ಒಂದು ಕಾಲದಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರನ್ನು ಸಾಕಿ, ಬೆಳೆಸಿ, ಅವರಿಗೆ ಆಶ್ರಯ ನೀಡಿ ಪೋಷಿಸಿದ ಪಾಕಿಸ್ತಾನ, ಇಂದು ಅದೇ ಅಫ್ಘಾನಿಸ್ತಾನದ ಗಡಿಯೊಳಗೆ ನುಗ್ಗಿ ವಾಯುದಾಳಿ ನಡೆಸುತ್ತಿದೆ. ‘ಭಯೋತ್ಪಾದನಾ ನೆಲೆಗಳ’ ಧ್ವಂಸದ ಹೆಸರಿನಲ್ಲಿ ನಡೆಯುತ್ತಿರುವ ಈ ಸಂಘರ್ಷ, ಕೇವಲ ಎರಡು ನೆರೆಹೊರೆ ದೇಶಗಳ ನಡುವಿನ ಗಡಿ ವಿವಾದವಲ್ಲ; ಬದಲಾಗಿ ಪಾಕಿಸ್ತಾನದ ದಶಕಗಳ ಹಿಂದಿನ ವಿದೇಶಾಂಗ ನೀತಿಯ ಮತ್ತು ‘ಉಗ್ರವಾದವನ್ನು ಅಸ್ತ್ರವನ್ನಾಗಿ ಬಳಸುವ’ ತಂತ್ರದ ಭೀಕರ ವೈಫಲ್ಯದ ಸ್ಪಷ್ಟ ನಿದರ್ಶನವಾಗಿದೆ.
1990ರ ದಶಕದಲ್ಲಿ ಅಫ್ಘಾನಿಸ್ತಾನದಲ್ಲಿ ತನ್ನ ಹಿಡಿತ ಸಾಧಿಸಲು ಹಾಗೂ ಭಾರತದ ಪ್ರಭಾವವನ್ನು ತಡೆಯಲು ತನ್ನ ‘ಕಾರ್ಯತಂತ್ರದ ಆಳ’ವಾಗಿ ಪಾಕಿಸ್ತಾನದ ಸೇನೆ ಮತ್ತು ಐಎಸ್‌ಐ ತಾಲಿಬಾನ್ ಸಂಘಟನೆಗೆ ಜನ್ಮ ನೀಡಿತ್ತು. 2021ರ ಆಗಸ್ಟ್‌ನಲ್ಲಿ ಅಮೆರಿಕದ ಸೇನೆ ಕಾಬೂಲ್ ತೊರೆದು, ಅಫ್ಘಾನ್ ತಾಲಿಬಾನ್ ಮತ್ತೆ ಅಧಿಕಾರ ಹಿಡಿದಾಗ ಜಗತ್ತಿನಲ್ಲೇ ಅತಿ ಹೆಚ್ಚು ಸಂಭ್ರಮಿಸಿದ್ದು ಇದೇ ಪಾಕಿಸ್ತಾನ. “ಅಫ್ಘಾನಿಯರು ಗುಲಾಮಗಿರಿಯ ಸರಪಳಿಯನ್ನು ಮುರಿದಿದ್ದಾರೆ” ಎಂದು ಅಂದಿನ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬಣ್ಣಿಸಿದ್ದರು. ತಾಲಿಬಾನ್‌ಗಳು ತಮಗೆ ವಿಧೇಯರಾಗಿರುತ್ತಾರೆ, ಕಾಬೂಲ್‌ನಲ್ಲಿ ತನ್ನ ಕೈಗೊಂಬೆ ಸರ್ಕಾರ ಇರುತ್ತದೆ ಎಂಬುದು ಇಸ್ಲಾಮಾಬಾದ್‌ನ ಲೆಕ್ಕಾಚಾರವಾಗಿತ್ತು.
