ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚಿ ವ್ಯಾಪಿಸಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹೆಲಿಕಾಪ್ಟರ್ ಮೂಲಕ ನೀರನ್ನು ಸುರಿಯುತ್ತಿದ್ದಾರೆ. ಬೆಂಕಿ ವಸತಿ ಪ್ರದೇಶ, ಮನೆಗಳಿಗೆ ಪಸರಿಸದಂತೆ ತಡೆದಿದ್ದಾರೆ. ಆದರೆ, ಕಾಡ್ಗಿಚ್ಚಿನಿಂದಾಗಿ ರಾಜ್ಯದಲ್ಲಿ ಶಾಖವು ತೀವ್ರವಾಗಿ ಹೆಚ್ಚಾಗಿದ್ದು, ಸುಮಾರು 26,000 ಜನರನ್ನು ಸ್ಥಳಾಂತರಿಸಲಾಗಿದೆ.
ಮೊದಲಿಗೆ ಮಂಗಳವಾರ ಮಧ್ಯಾಹ್ನ, ಉತ್ತರ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದ ಬುಟ್ಟೆ ಕೌಂಟಿಯ ಓರೊವಿಲ್ಲೆ ನಗರದ ಬಳಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ, ಬೆಂಕಿಯು 14 ಚದುರ ಕಿ.ಮೀ ವ್ಯಾಪಿಸಿಕೊಂಡಿದೆ. ಇದರಿಂದಾಗಿ, ಇಡೀ ಸ್ಯಾಕ್ರಮೆಂಟೋ ಪ್ರದೇಶ ಹೊಗೆಯಿಂದ ಆವೃತಗೊಂಡಿದೆ.
ಒರೊವಿಲ್ಲೆಯಲ್ಲಿ ಮಂಗಳವಾರ ರಾತ್ರಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು. ತ್ವರಿತವಾಗಿ ರಕ್ಷಣಾ ಕಾರ್ಯ ಆರಂಭಿಸಲಾಗಿತ್ತು. ಅದಾಗ್ಯೂ, ನಗರವನ್ನು ದಾಟಿ, ಗ್ರಾಮೀಣ ಪ್ರದೇಶಗಳಿಗೆ ಬುಧವಾರ ಬೆಂಕಿ ವಿಸ್ತರಿಸಿತ್ತು.
ಬುಧವಾರ ಸಂಜೆಯ ವೇಳೆಗೆ ಬೆಂಕಿ ನಂದಿಸುವ ಕೆಲಸ ಮುಗಿದಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣಾ ಕಾರ್ಯವನ್ನೂ ನಿಲ್ಲಿಸಿದ್ದಾರೆ. ಸ್ಥಳಾಂತರಗೊಂಡಿರುವ ಬಹುತೇಕ ನಿವಾಸಿಗಳನ್ನು ಶೀಘ್ರದಲ್ಲೇ ಅವರ ಮನೆಗಳಿಗೆ ಮರಳಲು ಅವಕಾಶ ನೀಡಲಾಗುತ್ತದೆ ಎಂದು ಒರೊವಿಲ್ಲೆ ಮೇಯರ್ ಡೇವಿಡ್ ಪಿಟ್‌ಮನ್ ತಿಳಿಸಿದ್ದಾರೆ.
ಏತನ್ಮಧ್ಯೆ, ಒರೊವಿಲ್ಲೆಯಿಂದ ದಕ್ಷಿಣ ಭಾಗಕ್ಕೆ 8 ಕಿ.ಮೀ ದೂರದಲ್ಲಿರುವ ಪಲೆರ್ಮೊ ಪಟ್ಟಣದಲ್ಲಿಯೂ ಬುಧವಾರ ಸಂಜೆ ಮತ್ತೊಂದು ಬೆಂಕಿ ಅವಘಡ ನಡೆದಿದೆ. ಅಲ್ಲಿನ ಜನರನ್ನೂ ಸ್ಥಳಾಂತರಿಸಲಾಗಿದೆ. ಬೆಂಕಿಯನ್ನು ಶೀಘ್ರವೇ ನಂದಿಸಲಾಗಿದೆ.
ಒರೊವಿಲ್ಲೆ ಮತ್ತು ಪಲೆರ್ಮೊ ಬಳಿ ಸಂಭವಿಸಿದ ಬೆಂಕಿಯಿಂದಾದ ಆಸ್ತಿ ನಷ್ಟದ ಬಗ್ಗೆ ತಕ್ಷಣದ ಅಧಿಕೃತ ವರದಿ ಬಂದಿಲ್ಲ.




