ಮಾರ್ಚ್ ಆರಂಭದಲ್ಲಿ ಅಮೆರಿಕದ ಎರಡು ಯುದ್ಧವಿಮಾನಗಳನ್ನು ತನ್ನ ದೇಶದ ಮಥಾಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲು ಶ್ರೀಲಂಕಾ ಅನುಮತಿ ನಿರಾಕರಿಸಿದೆ ಎಂದು ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕೆ ಶುಕ್ರವಾರ ಸಂಸತ್ತಿಗೆ ತಿಳಿಸಿದ್ದಾರೆ.
ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯ ನಡುವಿನ ಪ್ರಮುಖ ಕಡಲ ಮಾರ್ಗವಾದ ಜಿಬೌಟಿಯಲ್ಲಿರುವ ಅಮೆರಿಕದ ಸೇನಾ ನೆಲೆಯಿಂದ ಮಾರ್ಚ್ 4 ಮತ್ತು 8 ರಂದು ಈ ಮನವಿಗಳು ಬಂದಿದ್ದವು, ಆದರೆ ಆ ಎರಡೂ ಮನವಿಗಳನ್ನು ಶ್ರೀಲಂಕಾ ತಿರಸ್ಕರಿಸಿದೆ.
ಮಧ್ಯಪ್ರಾಚ್ಯ ಸಂಘರ್ಷದಿಂದ ಉಂಟಾಗುತ್ತಿರುವ ಜಾಗತಿಕ ಒತ್ತಡಗಳ ನಡುವೆಯೂ ತಮ್ಮ ದೇಶದ ‘ತಟಸ್ಥ ನೀತಿ’ಯನ್ನು ಕಾಯ್ದುಕೊಳ್ಳುವ ಬದ್ಧತೆಯನ್ನು ದಿಸ್ಸಾನಾಯಕೆ ಈ ಸಂದರ್ಭದಲ್ಲಿ ಪ್ರತಿಪಾದಿಸಿದರು.
”ಹಲವಾರು ಒತ್ತಡಗಳ ನಡುವೆಯೂ ನಾವು ನಮ್ಮ ತಟಸ್ಥ ನೀತಿಯನ್ನು ಕಾಯ್ದುಕೊಳ್ಳಲು ಬಯಸುತ್ತೇವೆ. ನಾವು ಯಾರಿಗೂ ಮಣಿಯುವುದಿಲ್ಲ. ಮಧ್ಯಪ್ರಾಚ್ಯ ಯುದ್ಧವು ನಮಗೆ ಸವಾಲುಗಳನ್ನು ಒಡ್ಡುತ್ತಿದೆ, ಆದರೆ ತಟಸ್ಥವಾಗಿರಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ನಾವು ಮಾಡುತ್ತೇವೆ” ಎಂದು ಅವರು ಸ್ಪಷ್ಟಪಡಿಸಿದರು.
2024ರಲ್ಲಿ ಅಧಿಕಾರಕ್ಕೆ ಬಂದಿರುವ ದಿಸ್ಸಾನಾಯಕೆ, ಆಗ್ನೇಯ ಭಾಗದಲ್ಲಿರುವ ಆಯಕಟ್ಟಿನ ಮಥಾಲಾ ವಿಮಾನ ನಿಲ್ದಾಣದಲ್ಲಿ ಹಡಗು-ವಿರೋಧಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಎರಡು ಯುದ್ಧವಿಮಾನಗಳನ್ನು ಇಳಿಸಲು ಅಮೆರಿಕ ಅನುಮತಿ ಕೋರಿತ್ತು ಎಂಬ ಮಹತ್ವದ ವಿಚಾರವನ್ನು ಬಹಿರಂಗಪಡಿಸಿದರು.
