ಎಚ್1-ಬಿ ವೀಸಾ (H-1B) ಹೊಂದಲು $100,000 ಅಂದರೆ 88 ಲಕ್ಷ ರೂಪಾಯಿ ಶುಲ್ಕ ಪಾವತಿಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆಪ್ಟೆಂಬರ್ 19ರಂದು ಘೋಷಣೆ ಮಾಡಿದ್ದರು. ಇದೀಗ ಈ ಶುಲ್ಕವನ್ನು ಯಾರು ಪಾವತಿಸಬೇಕು ಎಂಬ ಕುರಿತಾಗಿ ಅಮೆರಿಕ ಮಾರ್ಗಸೂಚಿಗಳನ್ನು ಹೊರತಂದಿದೆ.
ಅಮೆರಿಕ ಎಚ್1-ಬಿ ವೀಸಾಗೆ $100,000 ಶುಲ್ಕ ವಿಧಿಸಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಈ ಸಂಬಂಧ ಟ್ರಂಪ್ ಆಡಳಿತದ ವಿರುದ್ಧ ಯುಎಸ್ ಚೇಂಬರ್ ಆಫ್ ಕಾಮರ್ಸ್ ಮೊಕದ್ದಮೆ ಹೂಡಿದೆ. ಈ ನಡುವೆ ಅಮೆರಿಕ ನವೀಕರಿಸಿದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಯಾರಿಗೆ ವೀಸಾ ಶುಲ್ಕ ವಿನಾಯಿತಿ, ಅನ್ವಯ?
ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳು(USCIS) ಭಾನುವಾರ ಹೊರಡಿಸಿದ ಮಾರ್ಗಸೂಚಿಯು H-1B ವೀಸಾ ಆಕಾಂಕ್ಷಿಗಳು ತಮ್ಮ ಪ್ರಸ್ತುತ ವೀಸಾವನ್ನು ಬದಲಾಯಿಸಲು ಅಥವಾ ಈಗಾಗಲೇ ಇರುವ ವೀಸಾವನ್ನು ವಿಸ್ತರಿಸಲು ಅಥವಾ ನವೀಕರಿಸಲು ಬಯಸಿದರೆ $100,000 ಶುಲ್ಕ ಪಾವತಿಯಿಂದ ವಿನಾಯಿತಿ ನೀಡುತ್ತವೆ. ಹಾಗೆಯೇ ಈಗಾಗಲೇ F-1 ವೀಸಾ ಹೊಂದಿರುವ ವಿದೇಶಿ ವಿದ್ಯಾರ್ಥಿಗಳು, L-1 ವೀಸಾ ಹೊಂದಿರುವವರಿಗೆ H-1B ವೀಸಾ ಅರ್ಜಿ ಸಲ್ಲಿಸುವಾಗ ಶುಲ್ಕ ವಿನಾಯಿತಿ ನೀಡಲಾಗುತ್ತದೆ.
ಇದನ್ನು ಓದಿದ್ದೀರಾ? ಅಮೆರಿಕ H-1B ವೀಸಾ ಶುಲ್ಕ ₹84 ಲಕ್ಷಕ್ಕೆ ಏರಿಸಿದ ಟ್ರಂಪ್; ಭಾರತದ ಮೇಲೆ ಗಂಭೀರ ಪರಿಣಾಮ
ಆದರೆ ಸೆಪ್ಟೆಂಬರ್ 21ರಿಂದ ಸಲ್ಲಿಸಲಾದ ಹೊಸ H-1B ವೀಸಾ ಅರ್ಜಿಗಳಿಗೆ, ಹಾಗೆಯೇ ಮಾನ್ಯ ವೀಸಾ ಇಲ್ಲದ ಮತ್ತು ಪ್ರಸ್ತುತ ಯುಎಸ್‌ನ ಹೊರಗಿರುವ H-1B ಅರ್ಜಿದಾರರಿಗೆ $100,000 ಶುಲ್ಕ ಅನ್ವಯಿಸುತ್ತದೆ. ಇನ್ನು USCIS ಈಗಾಗಲೇ ಹೊಸ H-1B ವೀಸಾ ಅರ್ಜಿಗಳ ಜೊತೆಗೆ ಶುಲ್ಕವನ್ನು ಪಾವತಿಸಲು ಪೋರ್ಟಲ್ ಅನ್ನು ತೆರೆದಿದೆ.
ಯುಎಸ್ ಆಡಳಿತವು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ವೀಸಾ ಶುಲ್ಕದಿಂದ ವಿನಾಯಿತಿ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ಮಾರ್ಗಸೂಚಿ ಈ ಬಗ್ಗೆ ಉಲ್ಲೇಖಿಸಿಲ್ಲ. ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್ ಈ ವಲಯದ ವಿದೇಶಿ ವೃತ್ತಿಪರರಿಗೆ $100,000 ಶುಲ್ಕವನ್ನು ಮನ್ನಾ ಮಾಡುವಂತೆ ಒತ್ತಾಯಿಸಿದೆ.





