ದಕ್ಷಿಣ ಅಮೆರಿಕದ ರಾಷ್ಟ್ರ ವೆನೆಜುವೆಲಾದ ರಾಜಧಾನಿ ಕಾರಕಾಸ್ ಮೇಲೆ ಅಮೆರಿಕದ ಸೇನಾಪಡೆಗಳು ಇಂದು ನುಸುಕಿನ ಜಾವ ಕ್ಷಿಪಣಿ ಮತ್ತು ವಾಯುದಾಳಿ ನಡೆಸಿವೆ. ಅಮೆರಿಕದ ಈ ‘ಗಂಭೀರ ಮಿಲಿಟರಿ ಆಕ್ರಮಣ’ದ ಬೆನ್ನಲ್ಲೇ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮದುರೊ ದೇಶದಲ್ಲಿ ‘ರಾಷ್ಟ್ರೀಯ ತುರ್ತು ಪರಿಸ್ಥಿತಿ’ ಘೋಷಿಸಿದ್ದಾರೆ.
ಶನಿವಾರ ನಸುಕಿನ 2 ಗಂಟೆಯ ಸುಮಾರಿಗೆ (ಸ್ಥಳೀಯ ಕಾಲಮಾನ) ರಾಜಧಾನಿ ಕಾರಕಾಸ್‌ನಲ್ಲಿ ಯುದ್ಧ ವಿಮಾನಗಳು ಹಾರಾಟ ನಡೆಸಿದ ಶಬ್ದದೊಂದಿಗೆ ಕನಿಷ್ಠ ಏಳು ಭಾರಿ ಸ್ಫೋಟಗಳು ಸಂಭವಿಸಿವೆ ಎಂದು ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ನಾಗರಿಕ ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ವೆನೆಜುವೆಲಾ ಸರ್ಕಾರ ಆರೋಪಿಸಿದೆ.
ಈ ಸ್ಫೋಟಗಳ ಬಗ್ಗೆ ಶ್ವೇತಭವನ ಅಥವಾ ಪೆಂಟಗನ್ ತಕ್ಷಣಕ್ಕೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಅಮೆರಿಕದ ಪ್ರಮುಖ ಮಾಧ್ಯಮಗಳಾದ ‘ಸಿಬಿಎಸ್ ನ್ಯೂಸ್’ ಮತ್ತು ‘ಫಾಕ್ಸ್ ನ್ಯೂಸ್’ ವರದಿಗಳ ಪ್ರಕಾರ, ಟ್ರಂಪ್ ಆಡಳಿತದ ಅಧಿಕಾರಿಗಳು ಅಮೆರಿಕದ ಸೇನೆ ಈ ದಾಳಿಯಲ್ಲಿ ಭಾಗಿಯಾಗಿರುವುದನ್ನು ಖಚಿತಪಡಿಸಿದ್ದಾರೆ.
ದಾಳಿಗೂ ಮುನ್ನವೇ, ‘ಮುಂದುವರಿದಿರುವ ಮಿಲಿಟರಿ ಚಟುವಟಿಕೆ’ಗಳ ಕಾರಣವನ್ನು ನೀಡಿ ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ), ವೆನೆಜುವೆಲಾ ಮತ್ತು ಕ್ಯುರಾಕೊ ದ್ವೀಪದ ವಾಯುಪ್ರದೇಶದಲ್ಲಿ ಅಮೆರಿಕದ ವಾಣಿಜ್ಯ ಮತ್ತು ಖಾಸಗಿ ವಿಮಾನಗಳ ಹಾರಾಟವನ್ನು ನಿಷೇಧಿಸಿತ್ತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಾದಕ ವಸ್ತು ಉತ್ಪಾದನೆಗಿಳಿದ ಹೊರರಾಜ್ಯ ಮಾಫಿಯಾ ಗ್ಯಾಂಗ್; ಕರ್ನಾಟಕದ ಕಳಂಕ!
