ಜಗತ್ತೇ ಪ್ರೇಮಿಗಳ ದಿನದಂದು (ವ್ಯಾಲೆಂಟೈನ್ಸ್ ಡೇ) ಪ್ರೀತಿ-ಸೌಹಾರ್ದತೆಯನ್ನು ಹಂಚಿಕೊಳ್ಳುತ್ತಿದ್ದರೆ, ಅಮೆರಿಕದ ಶ್ವೇತಭವನ ಮಾತ್ರ ತನ್ನ ರಾಜಕೀಯ ವೈರಿಗಳ ಅಸಹಾಯಕತೆಯನ್ನು ಅಣಕಿಸುವಂತಹ ವಿವಾದಾತ್ಮಕ ‘ಡಿಜಿಟಲ್ ಕಾರ್ಡ್’ಗಳನ್ನು ಬಿಡುಗಡೆ ಮಾಡಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ರಾಜತಾಂತ್ರಿಕ ಘನತೆಯನ್ನು ಮರೆತು, ಬಂಧಿತ ನಾಯಕರೊಬ್ಬರ ದಯನೀಯ ಸ್ಥಿತಿಯನ್ನು ಹಾಸ್ಯದ ವಸ್ತುವನ್ನಾಗಿ ಮಾಡಿಕೊಂಡಿದೆ.
ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ ಅವರು ಸದ್ಯ ಅಮೆರಿಕದ ಸೇನೆಯ ವಶದಲ್ಲಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿ, ಕೈಕೋಳ ಧರಿಸಿ ಕುಳಿತಿರುವ ಮಡುರೊ ಅವರ ನೈಜ ಮತ್ತು ಸಂಕಷ್ಟದ ಪರಿಸ್ಥಿತಿಯ ಫೋಟೋವನ್ನೇ ಶ್ವೇತಭವನವು ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದೆ. ಇದರ ಮೇಲೆ “You captured my heart” (ನೀನು ನನ್ನ ಹೃದಯವನ್ನೇ ಸೆರೆಹಿಡಿದೆ) ಎಂಬ ಒಕ್ಕಣೆಯನ್ನು ಬರೆಯುವ ಮೂಲಕ, ‘ಸೆರೆ’ ಅಥವಾ ‘ಬಂಧನ’ದ ನೋವನ್ನು ವಿಕೃತವಾಗಿ ಆಚರಿಸಲಾಗಿದೆ. ಒಬ್ಬ ಮಾಜಿ ರಾಷ್ಟ್ರದ ಮುಖ್ಯಸ್ಥನು ಬಂಧನದಲ್ಲಿರುವಾಗ, ಆತನನ್ನು ಪ್ರೇಮಿಗಳ ದಿನದ ತಮಾಷೆಗೆ ಬಳಸಿಕೊಳ್ಳುವುದು ಅಮೆರಿಕದ ಆಡಳಿತದ ಕಟು ಮನಸ್ಥಿತಿಯನ್ನು ತೋರಿಸುತ್ತದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಖರ್ಗೆ ಭಾಷಣ ಕಿತ್ತು ಹಾಕಿದ್ದು ಖಂಡನೀಯ; ಅಂದು ದ್ರೋಣಾಚಾರ್ಯ, ಇಂದು ಸಂಘಾಚಾರ್ಯ!
ಮತ್ತೊಂದು ಕಾರ್ಡ್‌ನಲ್ಲಿ ಗ್ರೀನ್‌ಲ್ಯಾಂಡ್ ದ್ವೀಪದ ಭೂಪಟವನ್ನು ಹಾಕಿ, “ನಮ್ಮ ಸಂಬಂಧವನ್ನು ವ್ಯಾಖ್ಯಾನಿಸುವ ಸಮಯ ಬಂದಿದೆ” (It’s time we define our situationship) ಎಂದು ಬರೆಯಲಾಗಿದೆ. ಬೇರೊಂದು ದೇಶದ ಭೂಭಾಗವನ್ನು ಖರೀದಿಸಲು ಟ್ರಂಪ್ ಹಿಂದೆ ತೋರಿದ್ದ ವಿವಾದಾತ್ಮಕ ಆಸಕ್ತಿಯನ್ನು ಇದು ನೆನಪಿಸುತ್ತದೆ. ಅಂತಾರಾಷ್ಟ್ರೀಯ ಸಂಬಂಧಗಳನ್ನು ಕೇವಲ ವ್ಯವಹಾರಿಕವಾಗಿ ಮತ್ತು ಲಘುವಾಗಿ ಕಾಣುವ ಟ್ರಂಪ್ ಅವರ ಧೋರಣೆಗೆ ಇದು ಕನ್ನಡಿ ಹಿಡಿದಂತಿದೆ.
ವ್ಯಕ್ತಿಗತ ದ್ವೇಷ ಮತ್ತು ರಾಜಕೀಯ ಅಜೆಂಡಾಗಳನ್ನು ಪ್ರದರ್ಶಿಸುವ ಕಾರ್ಡ್‌ಗಳು ಶ್ವೇತಭವನದಿಂದ ಬಿಡುಗಡೆಯಾಗಿರುವುದು ಅಮೆರಿಕದ ಇತಿಹಾಸದಲ್ಲಿ ಕಪ್ಪು ಚುಕ್ಕೆ ಎನ್ನಲಾಗುತ್ತಿದೆ. “ಪ್ರೀತಿಯ ದಿನದಂದು ದ್ವೇಷ ಮತ್ತು ಅಧಿಕಾರ ಪ್ರದರ್ಶನ ಮಾಡುವುದು ಎಷ್ಟರಮಟ್ಟಿಗೆ ಸರಿ?” ಎಂದು ಮಾನವ ಹಕ್ಕುಗಳ ಪ್ರತಿಪಾದಕರು ಪ್ರಶ್ನಿಸಿದ್ದಾರೆ. ಸಂಕಷ್ಟದಲ್ಲಿರುವವರ ಬಗ್ಗೆ ಕನಿಷ್ಠ ಅನುಕಂಪ ತೋರದ ಈ ನಡೆ, ಶ್ವೇತಭವನದ ನೈತಿಕತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.





