ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ. ಇರಾನ್ ರಾಜಧಾನಿ ಟೆಹ್ರಾನ್‌ನಾದ್ಯಂತ ಇರುವ ಭದ್ರತಾ ಮತ್ತು ಸೇನಾ ನೆಲೆಗಳ ಮೇಲೆ ಇಸ್ರೇಲ್ ಸರಣಿ ದಾಳಿಗಳನ್ನು ನಡೆಸಿದ್ದರೆ, ಇತ್ತ ದುಬೈ ಮತ್ತು ಕತಾರ್‌ನಲ್ಲಿರುವ ಅಮೆರಿಕದ ಮಿಲಿಟರಿ ಹಾಗೂ ರಾಜತಾಂತ್ರಿಕ ನೆಲೆಗಳ ಮೇಲೆ ಇರಾನ್ ಪ್ರತಿದಾಳಿ ನಡೆಸಿದೆ.
ಟೆಹ್ರಾನ್‌ನಾದ್ಯಂತ ಡಜನ್‌ಗಟ್ಟಲೆ ಮಿಲಿಟರಿ ಗುರಿಗಳ ಮೇಲೆ ಇಸ್ರೇಲ್ ರಕ್ಷಣಾ ಪಡೆ ದಾಳಿ ಮಾಡಿದೆ ಎಂದು ಐಡಿಎಫ್‌ನ ಅರೇಬಿಕ್ ವಕ್ತಾರ ಅವಿಚಾಯ್ ಅದ್ರಾಯ್ ಪ್ರಕಟಿಸಿದ್ದಾರೆ. ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ನೊಂದಿಗೆ ಸಂಪರ್ಕ ಹೊಂದಿರುವ ಅರೆಸೈನಿಕ ಪಡೆ ‘ಬಸಿಜ್’ ಪ್ರಧಾನ ಕಚೇರಿಗಳು, ಕ್ಷಿಪಣಿ ಉಡಾವಣಾ ಕೇಂದ್ರಗಳು, ರಕ್ಷಣಾ ವ್ಯವಸ್ಥೆಗಳು ಹಾಗೂ ಸೇನಾ ಪೂರೈಕೆ ವಿಭಾಗಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ಇರಾನ್ ಆಡಳಿತದ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಐಡಿಎಫ್ ಎಚ್ಚರಿಸಿದೆ.
ಅಮೆರಿಕ ನೆಲೆಗಳ ಮೇಲೆ 40 ಕ್ಷಿಪಣಿಗಳ ಸುರಿಮಳೆ
ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಇರಾನ್‌ನ ಪ್ಯಾರಾಮಿಲಿಟರಿ ರೆವಲ್ಯೂಷನರಿ ಗಾರ್ಡ್ಸ್ ಬರೋಬ್ಬರಿ 40 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾವಣೆ ಮಾಡಿದೆ ಎಂದು ಇರಾನ್‌ನ ಸರ್ಕಾರಿ ಟೆಲಿವಿಷನ್ ತಿಳಿಸಿದೆ. ಇರಾಕ್‌ನ ಎರ್ಬಿಲ್, ಕುವೈತ್‌ನ ಎರಡು ಸೇನಾ ನೆಲೆಗಳು ಮತ್ತು ಈ ಭಾಗದಲ್ಲಿರುವ ಅಮೆರಿಕದ ಎರಡು ಯುದ್ಧನೌಕೆಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ ಎಂದು ಇರಾನ್ ಹೇಳಿಕೊಂಡಿದೆ.
ಕತಾರ್ ಮೇಲೆಯೂ ಇರಾನ್ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಕತಾರ್ ರಕ್ಷಣಾ ಸಚಿವಾಲಯ ತಿಳಿಸಿದೆ. ಈ ಪೈಕಿ ಒಂದನ್ನು ಕತಾರ್‌ನ ವಾಯು ರಕ್ಷಣಾ ವ್ಯವಸ್ಥೆ ತಡೆದು ಹೊಡೆದುರುಳಿಸಿದ್ದು, ಮತ್ತೊಂದು ಕ್ಷಿಪಣಿಯು ಅಮೆರಿಕದ ಅತಿದೊಡ್ಡ ವಾಯುನೆಲೆಯಾದ ‘ಅಲ್ ಉದೈದ್’ ಮೇಲೆ ಅಪ್ಪಳಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಕತಾರ್ ಸ್ಪಷ್ಟಪಡಿಸಿದೆ.
