ದಕ್ಷಿಣ ಅಮೆರಿಕದ ರಾಷ್ಟ್ರವಾದ ವೆನೆಜುವೆಲಾ ಮೇಲೆ ನಸುಕಿನ ಜಾವ ಅಮೆರಿಕ ಸೇನೆ ಬೃಹತ್ ಪ್ರಮಾಣದ ದಾಳಿ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮದುರೊ ಹಾಗೂ ಅವರ ಪತ್ನಿಯನ್ನು ಸೆರೆಹಿಡಿದು, ದೇಶದಿಂದ ಹೊರಗೆ ಕರೆದೊಯ್ಯಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಈ ಕುರಿತು ‘ಟ್ರೂತ್ ಸೋಶಿಯಲ್’ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಟ್ರಂಪ್, “ಅಮೆರಿಕ ಸಂಯುಕ್ತ ಸಂಸ್ಥಾನವು ವೆನೆಜುವೆಲಾ ಹಾಗೂ ಅದರ ನಾಯಕನ ವಿರುದ್ಧ ಬೃಹತ್ ಪ್ರಮಾಣದ ದಾಳಿಯನ್ನು ಯಶಸ್ವಿಯಾಗಿ ನಡೆಸಿದೆ. ಅಧ್ಯಕ್ಷ ನಿಕೋಲಸ್ ಮದುರೊ ಮತ್ತು ಅವರ ಪತ್ನಿಯನ್ನು ಬಂಧಿಸಿ ದೇಶದಿಂದ ಸ್ಥಳಾಂತರಿಸಲಾಗಿದೆ” ಎಂದು ತಿಳಿಸಿದ್ದಾರೆ.
ಮದುರೊ ಅವರು ಅಧಿಕಾರದಿಂದ ಕೆಳಗಿಳಿಯುವಂತೆ ಒತ್ತಡ ಹೇರಲು ಅಮೆರಿಕ ಹಲವು ತಿಂಗಳುಗಳಿಂದ ಪ್ರಯತ್ನಿಸುತ್ತಿತ್ತು. ಜೊತೆಗೆ ವಲಯದಲ್ಲಿ ತನ್ನ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಿಸಿತ್ತು. ಇದರ ಬೆನ್ನಲ್ಲೇ ಈ ಹಠಾತ್ ಬೆಳವಣಿಗೆ ನಡೆದಿದೆ.
ಬೆಚ್ಚಿಬಿದ್ದ ರಾಜಧಾನಿ
ಶನಿವಾರ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ (ಸ್ಥಳೀಯ ಕಾಲಮಾನ) ರಾಜಧಾನಿ ಕಾರಾಕಸ್‌ನಲ್ಲಿ ಭಾರೀ ಸ್ಫೋಟದ ಸದ್ದುಗಳು ಕೇಳಿಸಿವೆ. ಆಕಾಶದಲ್ಲಿ ಯುದ್ಧ ವಿಮಾನಗಳ ಹಾರಾಟ ಮತ್ತು ದಟ್ಟ ಹೊಗೆ ಆವರಿಸಿದ್ದನ್ನು ಕಂಡು ಜನರು ಭಯಭೀತರಾಗಿದ್ದಾರೆ. ಪ್ರಮುಖ ಸೇನಾ ನೆಲೆಯ ಸಮೀಪವಿರುವ ನಗರದ ದಕ್ಷಿಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಫೋಟದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಾದಕ ವಸ್ತು ಉತ್ಪಾದನೆಗಿಳಿದ ಹೊರರಾಜ್ಯ ಮಾಫಿಯಾ ಗ್ಯಾಂಗ್; ಕರ್ನಾಟಕದ ಕಳಂಕ!
ಸ್ಫೋಟದ ವರದಿಗಳು ಬರುತ್ತಿದ್ದಂತೆಯೇ ವೆನೆಜುವೆಲಾದಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ಎಚ್ಚರಿಕೆ ನೀಡಿದ್ದು, ಜನರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಸೂಚಿಸಿದೆ.
ಇರಾನ್ ಖಂಡನೆ
ಅಮೆರಿಕದ ಈ ನಡೆಯನ್ನು ಇರಾನ್ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದ್ದು, “ಇದು ವೆನೆಜುವೆಲಾದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಮೇಲಿನ ಅಮೆರಿಕದ ಮಿಲಿಟರಿ ದಾಳಿ” ಎಂದು ಕಿಡಿಕಾರಿದೆ. ಸದ್ಯದ ಮಟ್ಟಿಗೆ ವೆನೆಜುವೆಲಾದ ವಿರೋಧ ಪಕ್ಷಗಳು ಈ ಘಟನೆಯ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.





