ಒಂದು ಕಡೆ ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿದೆ. ಈ ಯುದ್ಧದ ಬಿಸಿ ಜಗತ್ತಿನ ಬಹುತೇಕ ದೇಶಗಳಿದೆ ತಟ್ಟಿದೆ. ಇರಾನ್ ತನ್ನ ವಶದಲ್ಲಿರುವ ಹಾರ್ಮುಜ್ ಜಲಸಂಧಿ ಮುಚ್ಚಿದ್ದರಿಂದ ಭಾರತಕ್ಕೆ ತೀವ್ರವಾದ ಹೊಡೆತ ಬಿದಿದ್ದೆ. ಇಸ್ರೇಲ್-ಇರಾನ್ ಯುದ್ಧ ಇನ್ನು ಎಷ್ಟು ದಿನ ಮುಂದುವರೆಯಬಹುದೋ ಎಂದು ಊಹಿಸಲಾಗದು. ಇಂತಹ ಸಂದರ್ಭದಲ್ಲಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಣ ಯುದ್ಧದ ಕಾರ್ಮೋಡ ಹೆಚ್ಚಾಗುತ್ತಿದೆ. ದಶಕಗಳಿಂದ ಹೊಗೆಯಾಡುತ್ತಿದ್ದ ಉದ್ವಿಗ್ನತೆ ಈಗ ವಿವಾದಿತ ʼಡ್ಯುರಾಂಡ್ ಲೈನ್ʼ ಗಡಿಯಲ್ಲಿ ಸಂಘರ್ಷವಾಗಿ ಸ್ಪೋಟಗೊಂಡಿದೆ.
ಈ ಡ್ಯೂರಾಂಡ್ ಲೈನ್ ಗಡಿಯು1893ರಲ್ಲಿ ಬ್ರಿಟಿಷ್ ಭಾರತದ ವಿದೇಶಾಂಗ ಕಾರ್ಯದರ್ಶಿ ಮಾರ್ಟಿಮರ್ ಡ್ಯುರಾಂಡ್ ಮತ್ತು ಅಫ್ಘಾನ್ ಅಮೀರ್ ಅಬ್ದುರ್ ರಹ್ಮಾನ್ ಖಾನ್ ನಡುವೆ ಒಪ್ಪಂದವಾದ ಗಡಿ ರೇಖೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾವನ್ನು ವಿಭಜಿಸುವ ರೇಖೆ ಇದು. ಆದರೆ, ಅಫ್ಘಾನಿಸ್ತಾನ ಇದನ್ನು ಎಂದಿಗೂ ಪೂರ್ಣವಾಗಿ ಒಪ್ಪಿಕೊಂಡಿಲ್ಲ.
ಒಂದು ಕಾಲದಲ್ಲಿ ಪರಸ್ಪರರ ವಿರುದ್ಧ ಗುಪ್ತ ತಂತ್ರಗಳನ್ನು ಬಳಸುತ್ತಿದ್ದ ಈ ಪ್ರದೇಶವು, ಈಗ ಉಭಯ ರಾಷ್ಟ್ರಗಳ ನಡುವಿನ ಹಗೆತನಕ್ಕೆ ಸಾಕ್ಷಿಯಾಗಿದೆ. ಫೆಬ್ರವರಿ 21ರಂದು ಪಾಕಿಸ್ತಾನವು ನಂಗರ್‌ಹಾರ್, ಪಕ್ತಿಯಾ ಹಾಗೂ ಖೋಸ್ಟ್‌ನಲ್ಲಿರುವ ಉಗ್ರರ ಅಡಗುದಾಣಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ತಾನು ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ (TTP) ಮತ್ತು ಐಸಿಸ್-ಕೆ (ISIS-K) ಗುಂಪುಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಹೇಳಿಕೊಂಡಿತು. ಇದಕ್ಕೆ ಪ್ರತಿಯಾಗಿ, ಫೆಬ್ರವರಿ 26ರಂದು ಅಫ್ಘಾನ್ ಪಾಕಿಸ್ತಾನದ ಆರು ಪ್ರಾಂತ್ಯಗಳ ಮೇಲೆ ಭೂಸೇನಾ ದಾಳಿ ನಡೆಸಿತು. ಇದಾದ ನಂತರ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ‘ನಮ್ಮ ತಾಳ್ಮೆಯ ಅಣೆಕಟ್ಟು ಒಡೆದಿದೆ’ ಎಂದು ಘೋಷಿಸಿದರು. ‘ಆಪರೇಷನ್ ಘಜಬ್ ಲಿಲ್ ಹಕ್’ ಮೂಲಕ ಕಾಬೂಲ್ ಮತ್ತು ಕಂದಹಾರ್ ಮೇಲೆ ದಾಳಿಗಳನ್ನು ತೀವ್ರಗೊಳಿಸಿದರು.
