ಬಲಪಂಥೀಯ ಸಿದ್ಧಾಂತವನ್ನು ಮರಳಿ ಸ್ಥಾಪಿಸಲು ಪ್ರಯತ್ನಿಸುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅದರ ಮಿತ್ರಪಕ್ಷಗಳು ದಕ್ಷಿಣ ಅಮೆರಿಕದಿಂದ ಕೆಂಪು ಅಲೆಯನ್ನು ಹಿಮ್ಮೆಟ್ಟಿಸುತ್ತಿದ್ದಾರೆ. ಲ್ಯಾಟಿನ್ ಅಮೆರಿಕದಲ್ಲಿ ಕೆಲವು ಎಡಪಂಥೀಯ ಸರ್ಕಾರಳಿದ್ದರೂ, ಅವುಗಳಲ್ಲಿ ಎರಡು ರಾಷ್ಟ್ರಗಳು ಸಾರ್ವಜನಿಕವಾಗಿ ಅಮೆರಿಕದ ಸರ್ವಾಧಿಕಾರಿ ನಡೆಯನ್ನು ಧಿಕ್ಕರಿಸುತ್ತಿವೆ. ಒಂದು ‘ವೆನೆಜುವೆಲಾ’ ಮತ್ತೊಂದು ‘ಕ್ಯೂಬಾ’.
ಡೊನಾಲ್ಡ್ ಟ್ರಂಪ್ ತನ್ನ ಮೊದಲ ಅವಧಿಯಲ್ಲಿಯೇ ವೆನೆಜುವೆಲಾದ ಮೇಲೆ ಕಣ್ಣು ಇಟ್ಟಿದ್ದರು. ಮೊದಲ ಸಲ ಅಧಿಕಾರದಲ್ಲಿರುವಾಗಲೇ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮೇಲೆ ಮಾದಕ ವಸ್ತು ಕಳ್ಳಸಾಗಣೆಯ ಆರೋಪ ಮಾಡಿದ್ದರು. ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವದ ಮೂಲಕ ಜನರಿಂದ ಆಯ್ಕೆಯಾದ ಅಧ್ಯಕ್ಷ ನಿಕೋಲಸ್ ಮಡುರೊ ಇದ್ದರೂ, ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ವೆನೆಜುವೆಲಾದ ವಿರೋಧ ಪಕ್ಷದ ರಾಜಕಾರಣಿ ಜುವಾನ್ ಗೈಡೊ ಅವರನ್ನು ವೆನೆಜುವೆಲಾದ ಹಂಗಾಮಿ ಅಧ್ಯಕ್ಷರೆಂದು ನೇಮಕಮಾಡಿದ್ದವು.
2025 ರಲ್ಲಿ ಟ್ರಂಪ್ ಎರಡನೇ ಅವಧಿಯಲ್ಲಿ ಅಧಿಕಾರಕ್ಕೆ ಬಂದ ನಂತರ, ತಕ್ಷಣದ ವಿದೇಶಾಂಗ ನೀತಿಯು ವೆನೆಜುವೆಲಾ ಮತ್ತು ದಕ್ಷಿಣ ಅಮೆರಿಕವೇ ಆಗಿತ್ತು. “ಮಾದಕವಸ್ತುಗಳ ವಿರುದ್ಧ ಯುದ್ಧ” ಮತ್ತು “ಅಧ್ಯಕ್ಷ ಮಡುರೊ ವಿಶ್ವದ ಅತಿದೊಡ್ಡ ಮಾದಕವಸ್ತು ಕಳ್ಳಸಾಗಣೆದಾರ” ಎಂದು ಟ್ರಂಪ್ ಆಡಳಿತವು ದೂಷಿಸಿತ್ತು.
ಇದನ್ನು ಓದಿ : ವೆನೆಜುವೆಲಾ ಅಧ್ಯಕ್ಷ ಸೆರೆ : ಟ್ರಂಪ್ ನಡೆ ಎಷ್ಟು ಸರಿ?
