ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೆನೆಜುವೆಲಾ ಮೇಲಿನ ವೈಮಾನಿಕ ದಾಳಿ ಬಳಿಕ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಪತ್ನಿ ಸಿಲಿಯಾ ಪ್ಲೋರ್ಸ್ ಅವರನ್ನು ಶುಕ್ರವಾರ ಮಧ್ಯರಾತ್ರಿ ಸೆರೆ ಹಿಡಿದಿದ್ದಾರೆ. ‘ವೆನೆಜುವೆಲಾ ಅಧ್ಯಕ್ಷ ಮತ್ತು ಅವರ ಪತ್ನಿಯನ್ನು ವಶಕ್ಕೆ ಪಡೆದು ದೇಶದಿಂದ ಹೊರಕ್ಕೆ ಹಾಕಿದ್ದೇವೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಟ್ರುಥ್ ಸೋಷಿಯಲ್’ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
ಸೆರೆಹಿಡಿದು ಹಲವು ಗಂಟೆಗಳ ನಂತರ, ಯುಎಸ್ಎಸ್ ಐವೊ ಜಿಮಾ ಹಡಗಿನಲ್ಲಿರುವ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಮೊದಲ ಫೋಟೋವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಿಡುಗಡೆ ಮಾಡಿದ್ದಾರೆ. ಕೈಕೋಳ ಹಾಕಿ ಕಣ್ಣುಗಳಿಗೆ ಬಟ್ಟೆ ಕಟ್ಟಿರುವ ಸ್ಥಿತಿಯಲ್ಲಿ ಅಮೆರಿಕದ ಯುದ್ಧನೌಕೆಯಲ್ಲಿ ನಿಂತಿರುವ ಮಡುರೊ ಅವರ ಈ ಚಿತ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ವೆನೆಜುವೆಲಾದ ಮೇಲೆ ಸರಣಿ ಸ್ಫೋಟಗಳನ್ನು ನಡೆಸಿದ ಅಮೆರಿಕವು, ವೆನೆಜುವೆಲಾ ರಾಜಧಾನಿ ಕ್ಯಾರಕಾಸ್ನಲ್ಲಿ ವಿದ್ಯುತ್ ಕಡಿತಗೊಳಿಸಿತ್ತು. ಹಲವು ಯುದ್ಧ ವಿಮಾನಗಳನ್ನು ಬಳಸಿ ದಾಳಿ ನಡೆಸಿತ್ತು. ಈ ದಾಳಿಯಿಂದ ರಾಜಧಾನಿಯ ದಕ್ಷಿಣ ಭಾಗದಲ್ಲಿ ದಟ್ಟವಾದ ಹೊಗೆ ಅವರಿಸಿದೆ. ಹೊಗೆಯು ಮುಗಿಲೆತ್ತರಕ್ಕೆ ತಲುಪುತ್ತಿದ್ದಂತೆ ಜನರು ಭಯಭೀತರಾಗಿ ಮನೆಗಳಿಂದ ಹೊರಗಡೆ ಓಡಿ ಬಂದಿದ್ದಾರೆ. ಕನಿಷ್ಟ 30 ನಿಮಿಷಗಳು ವಾಯುದಾಳಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇವೆಲ್ಲ ದೃಶ್ಯಗಳು ಹರಿದಾಡುತ್ತಿವೆ. ‘ಅಮೆರಿಕದ ಕಾನೂನು ಜಾರಿ ಸಂಸ್ಥೆಯ ಸಹಯೋಗದೊಂದಿಗೆ ಕಾರ್ಯಚರಣೆ ನಡೆಸಲಾಗಿದೆ’ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ : ಪುಟ್ಟ ವೆನೆಜುವೆಲಾ ಮೇಲೆ ದೈತ್ಯರ ದಾಳಿ: ಕೊಕೇನ್‌ಗಾಗಿಯಲ್ಲ, ಕ್ರೂಡ್ ಆಯಿಲ್‌ಗಾಗಿ!