ಇದನ್ನೂ ಓದಿ : ಪಾಕ್-ಅಫ್ಘಾನ್ ಸಂಘರ್ಷ | ತಕ್ಷಣದ ಕದನ ವಿರಾಮಕ್ಕೆ ಎರಡೂ ರಾಷ್ಟ್ರಗಳು ಒಪ್ಪಿಗೆ
ಈ ಸಂಘರ್ಷ 2021ರಲ್ಲಿ ಅಫ್ಘಾನ್ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಸಂಘರ್ಷ ತೀವ್ರಗೊಂಡು, 2025ರ ಅಕ್ಟೋಬರ್‌ನಲ್ಲಿ ಗಡಿ ಚಕಮಕಿಯಾಗಿ ಪ್ರಾರಂಭವಾಯಿತು. ಅಂದರೆ, ಈ ಯುದ್ಧ ಮೊದಲು ಆರಂಭವಾಗಿದ್ದು, 9 ಆಕ್ಟೋಬರ್ 2025ರಂದು. ಪಾಕಿಸ್ತಾನವು ʼಆಪರೇಷನ್ ಖೈಬರ್ ಸ್ಟಾರ್ಮ್ʼ ಎಂಬ ಹೆಸರಿನಲ್ಲಿ ಅಫ್ಘಾನಿಸ್ತಾನದ ಕಾಬುಲ್‌ನಲ್ಲಿ ಟಿಟಿಪಿ ನಾಯಕ ನೂರ್ ವಾಲಿ ಮೆಹಸೂದ್‌ನನ್ನು ಗುರಿಯಾಗಿಸಿ ವಾಯುದಾಳಿ ನಡೆಸಿತು. ಇದಕ್ಕೆ ಪ್ರತಿಯಾಗಿ ಅಫ್ಘಾನ್ ದಾಳಿ ನಡೆಸಿ ಪಾಕಿಸ್ತಾನಿ ಸೈನಿಕರನ್ನು ಕೊಲ್ಲಲಾಯಿತು. ಮೊದಲಿನಿಂದಲೂ ಗಡಿವಿಚಾರಕ್ಕೆ ವೈರತ್ವ ಬೆಳೆಸಿಕೊಂಡಿದ್ದ ರಾಷ್ಟ್ರಗಳು ಆಕ್ಟೋಬರ್ ತಿಂಗಳಿನಲ್ಲಿ 10 ದಿನಗಳ ಕಾಲ ಸಂಘರ್ಷವನ್ನು ನಡೆಸಿದವು. ಕತಾರ್ ಮತ್ತು ಟರ್ಕಿ ದೇಶಗಳ ಮಧ್ಯಸ್ಥಿಕೆ ವಹಿಸಿ ಅಕ್ಟೋಬರ್ 19ರಂದು ಕದನವಿರಾಮ ಘೋಷಿಸಲಾಯಿತು.
