ಇಸ್ತಾಂಬುಲ್‌ನಲ್ಲಿ ನಡೆದ ಶಾಂತಿ ಮಾತುಕತೆ ವಿಫಲಗೊಂಡ ಬೆನ್ನಲ್ಲೇ ಪಾಕಿಸ್ತಾನವು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಕ್ಕೆ ಕಠಿಣ ಎಚ್ಚರಿಕೆಯನ್ನು ನೀಡಿದೆ. ಪಾಕಿಸ್ತಾನದ ರಕ್ಷಣಾ ಸಾಮರ್ಥ್ಯವನ್ನು ಒತ್ತಿಹೇಳಿದ ರಕ್ಷಣಾ ಸಚಿವ ಖವಾಜಾ ಆಸಿಫ್, “ನಮ್ಮ ಸಂಪೂರ್ಣ ಶಸ್ತ್ರಾಗಾರದ ಒಂದು ಭಾಗವನ್ನು ಬಳಸಿಕೊಂಡರೂ ತಾಲಿಬಾನ್ ಆಡಳಿತವನ್ನು ಸಂಪೂರ್ಣವಾಗಿ ನಾಶಪಡಿಸಿ, ಅವರನ್ನು ಗುಹೆಗಳಿಗೆ ಓಡಿಸಬಹುದು ಎಂದು ಹೇಳಿದ್ದಾರೆ.
ತುರ್ಕಿಯ ಇಸ್ತಾಂಬುಲ್‌ನಲ್ಲಿ ನಡೆದ ಶಾಂತಿ ಮಾತುಕತೆಯು ಯಾವುದೇ ಫಲಿತಾಂಶವನ್ನು ನೀಡದೆ ವಿಫಲಗೊಂಡಿದೆ. ಕಾಬೂಲ್‌ನಲ್ಲಿ ಅಕ್ಟೋಬರ್ 9 ರಂದು ಸಂಭವಿಸಿದ ಸರಣಿ ಸ್ಫೋಟಗಳಿಂದ 70ಕ್ಕೂ ಹೆಚ್ಚು ಮಂದಿ ಮೃತಪಟ್ಟು ನೂರಾರು ಮಂದಿ ಗಾಯಗೊಂಡರು. ಈ ದಾಳಿಗೆ ಪಾಕಿಸ್ತಾನವೇ ಕಾರಣ ಎಂದು ತಾಲಿಬಾನ್ ಆಡಳಿತ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ನಡೆದ ಮಾತುಕತೆಯಲ್ಲಿ ಪಾಕಿಸ್ತಾನವು ಅಫ್ಘಾನ್ ವಾಯುಪ್ರದೇಶದ ಉಲ್ಲಂಘನೆಯನ್ನು ನಿಲ್ಲಿಸುವುದು ಮತ್ತು ಅಮೆರಿಕದ ಡ್ರೋನ್ ದಾಳಿಗಳನ್ನು ತಡೆಯುವ ಬಗ್ಗೆ ಒಪ್ಪದಿರುವುದು ವಿವಾದಕ್ಕೆ ಕಾರಣವಾಯಿತು ಎಂದು ಮಾಧ್ಯಮಗಳು ವರದಿ ಮಾಡಿದೆ.
ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಅತ್ತಾಉಲ್ಲಾ ತಾರಾರ್, “ಅಫ್ಘಾನ್ ರಾಷ್ಟ್ರವು ಯಾವುದೇ ಭರವಸೆ ನೀಡಲಿಲ್ಲ, ಮೂಲ ವಿಷಯದಿಂದ ವಿಚಲಿತವಾಯಿತು ಮತ್ತು ಆರೋಪ-ಪ್ರತ್ಯಾರೋಪಗಳಿಗೆ ಮೊರೆ ಹೋಯಿತು,” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ, ಖವಾಜಾ ಆಸಿಫ್ ತಾಲಿಬಾನ್‌ಗೆ ಎಚ್ಚರಿಕೆ ನೀಡಿ, “ಪಾಕಿಸ್ತಾನದ ಒಳಗೆ ಯಾವುದೇ ಭಯೋತ್ಪಾದಕ ದಾಳಿ ಅಥವಾ ಆತ್ಮಾಹುತಿ ಬಾಂಬ್ ಸ್ಫೋಟ ಸಂಭವಿಸಿದರೆ, ಅದರ ಕಹಿ ಫಲವನ್ನು ಅನುಭವಿಸಲೇಬೇಕಾಗುತ್ತದೆ. ನಮ್ಮ ಸಂಕಲ್ಪ ಮತ್ತು ಸಾಮರ್ಥ್ಯವನ್ನು ಪರೀಕ್ಷಿಸಲು ಬಯಸಿದರೆ, ಅದು ನಿನ್ನ ಅಪಾಯವೇ ಆಗಿರುತ್ತದೆ” ಎಂದು ಎಚ್ಚರಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಟನಲ್ ರೋಡ್ ದೈತ್ಯ ಯೋಜನೆಯನ್ನು ಸಾರ್ವಜನಿಕ ಚರ್ಚೆಗಿಡಲಿ ಸರ್ಕಾರ
ಕಾಬೂಲ್‌ನಿಂದ ನೇರವಾದ ಯಾವುದೇ ಹೇಳಿಕೆಗಳು ಬಂದಿಲ್ಲವಾದರೂ, ಮಾಧ್ಯಮಗಳ ವರದಿಯ ಪ್ರಕಾರ, ಪಾಕಿಸ್ತಾನದ ಪ್ರತಿನಿಧಿಗಳು ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನವು ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ವನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸಿ, ಅದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಅಫ್ಘಾನ್ ರಕ್ಷಣಾ ಸಚಿವ ಮೌಲವಿ ಮೊಹಮ್ಮದ್ ಯಾಕೂಬ್ ಮುಜಾಹಿದ್, “ಪಾಕಿಸ್ತಾನ ಮತ್ತು ಇತರ ರಾಷ್ಟ್ರಗಳು ರಾಜಕೀಯ ಉದ್ದೇಶಗಳಿಗಾಗಿ ತಮ್ಮ ವಿರುದ್ಧ ಭಯೋತ್ಪಾದನೆಯ ಹಣೆಪಟ್ಟಿ ಬಳಸುತ್ತವೆ” ಎಂದು ಹೇಳಿದ್ದಾರೆ.
ಅಕ್ಟೋಬರ್ 9 ರ ಸ್ಫೋಟಗಳ ಬಳಿಕ ತಾಲಿಬಾನ್ ಗಡಿಯಲ್ಲಿ ಆಕ್ರಮಣ ಆರಂಭಿಸಿತು, ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ದಾಳಿಗಳನ್ನು ನಡೆಸಿತು. 48 ಗಂಟೆಗಳ ಕದನ ವಿರಾಮವು ಒಡಂಬಡಿಕೆಯಾಗದೆ, ಕತಾರ್ ಮತ್ತು ತುರ್ಕಿಯ ಮಧ್ಯಸ್ಥಿಕೆಯಿಂದ ಅಕ್ಟೋಬರ್ 19 ರಂದು ಹೊಸ ಒಪ್ಪಂದ ಸಾಧಿತವಾಯಿತು. ಆದರೆ, ಎರಡು ವಾರಗಳಿಂದ ಗಡಿಯನ್ನು ಮುಚ್ಚಲಾಗಿದ್ದು, ಕೇವಲ ನಿರಾಶ್ರಿತ ಅಫ್ಘಾನರಿಗೆ ಮಾತ್ರ ಅವಕಾಶವಿದೆ.
ಪಾಕಿಸ್ತಾನವು ತಾಲಿಬಾನ್‌ಗೆ ತನ್ನ ರಕ್ಷಣಾ ಸಾಮರ್ಥ್ಯವನ್ನು ಒತ್ತಿಹೇಳುವ ಮೂಲಕ ಎಚ್ಚರಿಕೆ ನೀಡಿದ್ದು, ಈ ಪ್ರದೇಶದಲ್ಲಿ ಶಾಂತಿಯ ಭವಿಷ್ಯವು ಅನಿಶ್ಚಿತವಾಗಿದೆ. ಎರಡೂ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯು ಗಡಿಯಾಚೆಗಿನ ಸಂಘರ್ಷದ ಸಾಧ್ಯತೆಯನ್ನು ಇನ್ನಷ್ಟು ಹೆಚ್ಚಿಸಿದೆ.