ವೆನೆಜುವೆಲಾದಿಂದ ಮೀನು ಹಿಡಿಯಲು ಸಮುದ್ರಕ್ಕೆ ಬರುತ್ತಿದ್ದ ನಾಗರಿಕರ ದೋಣಿಗಳ ಮೇಲೆ ಅಮೆರಿಕವು ಬಾಂಬ್ ದಾಳಿ ಮಾಡಲು ಆರಂಭಿಸಿತು. ಅವುಗಳು ಮಾದಕ ವಸ್ತುಗಳನ್ನು ಸಾಗಿಸುತ್ತಿವೆ ಎಂದು ಆರೋಪಿಸಿ, ಅಮೆರಿಕವು ತನ್ನ ಜೆಟ್‌ಗಳು, ಯುದ್ಧನೌಕೆಗಳನ್ನು ಹಾಗೂ ಸಾವಿರಾರು ನೌಕಪಡೆಯ ಸೈನಿಕರನ್ನು ಕೆರಿಬಿಯನ್ ಸಮುದ್ರದಲ್ಲಿ ನಿಯೋಜಿಸಿತ್ತು. ವೆನೆಜುವೆಲಾ ವಿರುದ್ಧ ರಹಸ್ಯ ಕಾರ್ಯಚರಣೆ ನಡೆಸಲು ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿಗೆ (ಸಿಐಎ) ಅಧಿಕಾರ ನೀಡಿದ್ದೇನೆ. ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ “ಸಮಯ ಮುಗಿದಿದೆ” ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದರು.
ಅಧಿಕಾರ ಕಿತ್ತುಕೊಳ್ಳುವ ಹುನ್ನಾರ
ನಿಕೊಲಸ್ ಮಡುರೊ ಸ್ಪ್ಯಾನಿಶ್ ಟಿವಿ ಒಂದಕ್ಕೆ ಸಂದರ್ಶನ ನೀಡಿದ ಮರುದಿನದಂದು (ಜ.3) ಅಮೆರಿಕ ದಾಳಿ ನಡೆಸಿದೆ. ಇದನ್ನು ಲ್ಯಾಟಿನ್ ಅಮೆರಿಕದಲ್ಲಿ ನಡೆದ ದೊಡ್ಡ ಪ್ರಮಾಣದ ವಾಯುದಾಳಿ ಎನ್ನಬಹುದು. ವಾಯು ದಾಳಿ ಆದ ತಕ್ಷಣವೇ ವೆನೆಜುವೆಲಾ ಸರ್ಕಾರವು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ಅಮೆರಿಕದ ನಡೆಯನ್ನು ಖಂಡಿಸಿದೆ.
ಅಮೆರಿಕ ನಡೆಸಿದ ದಾಳಿಯನ್ನು ಟ್ರಂಪ್ ಒಪ್ಪಿಕೊಂಡು, ‘ಅಧ್ಯಕ್ಷ ನಿಕೊಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಸೆರೆ ಹಿಡಿದುಕೊಂಡು ದೇಶದಿಂದ ಹೊರಗೆ ಕರೆದೊಯ್ಯಲಾಗಿದೆ’ ಎಂದು ‘ಟ್ರುಥ್ ಸೋಷಿಯಲ್’ ಮೀಡಿಯಾದಲ್ಲಿ ಹೇಳಿದ್ದರು.

ಈಗ ಪ್ರಜಾಪ್ರಭುತ್ವದ ನೆಲೆಯಾದ ವೆನೆಜುವೆಲಾ ಎಂಬ ಪುಟ್ಟ ದೇಶದ ಕಡೆ ಇಡೀ ಜಗತ್ತು ನೋಡುತ್ತಿದೆ. ಸಮಾಜವಾದಿ ಸಿದ್ಧಾಂತಗಳನ್ನು ಒಳಗೊಂಡಿದ್ದ ಕ್ರಾಂತಿಕಾರಿ ಸೈಮಾನ್ ಬೊಲಿವಾರ್ ದಾರಿಲ್ಲಿ ನಡೆಯುತ್ತಿದ್ದ ಅಧ್ಯಕ್ಷ ನಿಕೊಲಸ್ ಮಡುರೊ ಅವರ ಅಪಹರಣವು ಟ್ರಂಪ್ ಅವರ ಬಂಡವಾಳಶಾಹಿ ಹಿತಾಸಕ್ತಿಗಳ ಆಕ್ರಮಣಕಾರಿ ನಿಲುವನ್ನು ತೋರಿಸುತ್ತದೆ. ಇದರ ಮೂಲಕ ಸಮಾಜವಾದಿ ಸಿದ್ಧಾಂತ ಅಂತ್ಯವಾಗಬಹುದೇ ಎಂಬ ಪ್ರಶ್ನೆಗೆ ತಕ್ಷಣವೇ ಉತ್ತರವಿಲ್ಲವಾದರೂ, ಟ್ರಂಪ್ ನೀತಿಯ ಮುಂದೆ ತಲೆಬಾಗಿಸಬೇಕಾಗಬಹುದು ಎಂಬ ಎಚ್ಚರಿಕೆಯ ಗಂಟೆಯಾಗಿದೆ.

2025ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದ ವೆನೆಜುವೆಲಾದ ಬಲಪಂಥೀಯ ಹಾಗೂ ವಿರೋಧ ಪಕ್ಷದ ನಾಯಕಿ ಮರಿಯಾ ಕೊರೊನಾ ಮಚಾಡೊ ಕೆಲ ವರ್ಷಗಳಿಂದ ಟ್ರಂಪ್ ಅವರ ನೀತಿಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತ ಬಂದಿದ್ದಾರೆ. ಆದರೆ ತನ್ನ ದೇಶವಾದ ವೆನೆಜುವೆಲಾದ ಮೇಲೆ ಅಮೆರಿಕ ನಡೆಸಿದ ವಾಯು ದಾಳಿ ಹಾಗೂ ಹಾಲಿ ಅಧ್ಯಕ್ಷರ ಅಪಹರಣದ ಬಗ್ಗೆ ಇದುವರೆಗೂ ಪ್ರತಿಕ್ರಿಯಿಸದೆ ಇರುವುದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದಾರೆ.
ಟ್ರಂಪ್ ಗೆ ಯಾಕಿಷ್ಟು ಆಸಕ್ತಿ
ಮೊದಲನೆಯದಾಗಿ, ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಅಮೆರಿಕವು ತನ್ನ ಪ್ರಾಬಲ್ಯವನ್ನು ಹೇರಲು ಬಯಸುತ್ತಿರುವುದು ಗೊತ್ತಿರುವ ಸಂಗತಿಯೇ. ಅದಕ್ಕೆ ಪ್ರಸ್ತುತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನಷ್ಟು ಶಕ್ತಿ ತುಂಬುತ್ತಿದ್ದಾರೆ. ಅಮೆರಿಕದ ಸ್ಥಾಪಕ ಪಿತಾಮಹ ಹಾಗೂ ಐದನೇ ಅಧ್ಯಕ್ಷರಾಗಿದ್ದ ಜೇಮ್ಸ್ ಮನ್ರೋ 1823ರಲ್ಲಿ ಜಗತ್ತಿನ ಪಶ್ಚಿಮ ಭಾಗದಲ್ಲಿ ಯುರೋಪಿಯನ್ ವಸಾಹತುಶಾಹಿಯನ್ನು ವಿರೋಧಿಸುವುದು ಯುನೈಟೆಡ್ ಸ್ಟೇಟ್ಸ್ ವಿದೇಶಾಂಗ ನೀತಿಯ ನಿಲುವಾಗಿದೆ ಎಂದಿದ್ದರು. ನಂತರ ಇದನ್ನು ಮನ್ರೋ ಸಿದ್ಧಾಂತ ಎಂದು ಕರೆಯಲಾಯಿತು. ಈ ನೀತಿಯಿಂದ ಲ್ಯಾಟಿನ್ ಅಮೆರಿಕದಲ್ಲಿ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಿ, ಇಡೀ ಲ್ಯಾಟಿನ್ ಅಮೆರಿಕವನ್ನು ತನ್ನ ಹಿತ್ತಲು ಎಂದು ಕರೆದುಕೊಂಡಿತು.
ಮನ್ರೋ ಸಿದ್ಧಾಂತವು, ಲ್ಯಾಟಿನ್ ಅಮೆರಿಕದಲ್ಲಿ ಹೊರಗಿನ ಶಕ್ತಿಗಳ ಪ್ರಭಾವ ಅಥವಾ ನಿಯಂತ್ರಣವನ್ನು ಅಮೆರಿಕ ನಿರಾಕರಿಸಬೇಕು ಮತ್ತು ಜಗತ್ತಿನ ಪಶ್ಚಿಮ ಭಾಗವು ಅಮೆರಿಕದ ರಾಜಕೀಯ, ಆರ್ಥಿಕ ಮತ್ತು ಮಿಲಿಟರಿ ಪ್ರಭಾವದ ಅಡಿಯಲ್ಲಿ ಉಳಿಯುವಂತೆ ನೋಡಿಕೊಳ್ಳಬೇಕು ಎಂದು ಪ್ರತಿಪಾದಿಸುತ್ತದೆ.