ಆದಾದ ನಂತರ, ಫೆಬ್ರವರಿ 21ರಂದು ಆರಂಭವಾದ ದಾಳಿ – ಪ್ರತಿದಾಳಿಗಳು ಮುಗಿಯುವಂತೆ ಕಾಣುತ್ತಿಲ್ಲ. ಈಗಾಗಲೇ ಪಾಕಿಸ್ತಾನ ರಕ್ಷಣಾ ಸಚಿವರು ಮುಕ್ತಯುದ್ಧ (ಓಪನ್ ವಾರ್) ಘೋಷಿಸಿದ್ದಾರೆ. ಅಫ್ಘಾನಿಸ್ತಾನದ ಕಾಬುಲ್, ಕಂದಹಾರ್ ಸೇರಿದಂತೆ ಪ್ರಮುಖ ನಗರಗಳ ಮೇಲೆ ವಾಯು-ಭೂ ದಾಳಿಯನ್ನು ಪಾಕಿಸ್ತಾನ ಆರ್ಮಿ ನಡೆಸುತ್ತಿದೆ. ಈಗ ಸಂಘರ್ಷ ತಾರಕಕ್ಕೇರಿದೆ.
ಉಭಯ ರಾಷ್ಟ್ರಗಳ ನಡುವಿನ ಸಂಘರ್ಷದಲ್ಲಿ ಹಾನಿಯ ಅಂಕಿಅಂಶಗಳು ವಿವಾದಾಸ್ಪದವಾಗಿವೆ. 274 ತಾಲಿಬಾನ್ ಹೋರಾಟಗಾರರು ಹತರಾಗಿದ್ದಾರೆ ಮತ್ತು ತನ್ನ 12 ಸೈನಿಕರು ಮೃತಪಟ್ಟಿದ್ದಾರೆ ಎಂದು ಪಾಕ್ ಹೇಳಿದರೆ, 55 ಪಾಕಿಸ್ತಾನಿ ಸೈನಿಕರು ಸತ್ತಿದ್ದಾರೆ ಮತ್ತು ತನ್ನ 13 ತಾಲಿಬಾನಿಗಳು ಮೃತಪಟ್ಟಿದ್ದಾರೆ ಎಂದು ಅಫ್ಘಾನ್ ಹೇಳಿಕೊಂಡಿದೆ.
ಈ ಸಂಘರ್ಷದಲ್ಲಿ ಇತ್ತೀಚೆಗೆ ನಡೆದ ದೊಡ್ಡ ಬೆಳವಣೆಗೆ ಎಂದರೆ, ಮಾದಕ ವ್ಯಸನಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ನಗರದ ಆಸ್ಪತ್ರೆಯೊಂದರ ಮೇಲೆ ಪಾಕಿಸ್ತಾನ ಪಡೆಗಳು ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 400 ಮಂದಿ ಮೃತಪಟ್ಟು ಇತರ 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಪ್ರಕಟಿಸಿದೆ. ಆದರೆ ಪಾಕಿಸ್ತಾನ ಈ ಆರೋಪವನ್ನು ನಿರಾಕರಿಸಿದ್ದು, ಪೂರ್ವ ಅಫ್ಘಾನಿಸ್ತಾನದಲ್ಲಿ ಸೇನೆ ಮತ್ತು ಭಯೋತ್ಪಾದನಾ ಕೇಂದ್ರಗಳನ್ನು ಗುರಿ ಮಾಡಿ ಮಾತ್ರವೇ ದಾಳಿ ನಡೆದಿದೆ ಎಂದು ಹೇಳಿಕೊಂಡಿದೆ.