‘ಬೀದಿಗಿಳಿಯಿರಿ’: ಮದುರೊ ಕರೆ
ದಾಳಿಯನ್ನು ‘ಸಾಮ್ರಾಜ್ಯಶಾಹಿ ಆಕ್ರಮಣ’ ಎಂದು ಕರೆದಿರುವ ಮದುರೊ ಸರ್ಕಾರ, ದೇಶದ ಸಾರ್ವಭೌಮತೆಯನ್ನು ರಕ್ಷಿಸಲು ಜನರನ್ನು ಬೀದಿಗಿಳಿದು ಪ್ರತಿಭಟಿಸುವಂತೆ ಕರೆ ನೀಡಿದೆ. “ನಮ್ಮ ನೆಲ ಮತ್ತು ಜನರ ವಿರುದ್ಧ ಅಮೆರಿಕ ಸರ್ಕಾರ ನಡೆಸಿದ ಈ ಹೇಯ ಕೃತ್ಯವನ್ನು ನಾವು ಖಂಡಿಸುತ್ತೇವೆ. ರಾಷ್ಟ್ರೀಯ ರಕ್ಷಣಾ ಯೋಜನೆಗಳನ್ನು ಜಾರಿಗೊಳಿಸಲು ಆದೇಶಿಸಲಾಗಿದೆ,” ಎಂದು ವೆನೆಜುವೆಲಾ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಕಾರಣವೇನು?
ಅಮೆರಿಕವು ಕಳೆದ ಕೆಲವು ತಿಂಗಳುಗಳಿಂದ ಕೆರಿಬಿಯನ್ ಸಮುದ್ರದಲ್ಲಿ ತನ್ನ ಸೇನಾ ಜಮಾವಣೆಯನ್ನು ಹೆಚ್ಚಿಸಿತ್ತು. ಮಾದಕ ದ್ರವ್ಯ ಕಳ್ಳಸಾಗಣೆ (ನಾರ್ಕೋ-ಟೆರರಿಸಂ) ಆರೋಪದಡಿ ಅಧ್ಯಕ್ಷ ನಿಕೋಲಸ್ ಮದುರೊ ಅವರನ್ನು ಅಮೆರಿಕ ಗುರಿಯಾಗಿಸಿಕೊಂಡಿದೆ. ಕಳೆದ ವಾರವಷ್ಟೇ ವೆನೆಜುವೆಲಾದ ಡಾಕಿಂಗ್ ಪ್ರದೇಶವೊಂದರ ಮೇಲೆ ಸಿಐಎ (CIA) ಡ್ರೋನ್ ದಾಳಿ ನಡೆಸಿತ್ತು. ವೆನೆಜುವೆಲಾದಲ್ಲಿರುವ ಬೃಹತ್ ತೈಲ ನಿಕ್ಷೇಪಗಳ ಮೇಲೆ ಹಿಡಿತ ಸಾಧಿಸಲು ಮತ್ತು ಸರ್ಕಾರವನ್ನು ಬದಲಾಯಿಸಲು ಅಮೆರಿಕ ಈ ಸಂಚು ರೂಪಿಸಿದೆ ಎಂದು ಮದುರೊ ಗುರುವಾರವಷ್ಟೇ ಆರೋಪಿಸಿದ್ದರು.
ನೆರೆ ರಾಷ್ಟ್ರದ ಖಂಡನೆ
ವೆನೆಜುವೆಲಾ ಮೇಲಿನ ಅಮೆರಿಕದ ದಾಳಿಯನ್ನು ನೆರೆಯ ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೋ ತೀವ್ರವಾಗಿ ಖಂಡಿಸಿದ್ದಾರೆ. ಇದೇ ವೇಳೆ, ವೆನೆಜುವೆಲಾದ ವಿರೋಧ ಪಕ್ಷಗಳು ದಾಳಿಯ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
“ಇಡೀ ನೆಲವೇ ಅದುರಿದಂತಾಯಿತು. ಇದು ಭಯಾನಕವಾಗಿತ್ತು. ನಾವು ಸ್ಫೋಟದ ಸದ್ದು ಮತ್ತು ವಿಮಾನಗಳ ಹಾರಾಟವನ್ನು ಕೇಳಿದೆವು. ಗಾಳಿ ಬಂದು ಅಪ್ಪಳಿಸಿದ ಅನುಭವವಾಯಿತು,” ಎಂದು ಕಾರ್ಮೆನ್ ಹಿಡಾಲ್ಗೊ ಎಂಬ 21 ವರ್ಷದ ಪ್ರತ್ಯಕ್ಷದರ್ಶಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.