ಚೀನಾ ಪ್ರಭಾವ
ಎರಡನೆಯದಾಗಿ, ಅಮೆರಿಕವು ತನ್ನ ಪ್ರಾಬಲ್ಯವನ್ನು ಬಲಪಡಿಸುವುದರ ಜೊತೆಗೆ, ಲ್ಯಾಟಿನ್ ಅಮೆರಿಕದ ಪ್ರದೇಶದಲ್ಲಿ ಚೀನಾ ಮತ್ತು ರಷ್ಯಾದ ಪ್ರಭಾವವನ್ನು ದೂರವಿಡಲು ಬಯಸುತ್ತದೆ. ಆದರೆ ಚೀನಾ ತನ್ನ ಬೆಲ್ಟ್ ಆಂಡ್ ರೋಡ್ ಇನಿಶಿಯೇಟಿವ್ (BRI) ಮೂಲಕ ಲ್ಯಾಟಿನ್ ಅಮೆರಿಕದಲ್ಲಿ ಈಗಾಗಲೇ ಭಾರಿ ಹೂಡಿಕೆಗಳನ್ನು ಮಾಡಿದೆ. ಚೀನಾದ ರಾಜಧಾನಿ ಬೀಜಿಂಗ್ ನಲ್ಲಿ ಈ ಕುರಿತು ಸುಮಾರು 24 ಸಹಿಗಳನ್ನು ಮಾಡಲಾಗಿದೆ. ಚೀನಾವು ಲ್ಯಾಟಿನ್ ಅಮೆರಿಕ ದೇಶಗಳ ಅತಿದೊಡ್ಡ ಅಥವಾ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ ಕೂಡ ಆಗಿದೆ.
ಟ್ರಂಪ್ ತಮ್ಮ ಎರಡನೇ ಅವಧಿಯಲ್ಲಿ ಬ್ರೆಜಿಲ್ ದೇಶದ ಜೈರ್ ಬೋಲ್ಸೊನಾರೊದಿಂದ(ಮಾಜಿ ಅಧ್ಯಕ್ಷ) ಅರ್ಜೆಂಟೀನಾದ ಅಧ್ಯಕ್ಷ ಜೇವಿಯರ್ ಮಿಲೀವರೆಗೆ ತೀವ್ರ ಬಲಪಂಥೀಯ ವ್ಯಕ್ತಿಗಳನ್ನು ಬೆಂಬಲಿಸಿದ್ದಾರೆ. ಮಧ್ಯ ಅಮೆರಿಕದ ಹೊಂಡುರಾಸ್‌ನಲ್ಲಿ, ಟ್ರಂಪ್ ಅವರ ಅನುಮೋದಿತ ಬಲಪಂಥೀಯ ಅಭ್ಯರ್ಥಿ ನಾಸ್ರಿ ಅಸ್ಫುರಾ ಕಳೆದ ತಿಂಗಳು ಅಧ್ಯಕ್ಷ ಚುನಾವಣೆಯಲ್ಲಿ ಗೆದ್ದರು.
ಬಲಪಂಥೀಯ ಸಿದ್ಧಾಂತವನ್ನು ಮರಳಿ ಸ್ಥಾಪಿಸಲು ಪ್ರಯತ್ನಿಸುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅದರ ಮಿತ್ರಪಕ್ಷಗಳು ದಕ್ಷಿಣ ಅಮೆರಿಕದಿಂದ ಕೆಂಪು ಅಲೆಯನ್ನು ಹಿಮ್ಮೆಟ್ಟಿಸುತ್ತಿದ್ದಾರೆ. ಲ್ಯಾಟಿನ್ ಅಮೆರಿಕದಲ್ಲಿ ಕೆಲವು ಎಡಪಂಥೀಯ ಸರ್ಕಾರಳಿದ್ದರೂ, ಅವುಗಳಲ್ಲಿ ಎರಡು ರಾಷ್ಟ್ರಗಳು ಸಾರ್ವಜನಿಕವಾಗಿ ಅಮೆರಿಕದ ಸರ್ವಾಧಿಕಾರಿ ನಡೆಯನ್ನು ಧಿಕ್ಕರಿಸುತ್ತಿವೆ. ಒಂದು ‘ವೆನೆಜುವೆಲಾ’ ಮತ್ತೊಂದು ‘ಕ್ಯೂಬಾ’. ಈ ಎಡಪಂಥೀಯ ರಾಷ್ಟ್ರಗಳು ಚೀನಾ ಮತ್ತು ರಷ್ಯಾದೊಂದಿಗೆ ಉತ್ತಮವಾದ ಆರ್ಥಿಕ ಸಂಬಂಧವನ್ನು ಪ್ರೋತ್ಸಾಹಿಸುತ್ತಿವೆ. ಇವೆರಡಲ್ಲಿ, ವೆನೆಜುವೆಲಾವು ನೈಸರ್ಗಿಕವಾಗಿ ಸಿಗುವ ಅಪಾರವಾದ ಚಿನ್ನ ಮತ್ತು ತೈಲದ ನಿಕ್ಷೇಪಗಳನ್ನು ಹೊಂದಿದೆ.
