ವೆನೆಜುವೆಲಾದಲ್ಲಿ ಅಮೆರಿಕ ನಡೆಸಿದ ಮಿಲಿಟರಿ ಕಾರ್ಯಾಚರಣೆ ಮತ್ತು ಅಧ್ಯಕ್ಷ ನಿಕೋಲಸ್ ಮಡುರೊ ಅವರ ಬಂಧನದ ನಂತರ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಅಲ್ಲಿನ ಜನರ ಸುರಕ್ಷತೆಯೇ ನಮ್ಮ ಪ್ರಮುಖ ಆದ್ಯತೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರತಿಪಾದಿಸಿದ್ದಾರೆ.
ಮಂಗಳವಾರ ಲಕ್ಸೆಂಬರ್ಗ್‌ನಲ್ಲಿ ಮಾತನಾಡಿದ ಅವರು, ಬಿಕ್ಕಟ್ಟಿನಲ್ಲಿ ಭಾಗಿಯಾಗಿರುವ ಎಲ್ಲ ಪಕ್ಷಗಳು ಒಂದೆಡೆ ಕುಳಿತು ಮಾತುಕತೆ ನಡೆಸುವ ಮೂಲಕ ಶಾಂತಿ ಸ್ಥಾಪಿಸಬೇಕು. ವೆನೆಜುವೆಲಾ ಜನರ ಹಿತಾಸಕ್ತಿಯನ್ನು ಕಾಪಾಡುವಂತಹ ನಿರ್ಧಾರಕ್ಕೆ ಬರಬೇಕು ಎಂದು ಒತ್ತಾಯಿಸಿದರು.
”ವೆನೆಜುವೆಲಾದಲ್ಲಿನ ಬೆಳವಣಿಗೆಗಳ ಬಗ್ಗೆ ನಾವು ಈಗಾಗಲೇ ಹೇಳಿಕೆ ನೀಡಿದ್ದೇವೆ. ಅಲ್ಲಿ ನಡೆಯುತ್ತಿರುವ ಘಟನೆಗಳು ಸಹಜವಾಗಿಯೇ ಕಳವಳಕಾರಿಯಾಗಿವೆ. ಅಂತಿಮವಾಗಿ ಜನರ ಸುರಕ್ಷತೆ ಮುಖ್ಯವಾಗಿದ್ದು, ಸಂಬಂಧಪಟ್ಟವರು ಮಾತುಕತೆಯ ಮೂಲಕ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕು,” ಎಂದು ಜೈಶಂಕರ್ ತಿಳಿಸಿದರು.
ವೆನೆಜುವೆಲಾ ಜತೆ ಭಾರತ ಹಲವು ವರ್ಷಗಳಿಂದ ಉತ್ತಮ ಬಾಂಧವ್ಯ ಹೊಂದಿದೆ ಎಂದು ಸ್ಮರಿಸಿದ ಅವರು, “ಘಟನೆಗಳು ಯಾವುದೇ ತಿರುವು ಪಡೆದರೂ, ಅಲ್ಲಿನ ಜನರು ಸಂಕಷ್ಟದಿಂದ ಪಾರಾಗಬೇಕು ಎಂಬುದೇ ನಮ್ಮ ಬಯಕೆ,” ಎಂದು ಸ್ಪಷ್ಟಪಡಿಸಿದರು.
ಇದನ್ನು ಓದಿದ್ದೀರಾ? ವೆನೆಜುವೆಲಾ ಸಾರ್ವಭೌಮತೆಯ ಮೇಲೆ ಅಮೆರಿಕದ ‘ದರೋಡೆಕೋರ’ ದಾಳಿ: ಪ್ರಜಾಪ್ರಭುತ್ವದ ಮುಖವಾಡದಲ್ಲಿ ಸಂಪನ್ಮೂಲಗಳ ಲೂಟಿ
ಶನಿವಾರವಷ್ಟೇ ವೆನೆಜುವೆಲಾ ರಾಜಧಾನಿ ಕ್ಯಾರಕಾಸ್‌ನಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆಗಳು ಮತ್ತು ಕಾನೂನು ಜಾರಿ ಏಜೆನ್ಸಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಸೆರೆಹಿಡಿದು ದೇಶದಿಂದ ಹೊರಗೆ ಕರೆದೊಯ್ಯಲಾಗಿತ್ತು. ಈ ಹಠಾತ್ ಬೆಳವಣಿಗೆಯಿಂದಾಗಿ ಆ ದೇಶದಲ್ಲಿ ರಾಜಕೀಯ ಅಸ್ಥಿರತೆ ಮತ್ತು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಈ ಬೆಳವಣಿಗೆಯ ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡಿರುವ ಭಾರತದ ವಿದೇಶಾಂಗ ಸಚಿವಾಲಯ, “ವೆನೆಜುವೆಲಾದಲ್ಲಿನ ಇತ್ತೀಚಿನ ಬೆಳವಣಿಗೆಗಳು ತೀವ್ರ ಕಳವಳಕಾರಿ ವಿಷಯವಾಗಿದೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ,” ಎಂದು ತಿಳಿಸಿದೆ.
ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲ ಪಕ್ಷಗಳು ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಭಾರತ ಕರೆ ನೀಡಿದೆ. ಅಲ್ಲದೆ, ಕ್ಯಾರಕಾಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯವಿರುವ ಎಲ್ಲ ನೆರವು ನೀಡಲಿದೆ ಎಂದು ಸಚಿವಾಲಯ ಭರವಸೆ ನೀಡಿದೆ.