‘ಮಡುರೊ ಅವರನ್ನು ವೆನೆಜುವೆಲಾದ ‘ಭದ್ರ ಕೋಟೆ’ಯಿಂದ ಸೆರೆ ಹಿಡಿಯಲಾಗಿದೆ. ಅಲ್ಲಿಂದ ಅವರನ್ನು ಹೆಲಿಕಾಪ್ಟರ್ ಮೂಲಕ ಅಮೆರಿಕದ ಸೇನೆಯ ಹಡಗಿಗೆ ಕರೆದುಕೊಂಡು ಬರಲಾಗಿದೆ. ಅಲ್ಲಿಂದ ವಿಚಾರಣೆಗಾಗಿ ನ್ಯೂಯಾರ್ಕ್ ಗೆ ಕರೆದೊಯ್ಯಲಾಗಿದೆ. ಈ ಕಾರ್ಯಚರಣೆಯಲ್ಲಿ ಅಮೆರಿಕದ ಸೈನಿಕರಿಗೆ ಯಾವುದೇ ಜೀವಹಾನಿ ಆಗಿಲ್ಲ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆಯಷ್ಟೇ. ಒಟ್ಟಾರೆ ಕಾರ್ಯಚರಣೆ ಅದ್ಭುತವಾಗಿ ನಡೆಯಿತು’ ಎಂದು ಟ್ರಂಪ್ ಹೇಳಿದ್ದಾರೆ.
‘ನಿಕೊಲಸ್ ಮಡುರೊ ಅಂತರರಾಷ್ಟ್ರೀಯ ಮಾದಕ ವಸ್ತು ಕಳ್ಳಸಾಗಾಣಿಕೆ ಜಾಲದ ಪ್ರಮುಖ ಸೂತ್ರಧಾರ’ ಎಂದು ಅಮೆರಿಕ ಆರೋಪಿಸಿ ದಾಳಿ ನಡೆಸಲಾಗಿದೆ. ಆದರೆ ವೆನೆಜುವೆಲಾ ಈ ಆರೋಪವನ್ನು ತಳ್ಳಿಹಾಕಿದ್ದು, ‘ಅಮೆರಿಕವು ದೇಶದ ಭಾರಿ ತೈಲ ನಿಕ್ಷೇಪದ ಮೇಲೆ ಕಣ್ಣಿಟ್ಟಿದೆ. ಮಡುರೊ ಅವರನ್ನು ಅಪಹರಿಸಿ, ದೇಶದಲ್ಲಿ ರಾಜಕೀಯ ಅಸ್ಥಿರತೆ ಸೃಷ್ಟಿಸಲು ಯತ್ನಿಸುತ್ತಿದೆ’ ಎಂದು ಆರೋಪಿಸಿದೆ.
ಹಂಗಾಮಿ ಅಧ್ಯಕ್ಷರ ನೇಮಕ
ಅಧ್ಯಕ್ಷ ನಿಕೊಲಸ್ ಮಡುರೊ ಅವರನ್ನು ಅಮೆರಿಕ ಸೆರೆ ಹಿಡಿದ ನಂತರ ವೆನೆಜುವೆಲಾದ ಸುಪ್ರೀಂ ಕೋರ್ಟ್ ಭಾನುವಾರ ಉಪಾಧ್ಯಕ್ಷೆ ‘ಡೆಲ್ಸಿ ರೊಡ್ರಿಗಸ್’ ಅವರಿಗೆ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವಂತೆ ನಿರ್ದೇಶನ ನೀಡಿದೆ.

ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿರುವ ವೆನೆಜುವೆಲಾದಲ್ಲಿ, ‘ಸರ್ಕಾರದ ಆಡಳಿತ ಮತ್ತು ಅಧ್ಯಕ್ಷರ ಅನುಪಸ್ಥಿತಿಯ ಸಂದರ್ಭದಲ್ಲಿ ಸಾರ್ವಭೌಮತ್ವದ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಅನ್ವಯವಾಗುವ ಕಾನೂನು ಚೌಕಟ್ಟನ್ನು ನಿರ್ಧರಿಸಲು ಉದ್ದೇಶಿಸಿರುವುದಾಗಿದೆ’ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಅಮೆರಿಕದ ದಾಳಿಗೆ ಪ್ರಮುಖ ಕಾರಣ
ಅಮೆರಿಕ ದಾಳಿ ನಡೆಸಲು ಮೂರು ಕಾರಣಗಳನ್ನು ನೀಡಿದೆ. ವಲಸೆ, ಮಾದಕವಸ್ತು ಮತ್ತು ಮಾದಕ ವಸ್ತು ಭಯೋತ್ಪಾದನೆಯನ್ನು ವೆನೆಜುವೆಲಾ ನಡೆಸುತ್ತಿದೆ ಎಂದು ಆರೋಪಿಸಿದೆ. ‘2013 ರಿಂದ ಈಚೆಗೆ ವೆನೆಜುವೆಲಾದ ಸುಮಾರು 80 ಲಕ್ಷದಷ್ಟು ವಲಸಿಗರು ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿದ್ದಾರೆ. ಅಧ್ಯಕ್ಷ ಮಡುರೊ ತನ್ನ ದೇಶದ ಕೈದಿಗಳನ್ನು ಅಮೆರಿಕಕ್ಕೆ ವಲಸೆ ಹೋಗುವಂತೆ ಒತ್ತಾಯಪಡಿಸುತ್ತಿದ್ದು, ಅಲ್ಲಿನ ಜೈಲುಗಳನ್ನು ಖಾಲಿ ಮಾಡಿಸುತ್ತಿದ್ದಾರೆ’ ಎಂದು ಟ್ರಂಪ್ ದೂರಿದ್ದಾರೆ.