ಆದರೆ, ಈ ಅಂಕಿಅಂಶಗಳು ಮತ್ತು ಗಡಿ ಸಮಸ್ಯೆಯ ಬಿಕ್ಕಟ್ಟನ್ನು ಕೇವಲ ಸಣ್ಣ ಹಿಂಸಾಚಾರ ಎಂದು ಹೇಳಲಾಗದು. ಏಕೆಂದರೆ, ಈ ಸಂಘರ್ಷವು 1893ರಲ್ಲಿ ರೂಪುಗೊಂಡ 2,600 ಕಿ. ಮೀ. ಉದ್ದದ ‘ಡ್ಯುರಾಂಡ್ ಲೈನ್’ ಗಡಿಯೊಂದಿಗೆ ಬೆಸೆದುಕೊಂಡಿದೆ. ಈ ಗಡಿರೇಖೆಯನ್ನು ಅಫ್ಘಾನಿಸ್ತಾನದ ಯಾವುದೇ ಸರ್ಕಾರಗಳು ಈವರೆಗೆ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಈ ರೇಖೆಯು ಪಶ್ತೂನ್ ಬುಡಕಟ್ಟು ಭೂಮಿಯನ್ನು ಇಬ್ಭಾಗ ಮಾಡಿದ್ದು, ಪೂರ್ಣ ಪಶ್ತೂನ್ ಪ್ರದೇಶವು ಅಫ್ಘಾನ್‌ಗೆ ಸೇರಬೇಕೆಂದು ಅಫ್ಘಾನಿಸ್ತಾನವು ವಾದಿಸುತ್ತಿದೆ.
ಇಂದಿನ ದಿನದವರೆಗೂ ಸಂಘರ್ಷ ತೀವ್ರ ರೂಪ ತಾಳಿದೆ. ಅಫ್ಘಾನಿಸ್ತಾನದ 30ಕ್ಕೂ ಹೆಚ್ಚು ಪ್ರಾಂತ್ಯಗಳ ಮೇಲೆ ವಾಯುದಾಳಿ ನಡೆಸಿದೆ. ತಾಲಿಬಾನ್‌ನ ಸೈನ್ಯ ನೆಲೆಗಳು, ಟಿಟಿಪಿ ಕ್ಯಾಂಪ್‌ಗಳು ಗುರಿಯಾಗಿಸಿದೆ. ಇದರಲ್ಲಿ 500ಕ್ಕೂ ಹೆಚ್ಚು ತಾಲಿಬಾನ್ ಉಗ್ರರನ್ನು, 200ಕ್ಕೂ ಹೆಚ್ಚು ಗಡಿ ಪೋಸ್ಟ್‌ಗಳನ್ನು ನಾಶಮಾಡಿದ್ದೇವೆ ಎಂದು ಪಾಕ್ ಹೇಳಿದೆ.
ಅಫ್ಘಾನ್ ತಾಲಿಬಾನ್ ಪ್ರತಿದಾಳಿ ನಡೆಸಿ ಡ್ರೋನ್‌ಗಳು, ಆರ್ಟಿಲರಿ ಮತ್ತು ಗಡಿ ದಾಳಿಗಳ ಮೂಲಕ ಪ್ರತಿಕ್ರಿಯಿಸಿದೆ. ಅವರು 100ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಹತ್ಯೆಮಾಡಲಾಗಿದೆ ಹಾಗೂ ಹಲವು ಪೋಸ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಫ್ಘಾನ್ ತಾಲಿಬಾನ್ ಹೇಳಿದೆ. ಎರಡೂ ಕಡೆಯೂ ಸೈನಿಕರ ಸಾವುಗಳ ಜೊತೆಗೆ ನಾಗರಿಕರು ಬಲಿಯಾಗಿದ್ದಾರೆ. ಯುಎನ್ ಅಸಿಸ್ಟೆನ್ಸ್ ಮಿಷನ್ ಇನ್ ಅಫ್ಘಾನಿಸ್ತಾನ್ (UNAMA) ಪ್ರಕಾರ ಮಾರ್ಚ್ 15ರ ವರೆಗೆ ಕನಿಷ್ಠ 75 ನಾಗರಿಕರು ಸತ್ತು, 193 ಮಂದಿ ಗಾಯಗೊಂಡಿದ್ದಾರೆ. 1,15,000ಕ್ಕೂ ಹೆಚ್ಚು ಅಫ್ಘಾನ್‌ರು ಮತ್ತು 3,000 ಪಾಕಿಸ್ತಾನಿಗಳು ಸ್ಥಳವನ್ನು ಕಳೆದುಕೊಂಡಿದ್ದಾರೆ.
