ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ತೀವ್ರ ಪರಿಣಾಮವು ಭಾರತವನ್ನು ಮಾತ್ರವಲ್ಲದೆ, ಶ್ರೀಲಂಕಾವನ್ನೂ ಕಾಡುತ್ತಿದೆ. ಶ್ರೀಲಂಕಾದಲ್ಲಿ ಭಾನುವಾರ ಇಂಧನ ದರವನ್ನು ಪರಿಷ್ಕರಿಸಲಾಗಿದ್ದು, 25%ರಷ್ಟು ಹೆಚ್ಚಿಸಲಾಗಿದೆ.
ಸಾಮಾನ್ಯ ಪೆಟ್ರೋಲ್ ಬೆಲೆಯು ಪ್ರತಿ ಲೀಟರ್‌ಗೆ 317 ರೂಪಾಯಿಗಳಿಂದ 398 ರೂಪಾಯಿಗಳಿಗೆ ಏರಿಕೆಯಾಗಿದೆ. ಇನ್ನು ಸಾರ್ವಜನಿಕ ಸಾರಿಗೆಯಲ್ಲಿ ಹೆಚ್ಚಾಗಿ ಬಳಕೆಯಾಗುವ ಡೀಸೆಲ್ ಬೆಲೆಯು ಲೀಟರ್‌ಗೆ 79 ರೂಪಾಯಿ ಏರಿಕೆಯಾಗಿದ್ದು, ಈಗ 382 ರೂಪಾಯಿ ತಲುಪಿದೆ.
ಕಳೆದ ವಾರವಷ್ಟೇ, ಶ್ರೀಲಂಕಾ ಸರ್ಕಾರವು ಇಂಧನ ದರದಲ್ಲಿ 8% ರಷ್ಟು ಏರಿಕೆ ಮಾಡಿತ್ತು. ಬಳಕೆಯನ್ನು ನಿಯಂತ್ರಿಸಲು ಪಡಿತರ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. “ಇತ್ತೀಚಿನ ಬೆಲೆ ಏರಿಕೆಯ ಮೂಲಕ ಇಂಧನ ಬಳಕೆಯಲ್ಲಿ 15%ನಿಂದ 20% ರಷ್ಟು ಕಡಿತವನ್ನು ನಿರೀಕ್ಷಿಸುತ್ತಿದ್ದೇವೆ” ಎಂದು ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಶನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲದವರೆಗೆ ಸಂಘರ್ಷ ಮುಂದುವರಿಯುವ ಸಾಧ್ಯತೆಯಿದ್ದು, ಇದು ದೇಶದ ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರಬಹುದು ಎಂದು ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಕಳೆದ ವಾರ ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.
ಇಂಧನ ಉಳಿತಾಯಕ್ಕಾಗಿ ಶ್ರೀಲಂಕಾದಲ್ಲಿ ಕಳೆದ ಬುಧವಾರದಿಂದ ಜಾರಿಗೆ ಬರುವಂತೆ ವಾರಕ್ಕೆ ನಾಲ್ಕು ದಿನಗಳ ಕೆಲಸದ ಅವಧಿಯನ್ನು ಘೋಷಿಸಲಾಗಿದೆ. ಅಲ್ಲದೆ, ಸಾಧ್ಯವಿರುವ ಕಡೆಗಳಲ್ಲಿ ಉದ್ಯೋಗಿಗಳಿಗೆ ‘ಮನೆಯಿಂದಲೇ ಕೆಲಸ’ ಮಾಡುವ ವ್ಯವಸ್ಥೆಯನ್ನು ಮರುಜಾರಿಗೊಳಿಸುವಂತೆ ಉದ್ಯೋಗದಾತರಿಗೆ ಸೂಚಿಸಲಾಗಿದೆ.
ಈ ಲೇಖನ ಓದಿದ್ದೀರಾ?: ಲಿಂಗತ್ವ ಅಲ್ಪಸಂಖ್ಯಾತರ ಅಸ್ಮಿತೆಯನ್ನೇ ಅಳಿಸುವ ಮಸೂದೆ: ಆತ್ಮಗೌರವಕ್ಕೆ ಕೊಡಲಿಪೆಟ್ಟು
ವಿಶ್ವದ ಒಟ್ಟು ತೈಲ ರಫ್ತಿನ 20%ರಷ್ಟು ಭಾಗವು ಇರಾನ್ ನಿಯಂತ್ರಣದಲ್ಲಿರುವ ‘ಹಾರ್ಮುಜ್ ಜಲಸಂಧಿ’ಯ ಮೂಲಕವೇ ಸಾಗಾಟವಾಗುತ್ತದೆ. ಈ ಜಲಸಂಧಿಯನ್ನು ಇರಾನ್ ಸ್ಥಗಿತೊಳಿಸಿರುವ ಕಾರಣ, ಇಂಧನ ಬಿಕ್ಕಟ್ಟು ಎದುರಾಗಿದೆ. ಭಾರತದಲ್ಲಿಯೂ ಇಂಧನ ಮತ್ತು ಎಲ್‌ಪಿಜಿ ಕೊರತೆ ಎದುರಾಗಿದ್ದು, ಭಾರತದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸರಬರಾಜು ಸ್ಥಗಿತಗೊಂಡಿದೆ. ಗೃಹ ಬಳಕೆಯ ಎಲ್‌ಪಿಜಿ ಲಭ್ಯತೆಯೂ ಅಸಪರ್ಮಕವಾಗಿದೆ. ಈ ನಡುವೆ, ಭಾರತದಲ್ಲಿ ಪ್ರೀಮಿಯಂ ಪೆಟ್ರೋಲ್ ದರವನ್ನು 2 ರೂ. ಮತ್ತು ಕೈಗಾರಿಕಾ ಡೀಸೆಲ್ ದರವನ್ನು 22 ರೂ. ಹೆಚ್ಚಿಸಲಾಗಿದೆ.