ಮಾದಕವಸ್ತುಗಳ ಕಳ್ಳಸಾಗಣೆಯೇ ವೆನೆಜುವೆಲಾ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರಮುಖ ಕಾರಣ ಎನ್ನಲಾಗಿದೆ. ಅಮೆರಿಕಕ್ಕೆ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುವ ಮೂಲಕ ಮಾದಕವಸ್ತು ಕಾರ್ಟೆಲ್ ಅನ್ನು ಮಡುರೊ ಮುನ್ನಡೆಸುತ್ತಿದ್ದಾರೆ ಎಂದು ಅಮೆರಿಕ ಬಹಳ ಹಿಂದಿನಿಂದಲೂ ಆರೋಪಿಸುತ್ತಿದೆ, ಆದರೆ ಅವರು ಈ ಆರೋಪವನ್ನು ಪದೇ ಪದೇ ನಿರಾಕರಿಸಿದ್ದಾರೆ.

ಕೆರಿಬಿಯನ್ ಸಮುದ್ರ ಮತ್ತು ಪೂರ್ವ ಪೆಸಿಫಿಕ್ ಸಾಗರದ ಮೂಲಕ ನಡೆಯುವ ಮಾದಕ ವಸ್ತುಗಳ ಕಳ್ಳಸಾಗಣೆ ತಡೆಯಲು ಅಮೆರಿಕವು ಸೆಪ್ಟೆಂಬರ್‌ನಿಂದಲೇ ದಾಳಿ ನಡೆಸುತ್ತಿದೆ. ಇದುವರೆಗೆ ಈ ದಾಳಿಯಲ್ಲಿ 115 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅಮೆರಿಕದ ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿಯು (ಸಿಐಎ) ಕಳೆದ ವಾರ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ವೆನೆಜುವೆಲಾದ ಬೋಟ್ ಗಳನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆಸಿತ್ತು.
ದಾಳಿಯನ್ನು ಖಂಡಿಸಿದ ಪ್ರಮುಖ ದೇಶಗಳು
‘ಅಮೆರಿಕವು ವೆನೆಜುವೆಲಾದ ಮೇಲೆ ನಡೆಸಿರುವ ದಾಳಿಯು ಇಡೀ ಜಗತ್ತಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ವೆನೆಜುವೆಲಾ ಮತ್ತು ಲ್ಯಾಟಿನ್ ಅಮೆರಿಕದ ಸಾರ್ವಭೌಮತ್ವದ ವಿರುದ್ಧದ ಆಕ್ರಮಣವನ್ನು ಕೊಲಂಬಿಯ ಖಂಡಿಸುತ್ತದೆ’ ಎಂದು ಕೊಲಂಬಿಯದ ಅಧ್ಯಕ್ಷ ಗುಸ್ತಾವೊ ಪೆಟ್ರೊ ‘ಎಕ್ಸ್’ ಹೇಳಿದ್ದಾರೆ.