ಈ ಸಂಘರ್ಷಕ್ಕಾಗಿ ಚೀನಾ ಮಧ್ಯಸ್ಥಿಕೆಗೆ ಮುಂದಾಗಿದೆ, ಯುಎನ್ ಮತ್ತು ಕತಾರ್-ಟರ್ಕಿ ಮಧ್ಯಸ್ಥಿಕೆಯಲ್ಲಿ ಶಾಂತಿ ಮಾತುಕತೆಗಳು ನಡೆಯುತ್ತಿವೆ ಆದರೆ ಇದುವರೆಗೆ ಯಶಸ್ಸು ಕಂಡಿಲ್ಲ.
ತಾನೇ ಹುಟ್ಟುಹಾಕಿದ ತಾಲಿಬಾನ್ ಜೊತೆ ಸಂಘರ್ಷ
ಅಫ್ಘಾನ್‌ನಲ್ಲಿ ಮೂಲಭೂತವಾದಿ, ಸರ್ವಾಧಿಕಾರಿ ಆಡಳಿತ ನಡೆಸುತ್ತಿರುವ ತಾಲಿಬಾನ್ ಅನ್ನು ಬೆಳೆಸಿದ್ದೇ ಪಾಕಿಸ್ತಾನ ಎಂಬುದು ಸುಳ್ಳಲ್ಲ. 1990ರ ದಶಕದಲ್ಲಿ ಪಾಕಿಸ್ತಾನದ ಐಎಸ್‌ಐ ಗುಪ್ತಚರ ಸಂಸ್ಥೆಯು ತಾಲಿಬಾನ್ ರಚನೆಗೆ ನೇರವಾಗಿ ಸಹಾಯ ಮಾಡಿತ್ತು. ಅಫ್ಘಾನ್‌ನಲ್ಲಿ 1996ರಿಂದ 2001ರವರೆಗೆ ತಾಲಿಬಾನ್ ಅಧಿಕಾರದಲ್ಲಿದ್ದಾಗ ಅವರ ಆಡಳಿತವನ್ನು ಗುರುತಿಸಿದ ಮತ್ತು ಸಹಕಾರ ನೀಡಿದ ಮೂರು ರಾಷ್ಟ್ರಗಳಲ್ಲಿ ಪಾಕಿಸ್ತಾನವೂ (ಸೌದಿ, ಯುಎಇ- ಉಳಿದ ಎರಡು) ಒಂದಾಗಿತ್ತು. ಆ ಸಮಯದಲ್ಲಿ ಪಾಕ್ ಸಹಕಾರವನ್ನು ‘ಸ್ಟ್ರಾಟಜಿಕ್ ಡೆಪ್ತ್’ (ತಂತ್ರಗಾರಿಕೆ) ಎಂದು ಕರೆಯಲಾಗಿತ್ತು. ಭಾರತದ ವಿರುದ್ಧ ಅಫ್ಘಾನಿಸ್ತಾನದಲ್ಲಿ ಬೆಂಬಲಿತ ಶಕ್ತಿಯನ್ನು ಹೊಂದುವುದು ಪಾಕ್‌ನ ಉದ್ದೇಶವೆಂದೇ ಹೇಳಲಾಗಿತ್ತು. 2001ರಲ್ಲಿ ಅಮೆರಿಕ ನೇತೃತ್ವದ ‘ವಾರ್ ಆನ್ ಟೆರರ್’ ಗುಂಪಿಗೆ ಪಾಕಿಸ್ತಾನ ಸೇರಿಕೊಂಡರೂ, ತಾಲಿಬಾನ್‌ಗೆ ಪಾಕ್ ಗುಪ್ತವಾಗಿ ಆಶ್ರಯ-ಬೆಂಬಲ ನೀಡುತ್ತಿದೆ. ತಾಲಿಬಾನ್ ತಮ್ಮ ನಾಯಕರನ್ನು ಪಾಕಿಸ್ತಾನದಲ್ಲಿ ಮರೆಯಾಗಿಟ್ಟುಕೊಂಡು ಕಾರ್ಯಾಚರಣೆ ನಡೆಸುತ್ತಿದ್ದರು ಎಂಬ ಆರೋಪಗಳು ಇದ್ದವು.