ವೆನೆಜುವೆಲಾದ ತೈಲ ಖರೀದಿಯಲ್ಲಿ ಚೀನಾ ಸುಮಾರು ಶೇ80 ರಷ್ಟು ಪಾಲನ್ನು ಹೊಂದಿದೆ. ಚೀನಾ ನ್ಯಾಷನಲ್ ಪೆಟ್ರೋಲಿಯಂ ಕಾರ್ಪೊರೇಷನ್ (CNPC) ವೆನೆಜುವೆಲಾದ ತೈಲ ವಲಯದಲ್ಲಿ ಹೂಡಿಕೆ ಮಾಡಿರುವ ಅತಿದೊಡ್ಡ ವಿದೇಶಿ ಕಂಪನಿಯಾಗಿದೆ. ಅಮೆರಿಕದ ನಿರ್ಬಂಧಗಳಿಂದಾಗಿ ಚೀನಾ ವೆನೆಜುವೆಲಾದಲ್ಲಿ ತನ್ನ ಹೂಡಿಕೆಗಳನ್ನು ಕಡಿಮೆ ಮಾಡಿದ್ದರೂ, 2024 ರಲ್ಲಿ ಚೀನಾದ ಖಾಸಗಿ ಕಂಪನಿಯಾದ “ಚೀನಾ ಕಾನ್ಕಾರ್ಡ್ ರಿಸೋರ್ಸಸ್ ಕಾರ್ಪೊರೇಷನ್”, ವೆನೆಜುವೆಲಾದ ತೈಲ ಕಂಪನಿಯಾದ PDVSA ಯೊಂದಿಗೆ ಲೇಕ್ ಮರಕೈಬೊದಲ್ಲಿ (ವೆನೆಜುವೆಲಾದ ನದಿ) ಎರಡು ತೈಲ ಅಭಿವೃದ್ಧಿ ಘಟಕಗಳನ್ನು ಅಭಿವೃದ್ಧಿಪಡಿಸಲು $1 ಬಿಲಿಯನ್ (100 ಕೋಟಿ) ಒಪ್ಪಂದಕ್ಕೆ ಸಹಿ ಹಾಕಿತು.
2025 ರ ಆರಂಭದಲ್ಲಿ, ಟ್ರಂಪ್ ಆಡಳಿತವು ಪನಾಮದಲ್ಲಿ(ಮಧ್ಯ ಅಮೆರಿಕ ದೇಶ) ಚೀನಾ ನೇತೃತ್ವದ ಬೆಲ್ಟ್ ಆಂಡ್ ರೋಡ್ ಇನಿಶಿಯೇಟಿವ್ (BRI) ಅನ್ನು ಹಿಂದೆ ಸರಿಯುವಂತೆ ಒತ್ತಾಯ ಮಾಡಿತು. ಅಮೆರಿಕದ ಬೆದರಿಕೆ ಜಗ್ಗದ ಚೀನಾ ಆರ್ಥಿಕ ವ್ಯವಹಾರದಲ್ಲಿ ಮುಳುಗಿತ್ತು. ನಿಕೊಲಸ್ ಮಡುರೊ ಆಡಳಿತವನ್ನು ಬಲವಂತವಾಗಿ ಉರುಳಿಸಿದರೆ, ಚೀನಾ ಮತ್ತು ರಷ್ಯಾದೊಂದಿಗಿನ ಆರ್ಥಿಕ ಮತ್ತು ಭದ್ರತಾ ಸಹಕಾರವನ್ನು ವಿಫಲಗೊಳಿಸಬಹುದು. ಇದರ ಮೂಲಕ ಅಮೆರಿಕವು, ಲ್ಯಾಟಿನ್ ಅಮೆರಿಕ ಪ್ರದೇಶದ ಎಡಪಂಥೀಯ ಶಕ್ತಿಗಳಿಗೆ ಬಲವಾದ ಸಂದೇಶವನ್ನು ನೀಡಬಹುದು ಎಂದು ಅಮೆರಿಕ ಯೋಚಿಸಿದೆ.