ಬೆಂಕಿಗಾಹುತಿಯಾದ ದುಬೈನಲ್ಲಿರುವ ಯುಎಸ್ ಕಾನ್ಸುಲೇಟ್
ಶನಿವಾರದಿಂದ ಅಮೆರಿಕ-ಇಸ್ರೇಲ್ ದಾಳಿಗಳು ಆರಂಭವಾದ ಬೆನ್ನಲ್ಲೇ, ಇರಾನ್ ಕೂಡ ಪ್ರತಿದಾಳಿ ಚುರುಕುಗೊಳಿಸಿದೆ. ದುಬೈನಲ್ಲಿರುವ ಅಮೆರಿಕದ ವಾಣಿಜ್ಯ ರಾಯಭಾರಿ ಕಚೇರಿ (ಕಾನ್ಸುಲೇಟ್) ಕಟ್ಟಡಕ್ಕೆ ಮಂಗಳವಾರ ಸಂಜೆ ಡ್ರೋನ್ ಅಪ್ಪಳಿಸಿದ್ದು, ಕಟ್ಟಡದಲ್ಲಿ ಬೆಂಕಿ ಮತ್ತು ದಟ್ಟ ಹೊಗೆ ಆವರಿಸಿರುವ ದೃಶ್ಯಗಳನ್ನು ‘ಬಿಸಿಬಿಸಿ ವೆರಿಫೈ’ ದೃಢಪಡಿಸಿದೆ.
ಇದನ್ನು ಓದಿದ್ದೀರಾ? ಫಿಫಾ ವಿಶ್ವಕಪ್ 2026 | ಯುದ್ಧಗಳ ಕಾರ್ಮೋಡದ ನಡುವೆ ಫುಟ್‌ಬಾಲ್ ಹಬ್ಬಕ್ಕೆ 100 ದಿನಗಳ ಕ್ಷಣಗಣನೆ
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಈ ದಾಳಿಯನ್ನು ಖಚಿತಪಡಿಸಿದ್ದು, ಕಾನ್ಸುಲೇಟ್ ಕಟ್ಟಡದ ಪಕ್ಕದ ಪಾರ್ಕಿಂಗ್ ಸ್ಥಳಕ್ಕೆ ಡ್ರೋನ್ ಅಪ್ಪಳಿಸಿದೆ ಎಂದಿದ್ದಾರೆ. “ನಮ್ಮ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಆದರೆ ನಮ್ಮ ರಾಯಭಾರಿ ಕಚೇರಿಗಳು ಭಯೋತ್ಪಾದಕ ಆಡಳಿತದ ನೇರ ದಾಳಿಗೆ ತುತ್ತಾಗಿವೆ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ರಷ್ಯಾದೊಂದಿಗೆ ಇರಾನ್ ಮಾತುಕತೆ
ಅಮೆರಿಕದ “ಸಮರ್ಥಿಸಲಾಗದ ಮಿಲಿಟರಿ ಆಕ್ರಮಣದ ಗಂಭೀರ ಪರಿಣಾಮಗಳ” ಕುರಿತು ಚರ್ಚಿಸಲು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಅವರು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದಾರೆ ಎಂದು ಇರಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ ‘IRNA’ ವರದಿ ಮಾಡಿದೆ.
ಶ್ರೀಲಂಕಾ ಬಳಿ ಇರಾನ್ ನೌಕೆ ಮುಳುಗಡೆ
ಶ್ರೀಲಂಕಾ ಕರಾವಳಿಯ ಸಮೀಪ ಇರಾನ್‌ನ ನೌಕೆಯೊಂದು ಮುಳುಗುತ್ತಿದ್ದು, ನಾವಿಕರ ರಕ್ಷಣಾ ಕಾರ್ಯಾಚರಣೆಗಾಗಿ ಶ್ರೀಲಂಕಾದ ನೌಕಾಪಡೆ ಮತ್ತು ವಾಯುಪಡೆಯನ್ನು ರವಾನಿಸಲಾಗಿದೆ. ಬೆಳಗಿನ ಜಾವ ‘IRIS Dena’ ನೌಕೆಯಿಂದ ತುರ್ತು ಸಂದೇಶ ಬಂದಿದ್ದು, ನೌಕೆಯಲ್ಲಿ 180 ಜನರಿದ್ದರು. ಗಾಯಗೊಂಡ 30 ನಾವಿಕರನ್ನು ಗಾಲೆ ಬಂದರಿನ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ವಿಜಿತಾ ಹೆರಾತ್ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. ನೌಕೆ ಮುಳುಗಲು ನಿಖರ ಕಾರಣ ತಿಳಿದುಬಂದಿಲ್ಲ. ಇದೂ ಕೂಡ ಅಮೆರಿಕ-ಇಸ್ರೇಲ್ ದಾಳಿಯ ಭಾಗವೇ ಎಂಬ ವಿರೋಧ ಪಕ್ಷದ ಸಂಸದರ ಪ್ರಶ್ನೆಗೆ ಸರ್ಕಾರದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.