ಅಫ್ಘಾನ್ ತಾಲಿಬಾನ್‌ನೊಂದಿಗೆ ಸೈದ್ಧಾಂತಿಕ ಭಿನ್ನತೆ ಹೊಂದಿರುವ ಟಿಟಿಪಿಯನ್ನು (TTP) ಅಫ್ಘಾನ್ ಆಡಳಿತವು ಹತ್ತಿಕ್ಕುತ್ತದೆ ಎಂದು ಪಾಕಿಸ್ತಾನ ನಿರೀಕ್ಷಿಸಿತ್ತು. ಆದರೆ, ಟಿಟಿಪಿ ವಿರುದ್ಧ ಅಫ್ಘಾನ್ ತಾಲಿಬಾನ್ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಬದಲಾಗಿ, ಟಿಟಿಪಿಯೇ ಪಾಕಿಸ್ತಾನದ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿತು. ಪರಿಣಾಮ, 2025ರಲ್ಲೇ 2,400ಕ್ಕೂ ಹೆಚ್ಚು ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಹತರಾಗಿದ್ದಾರೆ. ಇದು ಕಳೆದ ದಶಕದಲ್ಲೇ ಸಂಭವಿಸಿದ ಗರಿಷ್ಠ ಸಾವು-ನೋವಾಗಿದೆ. ಈ ಬೆನ್ನಲ್ಲೇ, ತಾಲಿಬಾನ್ ಮೇಲಿನ ತನ್ನ ಪ್ರಭಾವ ಕುಸಿಯುತ್ತಿದೆ ಎಂಬ ಆತಂಕ ಪಾಕಿಸ್ತಾನವನ್ನು ಕಾಡುತ್ತಿದೆ.
ಪಾಕಿಸ್ತಾನದ ಇಸ್ಲಾಮಾಬಾದ್, ಬಜೌರ್ ಹಾಗೂ ಬನ್ನೂನಲ್ಲಿ ನಡೆದ ಇತ್ತೀಚಿನ ದಾಳಿಗಳು ಪಾಕ್-ಅಫ್ಘಾನ್ ಸಂಘರ್ಷಕ್ಕೆ ಕಿಚ್ಚು ಹಚ್ಚಿವೆ. ಈ ದಾಳಿಗಳು ಅಫ್ಘಾನಿಸ್ತಾನ ಮೂಲದ ಉಗ್ರರಿಂದ ನಡೆದಿವೆ ಎಂದು ಪಾಕಿಸ್ತಾನ ದೂರಿದೆ. ಉಭಯ ರಾಷ್ಟ್ರಗಳ ನಡುವೆ 2025ರ ಅಕ್ಟೋಬರ್‌ನಲ್ಲಿ ಪ್ರಾದೇಶಿಕ ಮಧ್ಯಸ್ಥಿಕೆಯೊಂದಿಗೆ ನಡೆದ ಕದನ ವಿರಾಮ ಪ್ರಯತ್ನಗಳು ವಿಫಲವಾದವು. ಟಿಟಿಪಿ ವಿರುದ್ಧ ಕ್ರಮ ಕೈಗೊಳ್ಳಲು ತಾಲಿಬಾನ್ ಹಿಂಜರಿಯುತ್ತಿರುವುದಕ್ಕೆ ಪಶ್ತೂನ್ ಒಗ್ಗಟ್ಟು ಕುಸಿಯಬಹುದು ಮತ್ತು ತಮ್ಮವರು ಐಸಿಸ್-ಕೆ ಸೇರಬಹುದು ಎಂಬ ಭಯವೇ ಕಾರಣವಾಗಿದೆ.
