ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗ್ರೀನ್‌ಲ್ಯಾಂಡ್ ದ್ವೀಪವನ್ನು ಖರೀದಿಸುವ ಪ್ರಸ್ತಾಪವನ್ನು ಮುಂದಿಟ್ಟ ಬೆನ್ನಲ್ಲೇ, ನ್ಯಾಟೋ ಮಿತ್ರರಾಷ್ಟ್ರಗಳಾದ ಅಮೆರಿಕ ಮತ್ತು ಡೆನ್ಮಾರ್ಕ್ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ತೀವ್ರಗೊಂಡಿದೆ. ಒಂದು ವೇಳೆ ಅಮೆರಿಕವು ಗ್ರೀನ್‌ಲ್ಯಾಂಡ್ ಮೇಲೆ ಸೇನಾ ದಾಳಿ ನಡೆಸಿದರೆ, ಅದು ನ್ಯಾಟೋ ಒಕ್ಕೂಟದ ಅಂತ್ಯಕ್ಕೆ ಕಾರಣವಾಗಲಿದೆ ಎಂದು ಡೆನ್ಮಾರ್ಕ್ ಸಂಸದರಾದ ರಾಸ್ಮಸ್ ಜಾರ್ಲೋವ್ ಎಚ್ಚರಿಸಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, “ಅಮೆರಿಕದಂತಹ ಬಲಿಷ್ಠ ಸೇನೆಯನ್ನು ತಡೆಯಲು ನಮ್ಮಿಂದ ಸಾಧ್ಯವಾಗದಿರಬಹುದು. ಆದರೆ, ನಮ್ಮ ಮೇಲೆ ದಾಳಿ ನಡೆದರೆ ನಾವು ಸುಮ್ಮನೆ ಕೂರುವುದಿಲ್ಲ, ನಮ್ಮ ರಕ್ಷಣೆಗಾಗಿ ನಾವೂ ಹೋರಾಡುತ್ತೇವೆ,” ಎಂದು ಸ್ಪಷ್ಟಪಡಿಸಿದ್ದಾರೆ.
’ಅದು ವಿನಾಶಕಾರಿ ಮತ್ತು ಮೂರ್ಖತನದ ಪರಮಾವಧಿ’
ಒಂದು ನ್ಯಾಟೋ ರಾಷ್ಟ್ರವು ಮತ್ತೊಂದು ನ್ಯಾಟೋ ರಾಷ್ಟ್ರದ ಮೇಲೆ ದಾಳಿ ಮಾಡುವುದು ಅಸಂಬದ್ಧ. ಇದು ವಿನಾಶಕಾರಿ ಪರಿಣಾಮ ಬೀರಲಿದ್ದು, ಇತಿಹಾಸದ ಅತ್ಯಂತ ‘ದಡ್ಡತನದ ನಿರ್ಧಾರ’ ಎನಿಸಿಕೊಳ್ಳಲಿದೆ ಎಂದು ಜಾರ್ಲೋವ್ ಕಿಡಿಕಾರಿದ್ದಾರೆ. ಗ್ರೀನ್‌ಲ್ಯಾಂಡ್‌ನಲ್ಲಿ ಗಣಿಗಾರಿಕೆ ನಡೆಸಲು ಮತ್ತು ರಕ್ಷಣಾ ನೆಲೆಗಳನ್ನು ಹೊಂದಲು ಅಮೆರಿಕಕ್ಕೆ ಈಗಾಗಲೇ ಅವಕಾಶವಿದೆ. ಇಂತಹ ಸನ್ನಿವೇಶದಲ್ಲಿ ದಾಳಿ ನಡೆಸುವ ಅಗತ್ಯವಾದರೂ ಏನಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ನ್ಯಾಟೋ ಒಕ್ಕೂಟಕ್ಕೆ ಗಂಡಾಂತರವೇಕೆ?
ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡ್ರಿಕ್ಸನ್ ಮತ್ತು ಜಾರ್ಲೋವ್ ಅವರ ಪ್ರಕಾರ, ಅಮೆರಿಕವು ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳಲು ಮುಂದಾದರೆ ಡೆನ್ಮಾರ್ಕ್ ‘ನ್ಯಾಟೋ ಆರ್ಟಿಕಲ್ 5’ ಅನ್ನು ಜಾರಿಗೊಳಿಸಬೇಕಾಗುತ್ತದೆ. ಈ ನಿಯಮದ ಪ್ರಕಾರ, ನ್ಯಾಟೋ ಸದಸ್ಯ ರಾಷ್ಟ್ರವೊಂದರ ಮೇಲೆ ದಾಳಿ ನಡೆದರೆ, ಉಳಿದ ಎಲ್ಲ ಸದಸ್ಯ ರಾಷ್ಟ್ರಗಳು ಆ ದೇಶದ ರಕ್ಷಣೆಗೆ ಧಾವಿಸಬೇಕು.