ತೈಲ ಕಾರಣವಾಗಿರಬಹುದೇ?
ಮೂರನೆಯ ಕಾರಣ ತೈಲವಾಗಿರಬಹುದು. ಜಗತ್ತಿನ ಅತಿ ಹೆಚ್ಚು ತೈಲ ನಿಕ್ಷೇಪಗಳಲ್ಲಿ ಸುಮಾರು ಶೇ 17 ರಷ್ಟು ಅಥವಾ 300 ಶತಕೋಟಿ ಬ್ಯಾರೆಲ್‌ಗಳಿಗಿಂತ ಹೆಚ್ಚು ತೈಲವನ್ನು ವೆನೆಜುವೆಲಾ ನೈಸರ್ಗಿಕವಾಗಿ ಹೊಂದಿದೆ. ಇದು ಅಮೆರಿಕದ ನಿಕ್ಷೇಪಗಳಿಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚು.
1976 ರ ರಾಷ್ಟ್ರೀಕರಣದವರೆಗೆ ವೆನೆಜುವೆಲಾದ ತೈಲ ವಲಯದಲ್ಲಿ ಎಕ್ಸಾನ್, ಮೊಬಿಲ್ ಮತ್ತು ಗಲ್ಫ್ ಆಯಿಲ್‌ನಂತಹ ಅಮೆರಿಕನ್ ಕಂಪನಿಗಳು ಸಕ್ರಿಯ ಪಾಲುದಾರರಾಗಿದ್ದವು. 1999 ರಲ್ಲಿ ಎಡಪಂಥೀಯ ನಾಯಕ ಹ್ಯೂಗೋ ಚಾವೆಜ್ ಅಧಿಕಾರಕ್ಕೆ ಬಂದಾಗ, ಅವರು ರಾಷ್ಟ್ರೀಕರಣದಿಂದ ತೈಲ ಸಂಪನ್ಮೂಲಗಳ ಮೇಲಿನ ರಾಜ್ಯದ ನಿಯಂತ್ರಣವನ್ನು ಬಿಗಿಗೊಳಿಸಿದರು. ಇದರ ಮೂಲಕ ತೈಲದಿಂದ ಬಂದ ಲಾಭವನ್ನು ದೇಶದ ಬಡತನ ನಿರ್ಮೂಲನೆಗೆ ಬಳಸಿದರು. (2002 ರಲ್ಲಿ ಚಾವೆಜ್ ವಿರುದ್ಧ ಮಿಲಿಟರಿ ದಂಗೆ ನಡೆಯುತ್ತದೆ. ಈ ದಂಗೆಯನ್ನು ಅಮೆರಿಕ ಬೆಂಬಲಿಸುತ್ತದೆ. ಈ ದಂಗೆಯ ವೇಳೆ ವೆನೆಜುವೆಲಾದಲ್ಲಿ ನಡೆದ ಸಾಮೂಹಿಕ ಪ್ರತಿಭಟನೆಯಿಂದ ಭಯಗೊಂಡ ಮಿಲಿಟರಿ ಪಡೆಗಳು 48 ಗಂಟೆಗಳ ಒಳಗೆ ಮತ್ತೆ ಅಧಿಕಾರವನ್ನು ಹಸ್ತಾಂತರಿಸಿದರು).

ಕಳೆದ ತಿಂಗಳು ಅಮೆರಿಕವು, “ವೆನೆಜುವೆಲಾದಲ್ಲಿರುವ ತೈಲ ಸಂಪನ್ಮೂಲಗಳ ರಾಷ್ಟ್ರೀಕರಣವನ್ನು ಉಲ್ಲೇಖಿಸಿ, ವೆನೆಜುವೆಲಾದಲ್ಲಿರುವ ತೈಲ ಮತ್ತು ಅಲ್ಲಿನ ಭೂಮಿಯನ್ನು ಹಿಂದಿರುಗಿಸುವಂತೆ ಒತ್ತಾಯಿಸಲಾಯಿತು”. ಅಂದರೆ ವೆನೆಜುವೆಲಾದ ಭೂಮಿ ಮತ್ತು ನೈಸರ್ಗಿಕ ಸಂಪತ್ತನ್ನು ಏಕಪಕ್ಷಿಯವಾಗಿ ತನ್ನದೆಂದು ಅಮೆರಿಕ ಹೇಳಿತು.
