ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಜೈಲಿನಲ್ಲಿ ಮೃತಪಟ್ಟಿದ್ದಾರೆ ಎಂಬ ಊಹಾಪೋಹಗಳು ಮತ್ತು ವದಂತಿಗಳು ಹರಡಿರುವ ಬೆನ್ನಲ್ಲೇ, ಅವರನ್ನು ಭೇಟಿ ಮಾಡಲು ಜೈಲಿನ ಬಳಿ ತೆರಳಿದ್ದ ಇಮ್ರಾನ್ ಸಹೋದರಿಯರ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ವದಂತಿಯ ನಡುವೆ ಪಾಕ್ ಸೇನಾ ಮುಖ್ಯಸ್ಥ ಸಯ್ಯದ್ ಅಸೀಮ್ ಮುನೀರ್ ಅವರು ದಿಢೀರ್ ಸಭೆ ಕರೆದು ದೇಶದ ಭದ್ರತೆಯ ಬಗ್ಗೆ ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಇಮ್ರಾನ್ ಖಾನ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿಲ್ಲ. ಇದು ಅನುಮಾನಕ್ಕೆ ಎಡೆಮಾಡಿದೆ.
ರಾವಲ್ಪಿಂಡಿಯ ಅಡಿಯಾಲಾ ಜೈಲಿನ ಹೊರಗೆ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಲು ಒತ್ತಾಯಿಸಿ ಆಗಮಿಸಿದ ಅವರ ಸಹೋದರಿಯರಾದ ನೊರೀನ್ ಖಾನ್, ಅಲೀಮಾ ಖಾನ್ ಮತ್ತು ಉಜ್ಮಾ ಖಾನ್ ಹಾಗೂ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಬೆಂಬಲಿಗರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ.
ಇಮ್ರಾನ್ ಖಾನ್ ಅವರನ್ನು 2023ರಿಂದ ಅಡಿಯಾಲಾ ಜೈಲಿನಲ್ಲಿ ಇರಿಸಲಾಗಿದೆ. ಕಳೆದ ಮೂರು ವಾರಗಳಿಂದ ತಮ್ಮ ಸಹೋದರನನ್ನು ಭೇಟಿ ಮಾಡಲು ಜೈಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದು ಖಾನ್ ಅವರ ಸಹೋದರಿಯರು ಆರೋಪಿಸಿದ್ದಾರೆ. ಭೇಟಿಗೆ ಅವಕಾಶ ಕೋರಿ ಜೈಲಿನ ಹೊರಗೆ ಶಾಂತಿಯುತವಾಗಿ ಕುಳಿತಿದ್ದಾಗ ಪೊಲೀಸರು ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಪಿಟಿಐ ಪಕ್ಷ ತಿಳಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕಾರ್ಪೊರೇಟ್ ಹಿತಕ್ಕಾಗಿ ಕಾರ್ಮಿಕರ ಹಕ್ಕುಗಳ ಹತ್ತಿಕ್ಕುತ್ತಿರುವ ಮೋದಿ
ಈ ಬಗ್ಗೆ ಪಂಜಾಬ್ ಪೊಲೀಸ್ ಮುಖ್ಯಸ್ಥ ಉಸ್ಮಾನ್ ಅನ್ವರ್ ಅವರಿಗೆ ಪತ್ರ ಬರೆದಿರುವ ಇಮ್ರಾನ್ ಖಾನ್ ಸಹೋದರಿಯರು, ಇದೊಂದು “ಯೋಜಿತ ಮತ್ತು ಕ್ರೂರ ದಾಳಿ” ಎಂದು ಹೇಳಿದ್ದಾರೆ.
ಸಹೋದರಿ ನೊರೀನ್ ನಿಯಾಜಿ ಅವರು ಘಟನೆಯನ್ನು ವಿವರಿಸುತ್ತಾ, “ನಾವು ಇಮ್ರಾನ್ ಖಾನ್ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದೆವು. ಆದರೆ, ಯಾವುದೇ ಮುನ್ಸೂಚನೆ ಇಲ್ಲದೆ ಬೀದಿ ದೀಪಗಳನ್ನು ಆರಿಸಿ, ಕತ್ತಲೆಯಲ್ಲಿ ನಮ್ಮ ಮೇಲೆ ಹಲ್ಲೆ ನಡೆಸಲಾಯಿತು. 71 ನೇ ವಯಸ್ಸಿನಲ್ಲಿ, ನನ್ನನ್ನು ಕೂದಲಿನಿಂದ ಹಿಡಿದು ರಸ್ತೆಯ ಮೇಲೆ ಎಳೆದಾಡಲಾಯಿತು,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಟಿಐ ಮುಖ್ಯಸ್ಥರಾಗಿರುವ ಇಮ್ರಾನ್ ಖಾನ್ ಅವರನ್ನು ಆಗಸ್ಟ್ 2023 ರಿಂದ ವಿವಿಧ ಪ್ರಕರಣಗಳಲ್ಲಿ ಜೈಲಿನಲ್ಲಿಡಲಾಗಿದೆ. ಕಳೆದ ಒಂದು ತಿಂಗಳಿನಿಂದ ಅವರ ಭೇಟಿಗೆ ಅಘೋಷಿತ ನಿಷೇಧ ಹೇರಲಾಗಿದೆ. ಇದೇ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅವರ ಸಾವಿನ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ.
ಖೈಬರ್-ಪಖ್ತುಂಕ್ವಾ ಮುಖ್ಯಮಂತ್ರಿ ಸೋಹೈಲ್ ಅಫ್ರಿದಿ ಅವರು ಸತತ ಏಳು ಬಾರಿ ಪ್ರಯತ್ನಿಸಿದರೂ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಲು ಜೈಲು ಅಧಿಕಾರಿಗಳು ಅವಕಾಶ ನೀಡಿಲ್ಲ ಎಂದು ಇಮ್ರಾನ್ ಖಾನ್ ಅವರ ವಕೀಲರು ಕಿಡಿಕಾರಿದ್ದಾರೆ.





