ಝಂಗೆಜೂರ್ ಕಾರಿಡಾರ್, ಅಬು ಮೂಸಾ, ಗ್ರೇಟರ್ ಟನ್ಬ್ ಮತ್ತು ಲೆಸ್ಸರ್ ಟನ್ಬ್ ದ್ವೀಪಗಳ ವಿಷಯದಲ್ಲಿ ಇರಾನ್ ಮತ್ತು ರಷ್ಯಾ ದೇಶಗಳ ನಡುವೆ ಭಿನ್ನಾಭಿಪ್ರಾಯಗಳಿವೆ. ನೇರವಾದ ಭೂಗಡಿಯನ್ನು ಹಂಚಿಕೊಳ್ಳದಿದ್ದರೂ ಇದು ಒಂದು ತರಹದ ಗಡಿ ಸಂಘರ್ಷ ಮತ್ತು ರಾಜತಾಂತ್ರಿಕ ಭಿನ್ನಾಭಿಪ್ರಾಯಗಳು.
ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ್ದು ಸದ್ಯ ದಾಳಿ-ಪ್ರತಿದಾಳಿಗಳು ಮುಂದುವರೆದಿದೆ. ಈ ಕಾರ್ಯಾಚರಣೆಗೆ ಅಮೆರಿಕ ‘ಆಪರೇಷನ್ ಎಪಿಕ್ ಫ್ಯೂರಿ’ ಮತ್ತು ಇಸ್ರೇಲ್ ‘ರೋರಿಂಗ್ ಲಯನ್’ ಎಂದು ಹೆಸರಿಟ್ಟಿವೆ. ಇಸ್ರೇಲ್ ನಡೆಸಿದ ದಾಳಿಯಿಂದ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ, ಹಲವು ಉನ್ನತ ಅಧಿಕಾರಿಗಳು ಮೃತರಾಗಿದ್ದಾರೆ. ದಾಳಿಗೆ ಪ್ರತಿದಾಳಿಯೂ ಮುಂದುವರೆದಿದೆ. ಇರಾನ್‌ನ ನೆರೆಹೊರೆಯ ಮತ್ತು ಇತರೆ ದೇಶಗಳು ಇರಾನ್ ಪರ ನಿಂತು ಖಮೇನಿ ಹತ್ಯೆಯನ್ನು ಖಂಡಿಸಿದೆ. ಆ ದೇಶಗಳಲ್ಲಿ ರಷ್ಯಾ ಕೂಡಾ ಒಂದು.
ಇಸ್ರೇಲ್ ಪರವಾಗಿ ಅಮೆರಿಕ, ಬ್ರಿಟನ್‌ನಂತಹ ದೇಶಗಳಿದ್ದರೆ, ಇರಾನ್ ಪರವಾಗಿ ಚೀನಾ, ರಷ್ಯಾ ಮೊದಲಾದ ದೇಶಗಳಿವೆ. ಇರಾನ್ ಮತ್ತು ರಷ್ಯಾ ನಡುವಿನ ಸಂಬಂಧವು ಇಂದಿನ ಜಾಗತಿಕ ರಾಜಕಾರಣದಲ್ಲಿ ಅತ್ಯಂತ ನಿರ್ಣಾಯಕ ಮತ್ತು ಚರ್ಚಿತ ವಿಷಯ. ಈ ಹಿಂದೆ ಅಷ್ಟಾಗಿ ಪರಸ್ಪರ ನಂಬಿಕೆ ಹೊಂದಿರದ ಈ ಎರಡು ರಾಷ್ಟ್ರಗಳು ಇಂದು ಮಿತ್ರ ರಾಷ್ಟ್ರಗಳಾಗಿವೆ. ಉಭಯ ರಾಷ್ಟ್ರಗಳು ಅನಿವಾರ್ಯವಾಗಿ ಪರಸ್ಪರ ಬೆಂಬಲಿಸುತ್ತಿದೆ, ಈ ಬೆಂಬಲವೂ ಮುಖ್ಯವಾಗಿದೆ.
ಇದನ್ನು ಓದಿದ್ದೀರಾ? ಇರಾನ್ – ಇಸ್ರೇಲ್ ಯುದ್ಧ | ಭಾರತಕ್ಕೇನು ನಷ್ಟ?