“ಈ ಹಿಂದೆಯೂ ಟ್ರಂಪ್ ಇದನ್ನು ಹೇಳಿದ್ದರು. 2019ರಲ್ಲಿ ಜುವಾನ್ ಗೈಡೊ ಅವರನ್ನು ವೆನೆಜುವೆಲಾದ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿದ ನಂತರ, ಟ್ರಂಪ್ ತಮ್ಮ ಸಹಾಯಕರಿಗೆ ಮಡುರೊ ಅವರಿಂದ ಸಂಪೂರ್ಣ ಅಧಿಕಾರ ಕಿತ್ತುಕೊಂಡರೆ, ವೆನೆಜುವೆಲಾದ ತೈಲವನ್ನು ಅಮೆರಿಕಕ್ಕೆ ಮುಕ್ತವಾಗಿ ನೀಡಬಹುದು ಎಂದಿದ್ದರು. ಹಾಗೂ ಚೀನಾ ಮತ್ತು ರಷ್ಯಾವನ್ನು ಸುಲಭವಾಗಿ ಹೊರಹಾಕಲು ಬದ್ಧತೆಯನ್ನು ತೋರಿಸುವಂತೆ ಜುವಾನ್ ಗೈಡೊ ಅವರನ್ನು ಒತ್ತಾಯಿಸಬೇಕೆಂದು ಆದೇಶಿಸಿದ್ದರು” ಎಂದು ಟ್ರಂಪ್ ಅವರ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.

ಈಗ, ವೆನೆಜುವೆಲಾದ ಮೇಲಿನ ದಾಳಿ ಮತ್ತು ಅಧ್ಯಕ್ಷ ನಿಕೊಲಸ್ ಮಡುರೊ ಅವರ ಅಪಹರಣದಿಂದ ಟ್ರಂಪ್ ತಮ್ಮ ಗುರಿಯನ್ನು ಸಾಧಿಸುವ ಹಂತಕ್ಕೆ ಹತ್ತಿರವಾಗಿದ್ದಾರೆ. ಆಡಳಿತ ಕುಸಿದರೆ ಮಡುರೊ ಅವರ ನಂತರ ಬರಬಹುದಾದ ಟ್ರಂಪ್ ಅವರ ನೆಚ್ಚಿನ ರಾಜಕಾರಣಿ ಮತ್ತು 2025ರ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಾರಿಯಾ ಕೋರಿನ ಮಚಾಡೊ, ವೆನೆಜುವೆಲಾದ ತೈಲ ಸಂಪನ್ಮೂಲವನ್ನು ಮುಕ್ತವಾಗಿ ವಿದೇಶಿ ಕಂಪನಿಗಳಿಗೆ ನೀಡುವುದಾಗಿ ಈಗಾಗಲೇ ಭರವಸೆ ನೀಡಿದ್ದಾರೆ.
“ನಾವು ಎಲ್ಲಾ, ಅಪ್‌ಸ್ಟ್ರೀಮ್, ಮಿಡ್‌ಸ್ಟ್ರೀಮ್, ಡೌನ್‌ಸ್ಟ್ರೀಮ್, ಎಲ್ಲಾ ಕಂಪನಿಗಳಿಗೆ ತೆರೆಯುತ್ತೇವೆ” ಎಂದು ಡೊನಾಲ್ಡ್ ಟ್ರಂಪ್ ಜೂನಿಯರ್ ಆಯೋಜಿಸಿದ್ದ ಪಾಡ್‌ಕ್ಯಾಸ್ಟ್‌ನಲ್ಲಿ ಮಚಾಡೊ ಹೇಳಿದ್ದಾರೆ. ಖನಿಜಗಳು ಮತ್ತು ವಿದ್ಯುತ್ ವಲಯಗಳನ್ನು ವಿದೇಶಿ ಕಂಪನಿಗಳಿಗೆ ಸಹ ತೆರೆಯಲಾಗುವುದು ಎಂದು ಅವರು ಹೇಳಿದ್ದಾರೆ.





