ರಷ್ಯಾದಿಂದ ಭಾರತ ತೈಲ ಆಮದು ಮಾಡುವುದನ್ನು ನಿರ್ಬಂಧಿಸುವ ಸಲುವಾಗಿ ಭಾರತದ ಸರಕುಗಳ ಮೇಲೆ ವಿಧಿಸಿದ್ದ ಶೇಕಡ 25ರ ವಿಶೇಷ ಸುಂಕವನ್ನು ರದ್ದುಪಡಿಸುವ ಕಾರ್ಯಾದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಮಾಡಿದ್ದಾರೆ ಎಂದು ಶ್ವೇತಭವನ ಪ್ರಕಟಿಸಿದೆ.
ಧೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ಭಾರತ ಹಾಗೂ ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವನ್ನು ಉಭಯ ದೇಶಗಳು ಅಂತಿಮಪಡಿಸಿದ ಬಳಿಕ ಟ್ರಂಪ್ ಈ ಕಾರ್ಯಾದೇಶಕ್ಕೆ ಸಹಿ ಮಾಡಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವ ಮೂಲಕ ಭಾರತ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತ ಪರೋಕ್ಷವಾಗಿ ರಷ್ಯಾಗೆ ನೆರವಾಗುತ್ತಿದೆ ಎಂದು ಟ್ರಂಪ್ ಆಪಾದಿಸಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಜನಪ್ರತಿನಿಧಿಗಳ ಘನತೆ ಇಲ್ಲದ ಮಾತಿಗೆ ಲಗಾಮು ಬೀಳಬೇಕು
ಭಾರತದ ವಿರುದ್ಧ ವಿಧಿಸಿರುವ ಶೇಕಡ 50ರ ಸುಂಕವನ್ನು 18ಕ್ಕೆ ಇಳಿಸುವುದಾಗಿ ಟ್ರಂಪ್ ಈ ವಾರದ ಆರಂಭದಲ್ಲಿ ಪ್ರಕಟಿಸಿದ್ದರು. ಭಾರತ ರಷ್ಯಾದಿಂದ ತೈಲ ಖರೀದಿ ಸ್ಥಗಿತಗೊಳಿಸಲು ಒಪ್ಪಿಕೊಂಡಿತ್ತು ಮತ್ತು ಹಲವು ವ್ಯಾಪಾರ ತಡೆಗಳನ್ನು ತೆರವುಗೊಳಿಸಿತ್ತು.
ಇದೀಗ ರಷ್ಯಾದಿಂದ ತೈಲ ಖರೀದಿಸುವುದಕ್ಕೆ ಸಂಬಂಧಿಸಿದಂತೆ ಭಾರತದ ಮೇಲೆ ವಿಧಿಸಿದ್ದ ಹೆಚ್ಚುವರಿ ಸುಂಕವನ್ನು ರದ್ದುಪಡಿಸಲಾಗಿದೆ. ಅಮೆರಿಕ ವಿಧಿಸಿದ ಶೇಕಡ 25ರ ಪ್ರತಿಸುಂಕದ ಮೇಲೆ ಈ ಸುಂಕ ವಿಧಿಸಲಾಗಿತ್ತು ಎಂದು ಶ್ವೇತಭವನ ಸ್ಪಷ್ಟಪಡಿಸಿದೆ. ಭಾರತವು ರಷ್ಯಾದಿಂದ ಅತ್ಯಧಿಕ ತೈಲ ಖರೀದಿ ಮಾಡುವ ರಾಷ್ಟ್ರವಾಗಿದ್ದು, ಧೀರ್ಘಾವಧಿ ಒಪ್ಪಂದಗಳ ಮೂಲಕ ಒಟ್ಟು ಬೇಡಿಕೆಯ ಶೇಕಡ 90ರಷ್ಟು ಪಾಲನ್ನು ರಷ್ಯಾದಿಂದ ಖರೀದಿಸುತ್ತಿದೆ.