ಉಭಯ ರಾಷ್ಟ್ರಗಳ ಕಾರ್ಯತಂತ್ರದ ಮೈತ್ರಿ
ಝಂಗೆಜೂರ್ ಕಾರಿಡಾರ್, ಅಬು ಮೂಸಾ, ಗ್ರೇಟರ್ ಟನ್ಬ್ ಮತ್ತು ಲೆಸ್ಸರ್ ಟನ್ಬ್ ದ್ವೀಪಗಳ ವಿಷಯದಲ್ಲಿ ಇರಾನ್ ಮತ್ತು ರಷ್ಯಾ ದೇಶಗಳ ನಡುವೆ ಭಿನ್ನಾಭಿಪ್ರಾಯಗಳಿವೆ. ನೇರವಾದ ಭೂಗಡಿಯನ್ನು ಹಂಚಿಕೊಳ್ಳದಿದ್ದರೂ ಇದು ಒಂದು ತರಹದ ಗಡಿ ಸಂಘರ್ಷ ಮತ್ತು ರಾಜತಾಂತ್ರಿಕ ಭಿನ್ನಾಭಿಪ್ರಾಯಗಳು. ಆದರೆ ಇತ್ತೀಚಿನ ದಶಕಗಳಲ್ಲಿ, ವಿಶೇಷವಾಗಿ ಉಕ್ರೇನ್ ಯುದ್ಧ ಮತ್ತು ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳ ನಂತರ, ಉಭಯ ದೇಶಗಳ ಸಂಬಂಧ ಹತ್ತಿರವಾಗುತ್ತಿದೆ. ಆದರೆ ಇದು ಆರ್ಥಿಕ ಸಂಬಂಧವೇ ಹೊರತು ಇನ್ನೂ ಅಧಿಕ ವಿಸ್ತಾರ ಕಂಡಿಲ್ಲ ಎಂಬುದು ವಾಸ್ತವ.
ಪರಸ್ಪರ ಬೆಂಬಲ ಯಾಕೆ ಮುಖ್ಯ?
ಈ ದೇಶಗಳ ನಡುವೆ ಪರಸ್ಪರ ಬೆಂಬಲಕ್ಕೆ ಪ್ರಮುಖವಾಗಿ ಮೂರು ಕಾರಣಗಳನ್ನು ನಾವು ಗುರುತಿಸಬಹುದು. ಅದರಲ್ಲಿ ಮೊದಲನೆಯದ್ದು ಸಾಮಾನ್ಯ ಶತ್ರು. ಅಮೆರಿಕ ಮತ್ತು ಯುರೋಪಿಯನ್ ರಾಷ್ಟ್ರಗಳು ಇರಾನ್ ಮತ್ತು ರಷ್ಯಾ ಎರಡರ ಮೇಲೂ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಿವೆ. ಈ ನಿರ್ಬಂಧಗಳನ್ನು ಎದುರಿಸಲು ಇವೆರಡೂ ಪರಸ್ಪರ ಒಂದಾಗುವುದು ಅನಿವಾರ್ಯವಾಗಿದೆ.
ಇದನ್ನು ಓದಿದ್ದೀರಾ? ನಲುಗಿದ ಇರಾನ್ | 30 ಗಂಟೆಗಳಲ್ಲಿ 2,000ಕ್ಕೂ ಹೆಚ್ಚು ಬಾಂಬ್ ದಾಳಿ
ಎರಡನೆಯದಾಗಿ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಪ್ರಭಾವವನ್ನು ಕಡಿಮೆ ಮಾಡಲು ರಷ್ಯಾಕ್ಕೆ ಇರಾನ್ ಬೆಂಬಲಬೇಕಾಗಿದೆ. ಹಾಗೆಯೇ ಸಿರಿಯಾದಂತಹ ದೇಶಗಳಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಇರಾನ್‌ಗೆ ರಷ್ಯಾದ ಮಿಲಿಟರಿ ಶಕ್ತಿಯ ಅಗತ್ಯವಿದೆ. ಮೂರನೆಯದಾಗಿ ತೈಲ ಮತ್ತು ಅನಿಲ ಮಾರುಕಟ್ಟೆಯಲ್ಲಿ ಎರಡೂ ದೇಶಗಳು ದೊಡ್ಡ ಪಾಲು ಹೊಂದಿವೆ. ಪಾಶ್ಚಿಮಾತ್ಯ ಮಾರುಕಟ್ಟೆಗಳಲ್ಲಿ ನಿರ್ಬಂಧ ಇರುವ ಕಾರಣದಿಂದಾಗಿ ಏಷ್ಯಾ ಮತ್ತು ಇತರ ಭಾಗಗಳಲ್ಲಿ ವ್ಯಾಪಾರ ವಿಸ್ತರಿಸಲು ಇರಾನ್ ಮತ್ತು ರಷ್ಯಾ ಪರಸ್ಪರ ಸಹಕರಿಸುತ್ತಿದೆ.