ಆದರೆ, ಪಾಕಿಸ್ತಾನದ ಲೆಕ್ಕಾಚಾರಗಳು ಈಗ ಸಂಪೂರ್ಣವಾಗಿ ತಲೆಕೆಳಗಾಗಿವೆ. ಅಫ್ಘಾನ್ ತಾಲಿಬಾನ್ ಕಾಬೂಲ್‌ನಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ, ಪಾಕಿಸ್ತಾನದೊಳಗೆ ಸಕ್ರಿಯವಾಗಿರುವ ‘ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್’ ಉಗ್ರ ಸಂಘಟನೆಗೆ ಆನೆಬಲ ಬಂದಂತಾಗಿದೆ. ಟಿಟಿಪಿಯು ಅಫ್ಘಾನ್ ತಾಲಿಬಾನ್‌ನ ಸೈದ್ಧಾಂತಿಕ ಅವಳಿಯಾಗಿದೆ. ಪಾಕಿಸ್ತಾನಿ ಸೇನೆ ಮತ್ತು ಸರ್ಕಾರದ ವಿರುದ್ಧ ಸಮರ ಸಾರಿರುವ ಟಿಟಿಪಿ, ನೆರೆಯ ಅಫ್ಘಾನಿಸ್ತಾನದ ಗಡಿಭಾಗದಲ್ಲಿ ತನ್ನ ನೆಲೆಗಳನ್ನು ಭದ್ರಪಡಿಸಿಕೊಂಡಿದೆ. ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳ ವಿಲೀನವನ್ನು ರದ್ದುಗೊಳಿಸಬೇಕು ಹಾಗೂ ತಮ್ಮದೇ ಮಾದರಿಯ ಷರಿಯಾ ಕಾನೂನು ಜಾರಿಗೊಳಿಸಬೇಕು ಎಂಬುದು ಟಿಟಿಪಿಯ ಪ್ರಮುಖ ಬೇಡಿಕೆಯಾಗಿದೆ. ಈ ಉಗ್ರರು ಅಫ್ಘಾನ್ ನೆಲದಿಂದಲೇ ಪಾಕಿಸ್ತಾನದೊಳಗೆ ನುಗ್ಗಿ (ವಿಶೇಷವಾಗಿ ಖೈಬರ್ ಪಖ್ತುಂಖ್ವಾ ಮತ್ತು ಬಲೂಚಿಸ್ತಾನ ಪ್ರಾಂತ್ಯಗಳಲ್ಲಿ) ಸೇನಾ ನೆಲೆಗಳು ಮತ್ತು ಪೊಲೀಸ್ ಠಾಣೆಗಳ ಮೇಲೆ ಭೀಕರ ದಾಳಿಗಳನ್ನು ನಡೆಸುತ್ತಿದ್ದಾರೆ.
ಇದನ್ನು ಓದಿದ್ದೀರಾ? ಶೋಯೆಬ್ ಖಾನ್ | ಬಿಹಾರದ ಕುಗ್ರಾಮದಿಂದ ಯುಎಇ ವಿಶ್ವಕಪ್ ತಂಡದವರೆಗೆ ರೋಚಕ ಪಯಣ
ಟಿಟಿಪಿ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಥವಾ ಅವರನ್ನು ತನಗೆ ಒಪ್ಪಿಸುವಂತೆ ಪಾಕಿಸ್ತಾನವು ಅಫ್ಘಾನ್ ತಾಲಿಬಾನ್ ಸರ್ಕಾರವನ್ನು ನಿರಂತರವಾಗಿ ಒತ್ತಾಯಿಸುತ್ತಿದೆ. ಆದರೆ, ತಮ್ಮದೇ ಸೈದ್ಧಾಂತಿಕ ಸಹೋದರರಾಗಿರುವ ಟಿಟಿಪಿ ವಿರುದ್ಧ ಕ್ರಮ ಕೈಗೊಳ್ಳಲು ಅಫ್ಘಾನ್ ತಾಲಿಬಾನ್ ಸಿದ್ಧವಿಲ್ಲ. ಬದಲಾಗಿ, “ಭಯೋತ್ಪಾದನೆ ಪಾಕಿಸ್ತಾನದ ಆಂತರಿಕ ವಿಚಾರ, ನಮ್ಮ ನೆಲವನ್ನು ಯಾರ ವಿರುದ್ಧವೂ ಬಳಸಲು ನಾವು ಬಿಟ್ಟಿಲ್ಲ” ಎಂದು ಅದು ನುಣುಚಿಕೊಳ್ಳುತ್ತಿದೆ. ಇದರಿಂದ ತೀವ್ರ ಹತಾಶೆಗೊಂಡಿರುವ ಪಾಕಿಸ್ತಾನ, ಅನಿವಾರ್ಯವಾಗಿ ಗಡಿಯಾಚೆಗಿನ (ಖೋಸ್ಟ್ ಮತ್ತು ಪಕ್ಟಿಕಾ ಪ್ರಾಂತ್ಯಗಳು) ಟಿಟಿಪಿ ನೆಲೆಗಳ ಮೇಲೆ ಗುರಿಯಿಟ್ಟು ಬಾಂಬ್ ದಾಳಿ ನಡೆಸಲು ಮುಂದಾಗಿದೆ. ಇದು ಎರಡು ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟನ್ನು ತಾರಕಕ್ಕೇರಿಸಿದೆ.
ಈ ಸೇನಾ ಉದ್ವಿಗ್ನತೆಯ ಹಿಂದೆ ಐತಿಹಾಸಿಕ ಗಡಿ ವಿವಾದವೂ ಅಡಗಿದೆ. ಬ್ರಿಟಿಷರ ಕಾಲದಲ್ಲಿ ಎಳೆಯಲಾದ 2,640 ಕಿ.ಮೀ ಉದ್ದದ ‘ಡ್ಯುರಾಂಡ್ ರೇಖೆ’ಯನ್ನು ಅಫ್ಘಾನಿಸ್ತಾನ ಎಂದಿಗೂ ಅಂತಾರಾಷ್ಟ್ರೀಯ ಗಡಿ ಎಂದು ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಪಾಕಿಸ್ತಾನವು ಈ ಗಡಿಯಲ್ಲಿ ಬೇಲಿ ಹಾಕುತ್ತಿರುವುದನ್ನು ಅಫ್ಘಾನ್ ತಾಲಿಬಾನ್ ತೀವ್ರವಾಗಿ ವಿರೋಧಿಸುತ್ತಿದ್ದು, ಗಡಿ ಕಾವಲು ಪಡೆಗಳ ನಡುವಿನ ಗುಂಡಿನ ಚಕಮಕಿಗೂ ಇದು ಕಾರಣವಾಗುತ್ತಿದೆ.
ಬೇರೆಯವರರಿಗೆ ಹಚ್ಚಲು ಸಾಕಿದ ಹಾವು, ಈಗ ತನ್ನನ್ನೇ ಕಚ್ಚಲು ಬರುತ್ತಿರುವ ನೈಜ ಸ್ಥಿತಿಯನ್ನು ಪಾಕಿಸ್ತಾನ ಎದುರಿಸುತ್ತಿದೆ. ತನ್ನ ಭೌಗೋಳಿಕ ರಾಜಕೀಯ ಹಿತಾಸಕ್ತಿಗಳಿಗಾಗಿ ದಶಕಗಳ ಕಾಲ ತಾನೇ ಪೋಷಿಸಿದ ಭಯೋತ್ಪಾದನೆಯು ಈಗ ಪಾಕಿಸ್ತಾನದ ಆರ್ಥಿಕತೆ ಮತ್ತು ಆಂತರಿಕ ಭದ್ರತೆಗೆ ಮಾರಕವಾಗಿ ಪರಿಣಮಿಸಿದೆ.





