ಅಮೆರಿಕ ಭಾರತದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಆದರೆ ನವದೆಹಲಿ ವಾಷಿಂಗ್ಟನ್‌ಗೆ ಅಗಾಧ ಸುಂಕಗಳನ್ನು ವಿಧಿಸುತ್ತಿರುವುದರಿಂದ ಸಂಬಂಧ ಹಲವು ವರ್ಷಗಳಿಂದ ಏಕಪಕ್ಷೀಯವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಮಂಗಳವಾರ ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯ ವೇಳೆ ಮಾಧ್ಯಮಗಳು ಭಾರತದ ಮೇಲೆ ವಿಧಿಸಲಾದ ಕೆಲವು ಸುಂಕಗಳನ್ನು ತೆಗೆದುಹಾಕುವ ಚಿಂತನೆ ಇದೆಯೇ ಎಂದು ಟ್ರಂಪ್ ಅವರನ್ನು ಪ್ರಶ್ನಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, “ಇಲ್ಲ, ನಾವು ಭಾರತದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತೇವೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಟ್ರಂಪ್ ಒತ್ತಡಕ್ಕೆ ಬಗ್ಗಿ ‘ಸ್ಟಾರ್‌ಲಿಂಕ್’ ಪರವಾನಗಿ ನೀಡಿದರೆ ಮೋದಿ?
“ಹಲವು ವರ್ಷಗಳಿಂದ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಏಕಪಕ್ಷೀಯವಾಗಿತ್ತು. ಅಧಿಕಾರ ವಹಿಸಿಕೊಂಡಾಗ ಈ ಬದಲಾವಣೆಯಾಗಿದೆ. ಭಾರತ ನಮಗೆ ಅಪಾರ ಸುಂಕಗಳನ್ನು ವಿಧಿಸುತ್ತಿತ್ತು. ಇದು ವಿಶ್ವದಲ್ಲೇ ಅತ್ಯಧಿಕ ಸುಂಕವಾಗಿತ್ತು. ಆದ್ದರಿಂದ ಅಮೆರಿಕ ಭಾರತದೊಂದಿಗೆ ಹೆಚ್ಚು ವ್ಯವಹಾರ ಮಾಡುತ್ತಿಲ್ಲ” ಎಂದು ಹೇಳಿದ್ದಾರೆ.
“ಆದರೆ ಅವರು ನಮ್ಮೊಂದಿಗೆ ವ್ಯಾಪಾರ ಮಾಡುತ್ತಿದ್ದರು. ಏಕೆಂದರೆ ನಾವು ಅವರಿಗೆ ಶುಲ್ಕ ವಿಧಿಸುತ್ತಿರಲಿಲ್ಲ. ಮೂರ್ಖತನದಿಂದ, ನಾವು ಅವರಿಗೆ ಶುಲ್ಕ ವಿಧಿಸುತ್ತಿರಲಿಲ್ಲ. ಭಾರತವು ತನ್ನ ಉತ್ಪನ್ನಗಳನ್ನು ಅಮೆರಿಕಕ್ಕೆ ಸುರಿಯುತ್ತಿದೆ. ಆದ್ದರಿಂದ ಇಲ್ಲಿ ತಯಾರಿಕೆಯಾಗುತ್ತಿಲ್ಲ. ಇದು ನಕಾರಾತ್ಮಕ ಬೆಳವಣಿಗೆ. ಆದರೆ ನಮಗೆ ಶೇಕಡ 100ರಷ್ಟು ಸುಂಕ ವಿಧಿಸುವ ಕಾರಣ ನಾವು ಭಾರತಕ್ಕೆ ಏನೂ ಕಳಿಸಲ್ಲ” ಎಂದಿದ್ದಾರೆ.
ಈ ವೇಳೆಯೇ ಹಾರ್ಲೆ ಡೇವಿಡ್ಸನ್ ಮೋಟಾರ್‌ಸೈಕಲ್‌ಗಳ ಉದಾಹರಣೆಯನ್ನು ಉಲ್ಲೇಖಿಸಿದ ಟ್ರಂಪ್, ಮೋಟಾರ್‌ಸೈಕಲ್ ಮೇಲೆ ಶೇಕಡ 200 ಸುಂಕವಿರುವುದರಿಂದ ಕಂಪನಿಯು ಭಾರತಕ್ಕೆ ಮಾರಾಟ ಮಾಡಲು ಸಾಧ್ಯವಿಲ್ಲ. ಹಾಗಾದರೆ ಏನಾಗುತ್ತದೆ? ಹಾರ್ಲೆ ಡೇವಿಡ್ಸನ್ ಭಾರತಕ್ಕೆ ಹೋಗಿ ಮೋಟಾರ್‌ಸೈಕಲ್ ಸ್ಥಾವರವನ್ನು ನಿರ್ಮಿಸಿತು. ಈಗ ಅವರು ನಮ್ಮಂತೆಯೇ ಸುಂಕವನ್ನು ಪಾವತಿಸಬೇಕಾಗಿಲ್ಲ” ಎಂದು ಹೇಳಿದ್ದಾರೆ.





