ದಕ್ಷಿಣ ಮಾಸ್ಕೋದಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ ರಷ್ಯಾದ ಹಿರಿಯ ಮಿಲಿಟರಿ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ರಷ್ಯಾ ಸೇನೆಯ ಜನರಲ್ ಫನಿಲ್ ಸರ್ವರೋವ್ ಸೋಮವಾರ ಬೆಳಿಗ್ಗೆ ಯಾಸೆನೆವೊ ಜಿಲ್ಲೆಯಲ್ಲಿ ಸ್ಫೋಟ ಸಂಭವಿಸಿದಾಗ ಸಾವನ್ನಪ್ಪಿದ್ದಾರೆ ಎಂದು ರಷ್ಯಾ ಹೇಳಿಕೊಂಡಿದೆ.
ಫನಿಲ್ ಸರ್ವರೋವ್ (56) ರಷ್ಯಾದ ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್‌ನ ಕಾರ್ಯಾಚರಣಾ ತರಬೇತಿ ನಿರ್ದೇಶನಾಲಯದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಉಕ್ರೇನ್-ರಷ್ಯಾ ಸಂಘರ್ಷ | ಮಾತುಕತೆ ವಿಫಲ: ರಷ್ಯಾ ಡ್ರೋನ್ ದಾಳಿಗೆ ಉಕ್ರೇನ್‌ನ 9 ಮಂದಿ ಬಲಿ
“ಕೊಲೆಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಹಲವು ಆಯಾಮಗಳಲ್ಲಿ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಉಕ್ರೇನ್ ಈ ದಾಳಿ ನಡೆಸಿರುವ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ” ಎಂದು ರಷ್ಯಾದ ತನಿಖಾ ಸಮಿತಿಯ ಅಧಿಕೃತ ವಕ್ತಾರ ಸ್ವೆಟ್ಲಾನಾ ಪೆಟ್ರೆಂಕೊ ಹೇಳಿದ್ದಾರೆ.
ಕಾರಿನ ಅಡಿಯಲ್ಲಿ ಸುಧಾರಿತ ಸ್ಫೋಟಕ ಇರಿಸಲಾಗಿತ್ತು. ಕಾರು ಚಲಿಸಲು ಪ್ರಾರಂಭಿಸಿದ ಸ್ವಲ್ಪ ಸಮಯದ ನಂತರ ಸ್ಫೋಟಗೊಂಡಿದೆ ಎಂದು ಉಕ್ರೇನ್ ನ್ಯಾಷನಲ್ ನ್ಯೂಸ್ ವರದಿ ಮಾಡಿದೆ.
ರಷ್ಯಾ ಉಕ್ರೇನ್ ನಡುವೆ ಯುದ್ಧ ತೀವ್ರಗೊಳ್ಳುತ್ತಿರುವ ನಡುವೆ ಈ ಹತ್ಯೆ ನಡೆದಿದೆ. ಕಳೆದ ವಾರದಲ್ಲಿ ರಷ್ಯಾ ಸುಮಾರು 1,300 ಡ್ರೋನ್ ದಾಳಿ, ಸುಮಾರು 1,200 ಬಾಂಬ್ ದಾಳಿ ನಡೆಸಿದೆ. ಒಂಬತ್ತು ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ. ಹಾಗೆಯೇ ಯುದ್ಧ ಅಂತ್ಯಗೊಳಿಸುವ ನಿಟ್ಟಿನಲ್ಲಿ ಉಕ್ರೇನ್ ಮತ್ತು ಯುನೈಟೆಡ್ ಸ್ಟೇಟ್ಸ್ ಮಾತುಕತೆಗಳನ್ನು ಮುಂದುವರಿಸುತ್ತಿವೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.





