ದೇಶವ್ಯಾಪಿ ವಿದ್ಯಾರ್ಥಿ ಪ್ರತಿಭಟನೆಯ ಪರಿಣಾಮವಾಗಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ 15 ವರ್ಷಗಳ ಆಳ್ವಿಕೆ ಅಂತ್ಯಗೊಂಡು 18 ತಿಂಗಳ ಬಳಿಕ ಬಾಂಗ್ಲಾದೇಶದ ಸಂಸತ್ತಿಗೆ ಗುರುವಾರ ಚುನಾವಣೆ ನಡೆಯುತ್ತಿದೆ. ಆ ಬಳಿಕ ಮಧ್ಯಂತರ ಸರ್ಕಾರ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಈ ಅವಧಿಯಲ್ಲೂ ಪ್ರತಿಭಟನೆಗಳು, ದಂಗೆಗಳು ಹಾಗೂ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರ ಮುಂದುವರಿದಿದ್ದವು. ಎಲ್ಲಕ್ಕಿಂತ ಪ್ರಮುಖವಾಗಿ ದೇಶದ ವಿದೇಶಾಂಗ ನೀತಿ ಬದಲಾಗಿದ್ದು, ಭಾರತದಿಂದ ದೂರ ಸರಿದು ಪಾಕಿಸ್ತಾನ ಮತ್ತು ಚೀನಾ ಜತೆಗಿನ ನಂಟು ಬಲಗೊಂಡಿದೆ.
ದೇಶದಲ್ಲಿ ಚುನಾಯಿತ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಎಲ್ಲ ಘಟನೆಗಳು ಬದಲಾಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. ಖಲೀದಾ ಝಿಯಾ ಅವರ ಬಾಂಗ್ಲಾದೇಶ ನ್ಯಾಷನಲ್ ಪಕ್ಷ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ಲೇಷಿಸಲಾಗಿದೆ. ಖಲೀದಾ ನಿಧನದ ಬಳಿಕ ಅವರ ಪುತ್ರ ತಾರಿಕ್ ರಹಮಾನ್ ಪಕ್ಷವನ್ನು ಮುನ್ನಡೆಸುತ್ತಿದ್ದು, ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಖುದ್ದು ರಾಜಧರ್ಮ ಪಾಲಿಸಲಿಲ್ಲ ಮೋದಿಯವರು, ಹಿಮಂತರಿಗೆ ಹೇಗೆ ಉಪದೇಶ ನೀಡಬಲ್ಲರು ಪಾಪ?
ಮಾಜಿ ಪ್ರಧಾನಿ ಶೇಖ್ ಹಸೀನಾ ಪದಚ್ಯುತಿಯ ಬಳಿಕ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನುಸ್ ಅವರು ಅವಾಮಿ ಲೀಗ್ ಪಕ್ಷವನ್ನು ಅನರ್ಹಗೊಳಿಸಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಿದ್ದರು.
ದೇಶದ ಎಲ್ಲಾ 299 ಸಂಸದೀಯ ಕ್ಷೇತ್ರಗಳಲ್ಲಿ ಬೆಳಿಗ್ಗೆ 7.30ರಿಂದ ಸಂಜೆ 4.30ರವರೆಗೆ ಮತದಾನ ನಡೆಯಲಿದ್ದು, 8 ಲಕ್ಷ ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. 50 ಪಕ್ಷಗಳು ಕಣದಲ್ಲಿವೆ. ಮತಪತ್ರದ ಮೂಲಕ ಮತದಾನ ನಡೆಯುತ್ತಿದ್ದು, ಪಾರದರ್ಶಕ ಮತಪೆಟ್ಟಿಗೆಯಲ್ಲಿ ಮತಪತ್ರಗಳನ್ನು ಹಾಕಲಾಗುತ್ತದೆ. ಒಟ್ಟು 2,028 ಅಭ್ಯರ್ಥಿಗಳು ಕಣದಲ್ಲಿದ್ದಾರೆ.





