ಇರಾನ್ ಸತತವಾಗಿ ದಾಳಿಗಳನ್ನು ಮುಂದುವರಿಸಿದರೆ, ಟೆಹ್ರಾನ್ ಮೇಲೆ ‘ಇದುವರೆಗೆ ಎಂದೂ ಕಾಣದಂತಹ’ ಭೀಕರ ಶಕ್ತಿಯೊಂದಿಗೆ ದಾಳಿ ಮಾಡುತ್ತೇವೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಇರಾನ್‌ನ ‘ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್’ ಪಣತೊಟ್ಟಿದೆ. ಆಕ್ರಮಣಕಾರಿ ದಾಳಿ ನಡೆಸುವುದಾಗಿ ಪ್ರತಿಜ್ಞೆ ಮಾಡಿದೆ. ಈ ಬೆನ್ನಲೇ, ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಹಿಂದೆಂದೂ ಕಾಣದ ದಾಳಿ ನಡೆಸಲಿವೆ ಎಂದು ಟ್ರಂಪ್ ಹೇಳಿದ್ದಾರೆ.
“ಇರಾನ್ ಹಿಂದೆಂದಿಗಿಂತಲೂ ಅತ್ಯಂತ ಕಠಿಣವಾಗಿ ದಾಳಿ ಮಾಡುವುದಾಗಿ ಹೇಳಿಕೊಂಡಿದೆ. ಅವರು ಅಂತಹ ಪ್ರತಿಜ್ಞೆ ಮಾಡಿರುವುದು ಅವರಿಗೆ ಒಳ್ಳೆಯದು. ಒಂದು ವೇಳೆ ಅವರು ದಾಳಿ ಮಾಡಿದರೆ, ನಾವು ಅವರ ಮೇಲೆ ಹಿಂದೆಂದೂ ಕಂಡಿರದ ಬಲದೊಂದಿಗೆ ತಿರುಗೇಟು ನೀಡುತ್ತೇವೆ,” ಎಂದು ಟ್ರಂಪ್ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಜೋರ್ಡನ್, ಬಹ್ರೇನ್, ಕತಾರ್, ರಿಯಾದ್, ಯುಎಇ ಮೇಲೇಕೆ ದಾಳಿ ನಡೆಸಿದೆ ಇರಾನ್!
ಶನಿವಾರ, ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ಆರಂಭಿಸಿದವು. ದಾಳಿಯಲ್ಲಿ ಭಾನುವಾರ ಮುಂಜಾನೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತರಾಗಿದ್ದಾರೆ. ಖಮೇನಿ ಅವರೊಂದಿಗೆ ಅವರ ಮಗಳು, ಅಳಿಯ ಮತ್ತು ಮೊಮ್ಮಗಳು ಕೂಡ ಸಾವನ್ನಪ್ಪಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಖಮೇನಿ ಸಾವಿನ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಅಮೆರಿಕ-ಇಸ್ರೇಲ್ ದಾಳಿಯ ಕೆಲವೇ ಗಂಟೆಗಳ ನಂತರ, ಇರಾನ್ ಕ್ಷಿಪಣಿಗಳನ್ನು ಉಡಾಯಿಸಿದೆ. ಅವುಗಳಲ್ಲಿ ಹಲವು ದುಬೈ, ಅಬುಧಾಬಿ, ಕತಾರ್ ಹಾಗೂ ಬಹ್ರೇನ್ ಸೇರಿದಂತೆ ಗಲ್ಫ್ ಪ್ರದೇಶಗಳಿಗೆ ಅಪ್ಪಳಿಸಿವೆ.