ಇವಿಷ್ಟನ್ನು ಹೊರತುಪಡಿಸಿ ಉಭಯ ರಾಷ್ಟ್ರಗಳು ರಕ್ಷಣಾ ಮತ್ತು ಮಿಲಿಟರಿ ಸಹಕಾರವನ್ನೂ ಹೊಂದಿದೆ. ಉಕ್ರೇನ್ ಯುದ್ಧದಲ್ಲಿ ರಷ್ಯಾ ಇರಾನ್ ನಿರ್ಮಿತ ‘ಶಾಹೆದ್’ (Shahed-136) ಡ್ರೋನ್‌ಗಳನ್ನು ಬಳಸುತ್ತಿದೆ ಎಂದು ವರದಿಗಳಾಗಿವೆ. ಅದಕ್ಕೆ ಪ್ರತಿಯಾಗಿ ಇರಾನ್ ರಷ್ಯಾದಿಂದ ಸುಧಾರಿತ ಸುಖೋಯ್ ಸು-35 (Su-35) ಯುದ್ಧ ವಿಮಾನಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ವರದಿಗಳು ಹೇಳುತ್ತವೆ. ಸದ್ಯ ಇದೇ ‘ಶಾಹೆದ್’ ಡ್ರೋನ್ ಅನ್ನು LUCAS ಎಂದು ಹೆಸರು ಬದಲಾಯಿಸಿ ಅಮೆರಿಕ ಇರಾನ್ ಮೇಲೆ ಪ್ರಯೋಗಿಸುತ್ತಿದೆ. ಇನ್ನು ಇರಾನ್‌ನ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣದಲ್ಲಿ ರಷ್ಯಾ ಮೊದಲಿನಿಂದಲೂ ತಾಂತ್ರಿಕ ನೆರವು ನೀಡುತ್ತಾ ಬಂದಿದೆ.
ಇಸ್ರೇಲ್‌ಗೆ ಅಮೆರಿಕ ಬೆಂಬಲವಾಗಿರುವಾಗ ಇರಾನ್ ಜತೆ ರಷ್ಯಾ ನಿಂತಿದೆ. ಆದರೆ ಸದ್ಯ ನಡೆಯುತ್ತಿರುವ ಸಂಘರ್ಷದಲ್ಲಿ ರಷ್ಯಾ ಕೇವಲ ರಾಜತಾಂತ್ರಿಕ ಖಂಡನೆಗೆ ಸೀಮಿತವಾಗಿರುವುದು ಇರಾನ್‌ನ ಅಸಮಾಧಾನಕ್ಕೆ ಕಾರಣವಾಗಿದೆ ಎಂದೂ ವರದಿಗಳು ಹೇಳುತ್ತವೆ. ಆದರೆ ಇರಾನ್‌ಗೆ ರಷ್ಯಾದಿಂದ ಸುಧಾರಿತ ಶಸ್ತ್ರಾಸ್ತ್ರಗಳು ಸಿಗುತ್ತಿರುವುದು ಇಸ್ರೇಲ್‌ನ ಭದ್ರತೆಗೆ ದೊಡ್ಡ ಸವಾಲಾಗಿದೆ. ಚೀನಾ, ರಷ್ಯಾ ಮತ್ತು ಇರಾನ್ ಸೇರಿ ವಿಶ್ವದ ದೊಡ್ಡಣ್ಣ ಎಂದು ಹೇಳಿಕೊಳ್ಳುತ್ತಿರುವ ಅಮೆರಿಕದ ನೇತೃತ್ವದ ಏಕಧ್ರುವ ಪ್ರಪಂಚಕ್ಕೆ ಸವಾಲು ಹಾಕುತ್ತಿವೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