ಇದನ್ನು ಓದಿದ್ದೀರಾ? ಟ್ರಂಪ್‌ಗೆ ಚಿತ್ತಭ್ರಮೆಯೇ?; ಅಮೆರಿಕ ಅಧ್ಯಕ್ಷರ ಮಾನಸಿಕ ಆರೋಗ್ಯದ ಸುತ್ತ ಅನುಮಾನದ ಹುತ್ತ
”ಜಿಬೌಟಿ ನೆಲೆಯಿಂದ ಎಂಟು ಹಡಗು-ವಿರೋಧಿ ಕ್ಷಿಪಣಿಗಳೊಂದಿಗೆ ಸಜ್ಜಾದ ಎರಡು ಯುದ್ಧವಿಮಾನಗಳನ್ನು ಮಥಾಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲು ಅವರು ಬಯಸಿದ್ದರು. ಆದರೆ ನಾವು ಅದಕ್ಕೆ ನೇರವಾಗಿ ‘ಇಲ್ಲ’ ಎಂದು ಹೇಳಿದೆವು” ಎಂದು ಅವರು ವಿವರಿಸಿದರು.
ದಕ್ಷಿಣ ಮತ್ತು ಮಧ್ಯ ಏಷ್ಯಾದ ಅಮೆರಿಕದ ವಿಶೇಷ ಪ್ರತಿನಿಧಿ ಸರ್ಜಿಯೊ ಗೋರ್ ಅವರನ್ನು ಭೇಟಿಯಾದ ಒಂದು ದಿನದ ನಂತರ ದಿಸ್ಸಾನಾಯಕೆ ಈ ಹೇಳಿಕೆ ನೀಡಿದ್ದಾರೆ.
ಹಿಂದೂ ಮಹಾಸಾಗರ ವಲಯದಲ್ಲಿ, ಅದರಲ್ಲೂ ವಿಶೇಷವಾಗಿ ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮವಾಗಿ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೆಚ್ಚುತ್ತಿರುವ ಹೊತ್ತಿನಲ್ಲಿ ಶ್ರೀಲಂಕಾದ ಈ ಎಚ್ಚರಿಕೆಯ ಹೆಜ್ಜೆ ಮಹತ್ವ ಪಡೆದುಕೊಂಡಿದೆ.
ಹಿಂದೂ ಮಹಾಸಾಗರದಲ್ಲಿ ಶ್ರೀಲಂಕಾದ ದಕ್ಷಿಣ ಕರಾವಳಿಯ ಸಮೀಪ ಇತ್ತೀಚೆಗೆ ನಡೆದ ಭೀಕರ ಕಡಲ ಘಟನೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಮಾರ್ಚ್ 4 ರಂದು, ಶ್ರೀಲಂಕಾದ ಗಾಲೆ ಕರಾವಳಿ ಬಳಿ ಇರಾನ್‌ನ ಯುದ್ಧನೌಕೆ ‘ಐಆರ್‌ಎಎಸ್ ಡೇನಾ’ ಮೇಲೆ ಅಮೆರಿಕದ ಜಲಾಂತರ್ಗಾಮಿಯೊಂದು ಟಾರ್ಪಿಡೊ ದಾಳಿ ನಡೆಸಿತ್ತು. ಇದರ ಪರಿಣಾಮವಾಗಿ 84 ನಾವಿಕರು ಮೃತಪಟ್ಟಿದ್ದರು ಹಾಗೂ 32 ಜನರನ್ನು ಶ್ರೀಲಂಕಾ ನೌಕಾಪಡೆ ರಕ್ಷಿಸಿತ್ತು. ಭಾರತದಲ್ಲಿ ನೌಕಾ ಸಮರಾಭ್ಯಾಸ ಮುಗಿಸಿ ಮರಳುತ್ತಿದ್ದಾಗ ಈ ನೌಕೆಯ ಮೇಲೆ ದಾಳಿ ನಡೆಸಲಾಗಿತ್ತು.
ಭಾರತದಂತಹ ಅಣ್ವಸ್ತ್ರ ಹಾಗೂ ಶಕ್ತಿಶಾಲಿ ಸೇನೆಯನ್ನು ಹೊಂದಿರುವ ದೊಡ್ಡ ರಾಷ್ಟ್ರದ ಪ್ರಧಾನಿ ತೋರದಿರುವ ಎದೆಗಾರಿಕೆಯನ್ನು ಸಣ್ಣ ರಾಷ್ಟ್ರ ಶ್ರೀಲಂಕಾದ ನಾಯಕನೊಬ್ಬ ತೋರಿಸಿದ್ದಾರೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.





