ಇರಾನ್ ಮೇಲೆ ದಾಳಿ ಮಾಡಲು ಅಮೆರಿಕವು ಭಾರತದ ಬಂದರುಗಳನ್ನು ಬಳಸುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಹಲವು ಮಾಧ್ಯಮಗಳು ವರದಿ ಮಾಡಿವೆ. ಈ ವರದಿಗಳು ‘ಆಧಾರರಹಿತ’ ಎಂದಿರುವ ಭಾರತ, ಆರೋಪವನ್ನು ತಿರಸ್ಕರಿಸಿದೆ.
ಅಮೆರಿಕ ಮೂಲದ ‘ಒನ್ ಅಮೆರಿಕ ನ್ಯೂಸ್ ನೆಟ್‌ವರ್ಕ್’ಗೆ ನೀಡಿದ ಸಂದರ್ಶನದಲ್ಲಿ ಮಾಜಿ ಯುಎಸ್ ಸೇನಾ ಕರ್ನಲ್ ಡೌಗ್ಲಾಸ್ ಮ್ಯಾಕ್‌ಗ್ರೆಗರ್ ಅವರು ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕವು ಭಾರತೀಯ ನೌಕಾ ನೆಲೆಗಳನ್ನು ಬಳಸುತ್ತಿದೆ ಎಂದು ಹೇಳಿದ್ದಾರೆ.
“ನಮ್ಮ ಎಲ್ಲ ನೆಲೆಗಳು ನಾಶವಾಗಿವೆ. ನಮ್ಮ ಬಂದರು ನೆಲೆಗಳು ನಾಶವಾಗಿವೆ. ನಾವು ಭಾರತೀಯ ನೌಕಾ ನೆಲೆಗಳನ್ನು ಬಳಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ಅವರ ಈ ಹೇಳಿಕೆ ಹೊರಬಂದ ಬೆನ್ನಲ್ಲೇ, ಭಾರತೀಯ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ ನೀಡಿದೆ. ಮ್ಯಾಕ್‌ಗ್ರೆಗರ್ ಮತ್ತು ಒನ್ ಅಮೆರಿಕ ನ್ಯೂಸ್ ಮಾಡುತ್ತಿರುವ ಆರೋಪಗಳು ಸಂಪೂರ್ಣ ನಕಲಿ ಮತ್ತು ಸುಳ್ಳು ಎಂದು ಹೇಳಿದೆ. ‘ಇಂತಹ ಆಧಾರರಹಿತ ಮತ್ತು ಕಟ್ಟುಕಥೆಯ ಹೇಳಿಕೆಗಳ ವಿರುದ್ಧ ನಾವು ಎಚ್ಚರಿಕೆ ನೀಡುತ್ತೇವೆ” ಎಂದು ಹೇಳಿದೆ.
ಮಧ್ಯಪ್ರಾಚ್ಯದಲ್ಲಿನ ಸಂಘರ್ಷದ ಬಗ್ಗೆ ಭಾರತವು ಕಳವಳ ವ್ಯಕ್ತಪಡಿಸಿದೆ. ಎಲ್ಲ ಕಡೆಯವರು ಸಂಯಮವನ್ನು ಕಾಪಾಡಿಕೊಳ್ಳಲು, ಉಲ್ಬಣವನ್ನು ತಪ್ಪಿಸಲು ಹಾಗೂ ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡಲು ಒತ್ತಾಯಿಸಿದೆ.
ಈ ಲೇಖನ ಓದಿದ್ದೀರಾ?: ಇರಾಕ್, ಲಿಬಿಯಾ, ಸಿರಿಯಾ, ಅಫ್ಘಾನ್‌ನಲ್ಲಿ ಅಮೆರಿಕ ಮಾಡಿದ ಅನಾಹುತಗಳೇನು? ಇಲ್ಲಿದೆ ಓದಿ…
ಶನಿವಾರ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಆರಂಭಿಸಿದವು. ಭಾನುವಾರ, 86 ವರ್ಷದ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆಗೈದವು. ಇದಕ್ಕೆ ಪ್ರತಿಕ್ರಿಯೆಯಾಗಿ, ಇರಾನ್ ಕೂಡ ಇಸ್ರೇಲ್ ಮತ್ತು ಗಲ್ಫ್ ದೇಶಗಳಲ್ಲಿನ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ವರದಿಗಳ ಪ್ರಕಾರ, ಇರಾನ್‌ನಲ್ಲಿ ಇದುವರೆಗೆ 1,000ಕ್ಕೂ ಹೆಚ್ಚು ಜನರು ಮತ್ತು ಇಸ್ರೇಲ್‌ನಲ್ಲಿ ಹತ್ತಾರು ಜನರು ಸಾವನ್ನಪ್ಪಿದ್ದಾರೆ. ಯುದ್ಧದಲ್ಲಿ ಕನಿಷ್ಠ ಆರು ಅಮೆರಿಕ ಸೈನಿಕರು ಕೂಡ ಸಾವನ್ನಪ್ಪಿದ್ದಾರೆ.
ಮಂಗಳವಾರ ರಾತ್ರಿ, ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆಯ ಟಾರ್ಪಿಡೊ ಇರಾನ್ ಯುದ್ಧನೌಕೆಯನ್ನು ಮುಳುಗಿಸಿದೆ. ಇದರಿಂದಾಗಿ 87 ಜನರು ಸಾವನ್ನಪ್ಪಿದ್ದಾರೆ. ಎರಡನೇ ಮಹಾಯುದ್ಧದ ನಂತರ ಅಮೆರಿಕದ ಜಲಾಂತರ್ಗಾಮಿ ನೌಕೆ ಮೇಲ್ಮೈ ಹಡಗಿನ ಮೇಲೆ ದಾಳಿ ಮಾಡಿದ್ದು ಇದೇ ಮೊದಲು.
ಗುರುವಾರ ಯುದ್ಧವು ಆರನೇ ದಿನಕ್ಕೆ ಪ್ರವೇಶಿಸಿದೆ, ಉದ್ವಿಗ್ನತೆ ಕಡಿಮೆಯಾಗುವ ಯಾವುದೇ ಲಕ್ಷಣಗಳಿಲ್ಲ.




