ಅಮೆರಿಕದ ಜಾರ್ಜಿಯಾ ರಾಜ್ಯದ ಮ್ಯಾನ್ಸ್‌ಫೀಲ್ಡ್ ಪಟ್ಟಣದಲ್ಲಿರುವ Meta ಸಂಸ್ಥೆಯ ಡೇಟಾ ಸೆಂಟರ್ ಇದೀಗ ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಡೇಟಾ ಸೆಂಟರ್ ಕಾರ್ಯಾರಂಭಿಸಿದ ನಂತರ ಕುಡಿಯುವ ನೀರಿನ ಗುಣಮಟ್ಟ ಕುಸಿತ, ನೀರಿನ ಒತ್ತಡ ಕಡಿಮೆಯಾಗುವುದು (low water pressure), ಹಾಗೂ ಸೆಂಟರ್‌ನ ನಿರಂತರ ಶಬ್ದದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಸ್ಥಳೀಯರ ಪ್ರಕಾರ, ಮನೆಗಳಿಗೆ ಸರಬರಾಜಾಗುವ ನೀರಿನಲ್ಲಿ ಕೆಸರು ಕಾಣಿಸಿಕೊಳ್ಳುತ್ತಿದ್ದು, ದಿನನಿತ್ಯದ ಅಗತ್ಯಗಳಿಗೆ ಸಾಕಷ್ಟು ನೀರು ದೊರಕದ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಜೊತೆಗೆ, ವಿದ್ಯುತ್ ಮತ್ತು ನೀರಿನ ಬಿಲ್ ಕೂಡ ಹೆಚ್ಚಾಗಿ ಬರುತ್ತಿದೆ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.
ತಜ್ಞರು ಹೇಳುವಂತೆ, ದೊಡ್ಡ ಡೇಟಾ ಕೇಂದ್ರಗಳು ಸರ್ವರ್‌ಗಳನ್ನು ತಂಪಾಗಿಸಲು (cooling) ಲಕ್ಷಾಂತರ ಲೀಟರ್ ನೀರನ್ನು ಬಳಸುತ್ತವೆ. ಈ ಅತಿಯಾದ ನೀರಿನ ಬಳಕೆ ಸ್ಥಳೀಯ ಅಂತರ್ಜಲ ಮಟ್ಟವನ್ನು ಗಣನೀಯವಾಗಿ ಇಳಿಸುತ್ತದೆ. ಮ್ಯಾನ್ಸ್‌ಫೀಲ್ಡ್ ಪ್ರದೇಶದಲ್ಲಿಯೂ ಎದುರಾಗಿರುವುದು ಇದೇ ಸಮಸ್ಯೆ.
ದೊಡ್ಡ ದೊಡ್ಡ ಐಟಿ ಕಂಪನಿಗಳು ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡುವ ಸಾಮರ್ಥ್ಯ ಹೊಂದಿದ್ದರೂ, ಪರಿಸರ ಮತ್ತು ಸ್ಥಳೀಯ ಸಮುದಾಯದ ಹಿತವನ್ನು ಕಡೆಗಣಿಸಬಾರದು ಎಂಬುದು ನಿವಾಸಿಗಳ ಒತ್ತಾಯ. AI ಮತ್ತು ಡೇಟಾ ಸೆಂಟರ್‌ಗಳ ನಿರ್ವಹಣೆಯಲ್ಲಿ ಹೆಚ್ಚು ಪರಿಣಾಮಕಾರಿ, ಸಮರ್ಥನೀಯ ಹಾಗೂ ಪರಿಸರ ಸ್ನೇಹಿ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಈಗ ಅನಿವಾರ್ಯವಾಗಿದೆ.
ಇದನ್ನೂ ಓದಿ: ಪ್ರೀಮಿಯಂ ಲೇಖನ | ಬೆಂಗಳೂರಿನ ಐಟಿ ಹಬ್‌ಗಳಿಗೆ ಕಾಡಲಿದೆ ಜಲಗಂಡಾಂತರ!
ಸ್ಥಳೀಯ ಆಡಳಿತ ಮತ್ತು ಮೆಟಾ ಸಂಸ್ಥೆ ಈ ಆರೋಪಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ. ಅಮೆರಿಕದಂತಹ ಮುಂದುವರೆದ ರಾಷ್ಟ್ರಗಳಲ್ಲೇ ಡೇಟಾ ಸೆಂಟರ್‌ಗಳಿಂದ ನೀರು, ವಿದ್ಯುತ್ ಮತ್ತು ಪರಿಸರ ಸಮಸ್ಯೆಗಳು ಎದುರಾಗುತ್ತಿದ್ದರೆ, ಅಭಿವೃದ್ಧಿಶೀಲ ರಾಷ್ಟ್ರಗಳು ಇದರಿಂದ ಹೊರತಾಗಲು ಸಾಧ್ಯವೇ ಇಲ್ಲ. ಈಗಾಗಲೇ ಸಂಪನ್ಮೂಲಗಳ ಕೊರತೆ ಇರುವ ದೇಶಗಳಲ್ಲಿ ಈ ಸಮಸ್ಯೆಗಳು ಇನ್ನಷ್ಟು ತೀವ್ರವಾಗುವ ಅಪಾಯವಿದೆ. ಹಾಗಾಗಿ, ಡೇಟಾ ಸೆಂಟರ್ ಮತ್ತು AI ವಿಸ್ತರಣೆಗೆ ಸ್ಪಷ್ಟ ನೀತಿ-ನಿಯಮಗಳು ಅಗತ್ಯ. ನೀರಿನ ಬಳಕೆಗೆ ಮಿತಿ, ಪರಿಸರ ಪರಿಣಾಮ ಮೌಲ್ಯಮಾಪನ (EIA) ಕಡ್ಡಾಯ, ಹಾಗೂ ಕುಡಿಯುವ ನೀರು ಮತ್ತು ಕೃಷಿಗೆ ಮೊದಲ ಆದ್ಯತೆ ನೀಡಬೇಕು. ಸ್ಥಳೀಯ ಜನರ ಸಲಹೆ, ಅವರ ಆರೋಗ್ಯ ಮತ್ತು ಬದುಕಿನ ಮೇಲೆ ಬೀರುವ ಪರಿಣಾಮಗಳಿಗೆ ಪರಿಹಾರ ವ್ಯವಸ್ಥೆಯೂ ನೀತಿಯ ಭಾಗವಾಗಬೇಕು. ಅದೇ ವೇಳೆ, ನವೀಕರಿಸಬಹುದಾದ ಶಕ್ತಿ ಬಳಕೆ, ಕಡಿಮೆ ನೀರು ಬಳಸುವ ತಂತ್ರಜ್ಞಾನ, ಹಾಗೂ ಪರಿಸರ ಸ್ನೇಹಿ ನಿರ್ವಹಣಾ ವಿಧಾನಗಳನ್ನು ಕಡ್ಡಾಯಗೊಳಿಸಬೇಕು. ಅದೇ ನಿಜವಾದ ಅಭಿವೃದ್ಧಿ.