ಭೌಗೋಳಿಕ ರಾಜಕಾರಣ
ಪಾಕ್-ಅಫ್ಘಾನ್ ಸಂಘರ್ಷದಲ್ಲಿ ಭೌಗೋಳಿಕ ರಾಜಕೀಯ ಬದಲಾವಣೆಗಳೂ ಸೇರಿವೆ. ಅಫ್ಘಾನಿಸ್ತಾನವು ‘ಭಾರತದ ವಸಾಹತು’ ಆಗಿ ಬದಲಾಗುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಕಳೆದ ವರ್ಷ, ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ನವದೆಹಲಿಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ, ಭಯೋತ್ಪಾದನೆಯನ್ನು ಖಂಡಿಸಿ ಭಾರತ-ಅಫ್ಘಾನ್ ಜಂಟಿ ಹೇಳಿಕೆ ನೀಡಿದವು. ಇದು ಪಾಕಿಸ್ತಾನದ ಕೆಂಗಣ್ಣಿಗೆ ಕಾರಣವಾಗಿದೆ. ಕಾಬೂಲ್ ಮತ್ತು ನವದೆಹಲಿಯ ನಡುವಿನ ಈ ರಾಜತಾಂತ್ರಿಕ ಸ್ನೇಹವು ತನ್ನನ್ನು ಸುತ್ತುವರಿಯುವ ತಂತ್ರವೆಂದು ಪಾಕಿಸ್ತಾನ ಭಾವಿಸಿದೆ.
ಆದಾಗ್ಯೂ, ಈ ಸಂಘರ್ಷವು ಅಫ್ಘಾನಿಸ್ತಾನಕ್ಕೆ ತಕ್ಷಣವೇ ಆರ್ಥಿಕ ಸಂಕಷ್ಟಕ್ಕೆ ದೂಡುತ್ತದೆ. ಯಾಕೆಂದರೆ, ಅಫ್ಘಾನಿಸ್ತಾನವು ವ್ಯಾಪಾರಕ್ಕಾಗಿ ಪಾಕಿಸ್ತಾನದ ಬಂದರುಗಳ ಮೇಲೆ ಅವಲಂಬಿತವಾಗಿದೆ. ಗಡಿ ಮುಚ್ಚುವುದರಿಂದ ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಳ್ಳುವ ಅಪಾಯವಿದೆ. ಟಿಎಪಿಐ (TAPI) ಗ್ಯಾಸ್ ಪೈಪ್‌ಲೈನ್‌ನಂತಹ ಬೃಹತ್ ಯೋಜನೆಗಳು ಅನಿಶ್ಚಿತತೆಗೆ ಸಿಲುಕಿವೆ. ಚೀನಾದ ಹೂಡಿಕೆಗಳು, ವಿಶೇಷವಾಗಿ ಸಿಪಿಇಸಿ (CPEC), ಭದ್ರತಾ ಭೀತಿಯನ್ನು ಎದುರಿಸುವ ಸಾಧ್ಯತೆಗಳಿವೆ.
ಜೊತೆಗೆ, ನಾಗರಿಕರ ಸಾವು-ನೋವು ಮತ್ತು ನಿರಾಶ್ರಿತರ ಸಮಸ್ಯೆ ಅಫ್ಘಾನಿಸ್ತಾನದ ಸಾಮಾಜಿಕ-ಆರ್ಥಿಕ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ದೀರ್ಘಕಾಲದ ಅಸ್ಥಿರತೆಯು ಬಲೂಚಿ ಪ್ರತ್ಯೇಕತಾವಾದಿಗಳಿಗೆ ಮತ್ತು ಐಸಿಸ್-ಕೆ ಗುಂಪಿಗೆ ಬಲ ತುಂಬುವ ಸಾಧ್ಯತೆಗಳೂ ಇವೆ. ಆದರೂ, ಉಭಯ ರಾಷ್ಟ್ರಗಳ ನಡುವೆ ಪೂರ್ಣ ಪ್ರಮಾಣದ ಯುದ್ಧದ ಸಾಧ್ಯತೆ ಕಡಿಮೆ ಇದೆಯೆಂದೇ ಹೇಳಲಾಗುತ್ತಿದೆ. ಏಕೆಂದರೆ, ಅಫ್ಘಾನಿಸ್ತಾನಕ್ಕೆ ವಾಯುಪಡೆಯ ಬಲವಿಲ್ಲ ಮತ್ತು ಪಾಕಿಸ್ತಾನವು ಎರಡು ಕಡೆಗಳಲ್ಲಿ (ಭಾರತ ಮತ್ತು ಅಫ್ಘಾನ್) ಸಂಘರ್ಷವನ್ನು ಎದುರಿಸುವಷ್ಟು ಆರ್ಥಿಕ ಸ್ಥಿತಿಯಲ್ಲಿಲ್ಲ.