“ಅಮೆರಿಕವು ವೆನೆಜುವೆಲಾದ ವಿರುದ್ಧ ನಡೆಸಿರುವ ದಾಳಿಯನ್ನು “ಪಾತಕ ದಾಳಿ”. ಇದಕ್ಕೆ ಕೂಡಲೇ ಅಂತರರಾಷ್ಟ್ರೀಯ ಪ್ರತಿಕ್ರಿಯೆ” ಬೇಕು ಎಂದು ಕ್ಯೂಬಾ ಅಧ್ಯಕ್ಷ ಮಿಗುಯೆಲ್ ಡಿಯಾಝ್-ಕನೇಲ್ ಟೀಕಿಸಿದ್ದಾರೆ. “ಅಮೆರಿಕದ ಈ ಕೃತ್ಯವು ಭಯೋತ್ಪಾದನೆಯಾಗಿದೆ. ಇದು ವೆನೆಜುವೆಲಾದ ಜನರ ಮೇಲೆ ಮಾತ್ರ ನಡೆದ ದಾಳಿಯಲ್ಲ, ಇಡೀ ‘ನಮ್ಮ ಲ್ಯಾಟಿನ್ ಅಮೆರಿಕ’ದ ಮೇಲೆ ನಡೆದ ಭೀಕರ ದಾಳಿ” ಎಂದಿದ್ದಾರೆ.
ವೆನೆಜುವೆಲಾ ವಿರುದ್ಧ ಅಮೆರಿಕ ನಡೆಸಿರುವ ಸೇನಾ ಕಾರ್ಯಚರಣೆಯನ್ನು ರಷ್ಯಾ ತೀವ್ರವಾಗಿ ಖಂಡಿಸುತ್ತದೆ. “ಪ್ರಸ್ತುತ ಪರಿಸ್ಥಿತಿಯಲ್ಲಿ ವೆನೆಜುವೆಲಾ ಇನ್ನಷ್ಟು ಹದಗೆಡುವುದನ್ನು ತಡೆಯುವುದು ಮತ್ತು ಮಾತುಕತೆಯ ಮೂಲಕ ಪರಿಸ್ಥಿತಿಯನ್ನು ಶಾಂತಸ್ಥಿತಿಗೆ ತರುವುದು ಅಗತ್ಯವಾಗಿದೆ” ಎಂದು ರಷ್ಯಾ ಹೇಳಿದೆ.
ಇರಾನ್ ದೇಶದ ಸರ್ವೋಚ್ಛ ನಾಯಕ ಆಯುತುಲ್ಲಾ ಅಲಿ ಖಾಮಿನಿ, “ಒಂದು ಸರ್ಕಾರದ ಮೇಲೆ ಅಥವಾ ಒಂದು ದೇಶದ ಮೇಲೆ ಶತ್ರುವೊಬ್ಬ ಸುಳ್ಳು ಹೇಳಿಕೆಗಳ ಮೂಲಕ ಏನನ್ನೋ ಹೇರಲು ನಿರ್ಧರಿಸಿರುವುದನ್ನು ಜನರು ಅರ್ಥ ಮಾಡಿಕೊಂಡಾಗ, ಆ ಶತ್ರುವಿನ ವಿರುದ್ಧ ದೃಢವಾಗಿ ನಿಲ್ಲಬಹುದು” ಎಂದು ಹೇಳಿದ್ದಾರೆ.
ಟ್ರಂಪ್ ನಡೆ ಎಷ್ಟು ಸರಿ
ನೊಬೆಲ್ ಶಾಂತಿ ಪ್ರಶಸ್ತಿಯನ್ನು ಬಯಸುವ ಡೊನಾಲ್ಡ್ ಟ್ರಂಪ್ ಆಯ್ದು ಕೊಂಡಿರುವ ಯುದ್ಧದ ಹಾದಿಯ ಬಗ್ಗೆ ಜಗತ್ತಿನ ಅನೇಕ ದೇಶಗಳು ಆಕ್ರೋಶ ವ್ಯಕ್ತಪಡಿಸಿವೆ. ವೆನೆಜುವೆಲಾದ ಅಧ್ಯಕ್ಷರನ್ನೇ ಸೆರೆ ಹಿಡಿದಿರುವ ಅಮೆರಿಕದ ದಾಳಿ ಪ್ರಜಾಪ್ರಭುತ್ವವನ್ನು ಉಳಿಸುವ ಮತ್ತು ಮಾದಕ ವಸ್ತುವನ್ನು ತಡೆಗಟ್ಟುವ ಪ್ರಯತ್ನ ಎಂದು ಅಮೆರಿಕ ಹೇಳಿಕೊಂಡರು, ವೆನೆಜುವೆಲಾದಲ್ಲಿರುವ ಅಪಾರ ತೈಲ ಸಂಪತ್ತಿನ ಮೇಲೆ ಹಿಡಿತ ಸಾಧಿಸುವ ಪ್ರಯತ್ನದಂತೆ ಕಾಣುತ್ತಿದೆ.