ಆಗ ಅಮೆರಿಕದ ವಿರುದ್ಧವೇ ಇತರ ದೇಶಗಳು ಡೆನ್ಮಾರ್ಕ್ ಪರ ನಿಲ್ಲಬೇಕಾಗುತ್ತದೆ. ಸಹಜವಾಗಿ ಅಮೆರಿಕ ಇದನ್ನು ವೀಟೋ ಮಾಡುತ್ತದೆ. ಈ ಗೊಂದಲದಲ್ಲಿ 76 ವರ್ಷಗಳ ಇತಿಹಾಸವಿರುವ ನ್ಯಾಟೋ ಒಕ್ಕೂಟ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ ಎಂದು ವಿಶ್ಲೇಷಿಸಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್; ಸರ್ಕಾರದ ಹೆಂಗರುಳಿನ ಯೋಜನೆಗೆ ಬೇಕಿದೆ ಅಧಿಕಾರಿಗಳ ಬದ್ಧತೆ
‘ನಮ್ಮ ಪ್ರಜೆಗಳು ಮಾರಾಟಕ್ಕಿಲ್ಲ’
2019ರಲ್ಲೇ ಟ್ರಂಪ್ ಗ್ರೀನ್‌ಲ್ಯಾಂಡ್ ಖರೀದಿಸುವ ಇಂಗಿತ ವ್ಯಕ್ತಪಡಿಸಿದ್ದರು. 2024ರಲ್ಲಿ ಅಧ್ಯಕ್ಷರಾಗಿ ಮರು ಆಯ್ಕೆಯಾದ ಬಳಿಕ ಮತ್ತೆ ಅದೇ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಾರ್ಲೋವ್, “ಗ್ರೀನ್‌ಲ್ಯಾಂಡ್ ಎನ್ನುವುದು ಕೇವಲ ಭೂಮಿಯಲ್ಲ. ಅಲ್ಲಿನ 57,000 ಡೆನ್ಮಾರ್ಕ್ ಪ್ರಜೆಗಳನ್ನು ನಾವು ಅಮೆರಿಕನ್ನರಾಗಲು ಮಾರಾಟ ಮಾಡಲು ಸಾಧ್ಯವಿಲ್ಲ. ಇದು ಹಣದ ವಿಚಾರವಲ್ಲ, ನಮ್ಮ ಸಾರ್ವಭೌಮತ್ವದ ವಿಚಾರ,” ಎಂದು ಖಡಕ್ ಆಗಿ ಹೇಳಿದ್ದಾರೆ.
ಶ್ವೇತಭವನದಿಂದ ಮಿಶ್ರ ಸಂದೇಶ
ಗ್ರೀನ್‌ಲ್ಯಾಂಡ್ ಖರೀದಿಯು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಆದ್ಯತೆಯ ವಿಷಯ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೀವಿಟ್ ಹೇಳಿದ್ದಾರೆ. ಅಲ್ಲದೆ, ಈ ವಿಚಾರದಲ್ಲಿ “ಸೇನಾ ಬಲ ಪ್ರದರ್ಶನದ ಆಯ್ಕೆಯನ್ನೂ ತಳ್ಳಿಹಾಕುವಂತಿಲ್ಲ,” ಎಂಬ ಹೇಳಿಕೆ ನೀಡಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಆದರೆ, ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾಗಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ, “ಟ್ರಂಪ್ ಅವರಿಗೆ ದ್ವೀಪವನ್ನು ಖರೀದಿಸುವ ಆಸಕ್ತಿ ಇದೆಯೇ ಹೊರತು, ಯುದ್ಧ ಮಾಡುವ ಉದ್ದೇಶವಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರ ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ರೂಬಿಯೋ ಯೋಜಿಸಿದ್ದು, ಡೆನ್ಮಾರ್ಕ್ ಕೂಡ ಈ ಸಂಧಾನ ಸಭೆಗೆ ಸ್ವಾಗತ ಕೋರಿದೆ.