ಪಾಕಿಸ್ತಾನವು ತನ್ನ ಪಶ್ಚಿಮ ಗಡಿಯಲ್ಲಿ ಶಾಂತಿ ಬಯಸಿದರೆ, ಅದು ತನ್ನ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳಬೇಕು. ಉಗ್ರಗಾಮಿಗಳನ್ನು ಬಳಸಿಕೊಳ್ಳುವ ತಂತ್ರವನ್ನು ಕೈಬಿಟ್ಟು, ಕಾಬೂಲ್‌ನೊಂದಿಗೆ ರಾಜಕೀಯ ಮಾತುಕತೆ ನಡೆಸಬೇಕು. ತನ್ನದೇ ದೇಶದ ಒಳಗಿರುವ ಮೂಲಭೂತವಾದದ ಬೇರುಗಳನ್ನು ಕಿತ್ತೊಗೆಯಬೇಕು. ಮುಖ್ಯವಾಗಿ, ಪಾಕಿಸ್ತಾನವು ಆತ್ಮಾವಲೋಕನ ಮಾಡಿಕೊಳ್ಳದ ಹೊರತು ತಾನೇ ಸೃಷ್ಟಿಸಿಕೊಂಡ ಈ ಅಸುರಕ್ಷತೆಯ ಚಕ್ರದಿಂದ ಹೊರಬರಲು ಸಾಧ್ಯವಿಲ್ಲ ಎಂದು ರಾಜಕೀಯ ವಿಶ್ಲೇಷಕರು ಭಾವಿಸಿದ್ದಾರೆ.
ಚೀನಾ ಮತ್ತು ಯುಎನ್ ಮಧ್ಯಸ್ಥಿಕೆಯಲ್ಲಿ ಶಾಂತಿ ಮಾತುಕತೆಗಳು ನಡೆಯುತ್ತಿವೆ. ಆದರೆ ಟಿಟಿಪಿ ಸಮಸ್ಯೆ ಪರಿಹಾರವಾಗದಿದ್ದರೆ ಸಂಘರ್ಷ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ. ಇದು ಪ್ರಾದೇಶಿಕ ಶಾಂತಿ, ಆರ್ಥಿಕತೆ ಮತ್ತು ಮಾನವೀಯ ಸಂಕಷ್ಟಕ್ಕೆ ದೊಡ್ಡ ಬೆದರಿಕೆಯಾಗಿದೆ.
ಈ ಸಂಘರ್ಷವು ಎರಡೂ ದೇಶಗಳ ನಡುವಿನ ಐತಿಹಾಸಿಕ ವಿಶ್ವಾಸದ ಕೊರತೆಯನ್ನು ಬಯಲು ಮಾಡಿದೆ. ಇಂತಹ ಸಂದರ್ಭದಲ್ಲಿ ಜಾಗತಿಕ ಸಮುದಾಯ ತ್ವರಿತ ಹಸ್ತಕ್ಷೇಪ ಮಾಡಬೇಕು. ಈ ಸಂಘರ್ಷವು ದಕ್ಷಿಣ ಏಷ್ಯಾದ ಭದ್ರತೆಗೆ ದೊಡ್ಡ ಪ್ರಶ್ನೆಯಾಗಿ ಪರಿಣಮಿಸಿದೆ.