ಪ್ರಜಾಪ್ರಭುತ್ವವಾಗಿ ಆಯ್ಕೆಯಾದ ದೇಶದ ಅಧ್ಯಕ್ಷರನ್ನು ಬಲವಂತವಾಗಿ ಪದಚ್ಯುತಿಗೊಳಿಸುವ ಮೂಲಕ ಅಮೆರಿಕ ಅಂತರರಾಷ್ಟ್ರೀಯ ಕಾನೂನುಗಳನ್ನು ಗಾಳಿಗೆ ತೂರಿ ಜಗತ್ತಿಗೆ ದಬ್ಬಾಳಿಕೆ ಸಂದೇಶವನ್ನು ರವಾನೆ ಮಾಡುವಂತೆ ತೋರುತ್ತಿದೆ. ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ನನ್ನ ಬಳಿ ಬಂದು ಹೇಳಿಕೊಳ್ಳಿ ಎಂದು ಹೇಳುವ ಟ್ರಂಪ್, ದಕ್ಷಿಣ ಅಮೆರಿಕದ ವೆನೆಜುವೆಲಾ ಮೇಲೆ ಬಾಂಬ್ ದಾಳಿ ನಡೆಸುವ ಮೂಲಕ ಯುದ್ಧದ ಪ್ರೇರಕರಾಗಿದ್ದಾರೆ.

ವೆನೆಜುವೆಲಾದಲ್ಲಿರುವ ತೈಲ ನಿಕ್ಷೇಪವನ್ನು ಗುರಿಯಾಗಿಸಿ ಮತ್ತು ವೆನೆಜುವೆಲಾವನ್ನು ತನ್ನ ವಶಕ್ಕೆ ಪಡೆಯುವ ಉದ್ದೇಶದಿಂದಲೇ ಟ್ರಂಪ್ ಈ ದಾಳಿಯನ್ನು ನಡೆಸಿದ್ದಾರೆ. ಈ ಹಿಂದೆಯೇ ವೆನೆಜುವೆಲಾದ ಮೂರು ತೈಲ ಟ್ಯಾಂಕರ್ ಗಳನ್ನು ವಶಪಡಿಸಿಕೊಂಡು, ಬೆದರಿಕೆಯನ್ನು ಹಾಕಿದ್ದರು. ಇಷ್ಟು ದೊಡ್ಡ ತೈಲ ಟ್ಯಾಂಕರ್ ಗಳನ್ನು ಇದೇ ಮೊದಲ ಬಾರಿಗೆ ವಶಪಡಿಸಿಕೊಂಡಿರುವುದು ಎಂದು ಟ್ರಂಪ್ ಶ್ವೇತಭವನದಲ್ಲಿ ಹೇಳಿದ್ದರು.
ಇಡೀ ವೆನೆಜುವೆಲಾ ಗಾಢ ನಿದ್ರೆಯಲ್ಲಿರುವಾಗ, ಅಧ್ಯಕ್ಷ ನಿಕೋಲಸ್ ಮಡುರೊ ಅವರ ಭದ್ರಕೋಟೆಗೆ ನುಗ್ಗಿ ಸೆರೆ ಹಿಡಿದಿರುವುದು, ಜಗತ್ತಿನ ಎಲ್ಲಾ ದೇಶಗಳಿಗೆ ಎಚ್ಚರಿಕೆಯ ಪಾಠದಂತಿದೆ. ಟ್ರಂಪ್ ಮತ್ತು ಅಮೆರಿಕ ಯಾವಾಗಲೂ ಯುದ್ಧವನ್ನೇ ಬೆಂಬಲಿಸಿ, ಪೋಷಿಸಿಕೊಂಡು ಬಂದಿದ್ದಾರೆ. ಜಗತ್ತಿನ ಪ್ರಮುಖ 10 ಯುದ್ಧ ಶಸ್ತ್ರಸ್ತ್ರಗಳನ್ನು ತಯಾರಿಸುವ ಕಂಪನಿಗಳ ಪಟ್ಟಿಯಲ್ಲಿ ಅಮೆರಿಕ ಮೊದಲಿದೆ. ಹೀಗೆ ಯುದ್ಧವನ್ನು ಬಯಸುವ ಟ್ರಂಪ್ ಹೇಗೆ ತಾನೇ ಶಾಂತಿ ಸುವ್ಯವಸ್ಥೆಯನ್ನು ಭಯಸುತ್ತಾರೆ ಎಂಬುದು ಪ್ರಶ್ನೆಯಾಗಬೇಕಿದೆ.





