕೆಡನಾ ಮತ್ತು ಮೆಕ್ಸಿಕೋ ವಿರುದ್ಧ ಸುಂಕವನ್ನು ಪರಿಷ್ಕರಿಸಿ, ಮತ್ತೊಂದು ಸುಂಕ ಪಟ್ಟಿಯನ್ನು ಜಾರಿಗೆ ತಂದಿದ್ದರು. ಈ ಎರಡೂ ಬಗೆಯ ಸುಂಕಗಳು ಅಕ್ರಮ ಎಂದು ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರುವ ಫೆಡರಲ್ ನ್ಯಾಯಾಲಯವು ಘೋಷಿಸಿದೆ.
“ಘೋಷಿತ ರಾಷ್ಟ್ರೀಯ ತುರ್ತು ಪರಿಸ್ಥಿತಿಗೆ ಪೂರಕವಾಗಿ ಹಲವು ಕ್ರಮಗಳನ್ನು ಕೈಗೊಳ್ಳಲು ಅಧ್ಯಕ್ಷರಿಗೆ ಶಾಸನಾತ್ಮಕ ಅಧಿಕಾರವನ್ನು ನೀಡಲಾಗಿದೆ. ಆದರೆ, ಈ ಶಾಸನಗಳು ಸುಂಕ ಅಥವಾ ತೆರಿಗೆಯನ್ನು ವಿಧಿಸುವ ಅಧಿಕಾರವನ್ನು ನೀಡಿಲ್ಲ. ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (ಐಇಇಪಿಎ) ನೀಡಿರುವ ಅಧಿಕಾರವನ್ನೂ ಮೀರಿ ಟ್ರಂಪ್ ವರ್ತಿಸುತ್ತಿದ್ದಾರೆ” ಎಂದು ನ್ಯಾಯಾಲಯವು ಹೇಳಿದೆ.
ಈ ಲೇಖನ ಓದಿದ್ದೀರಾ?: ಅಂಬಾನಿಯ ವಂತಾರ ಮೃಗಾಲಯದ ಕಾರ್ಯಾಚರಣೆ ತನಿಖೆಗೆ ಎಸ್‌ಐಟಿ ರಚನೆ
ನ್ಯಾಯಾಲಯದ ತೀರ್ಪು ಟ್ರಂಪ್ ಅವರು ಸುಂಕ ನೀತಿಗೆ ಬಲವಾದ ಪೆಟ್ಟುಕೊಟ್ಟಿದೆ. ನ್ಯಾಯಾಲಯದ ತೀರ್ಪನ್ನು ಟ್ರಂಪ್ ಅವರು ಅಮೆರಿಕದ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬಹುದು ಎಂದು ಹೇಳಲಾಗುತ್ತಿದೆ.
ತೀರ್ಪನ್ನು ಟೀಕಿಸಿರುವ ಟ್ರಂಪ್, “ತೀರ್ಪನ್ನು ಜಾರಿಗೊಳಿಸಿದರೆ, ದೇಶಕ್ಕೆ ಹಾನಿಕಾರಕವಾಗಲಿದೆ. ಇದು ಪಕ್ಷಪಾತದಿಂದ ಕೂಡಿರುವ ತೀರ್ಪು. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡಲಿದೆ” ಎಂದು ಹೇಳಿದ್ದಾರೆ.




