ಚೀನಾ ಸರ್ಕಾರದ ಅಧಿಕೃತ ಮಾಧ್ಯಮ ಸಂಸ್ಥೆ ‘ಚೀನಾ ಸೆಂಟ್ರಲ್ ಟೆಲಿವಿಷನ್’ (CCTV) ಆಯೋಜಿಸಿದ್ದ ‘ಸ್ಪ್ರಿಂಗ್ ಫೆಸ್ಟಿವಲ್ ಗಾಲಾ-2026’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಹ್ಯೂಮನಾಯ್ಡ್ ರೋಬೋಟ್‌ಗಳು ಜಗತ್ತನ್ನು ನಿಬ್ಬೆರಗುಗೊಳಿಸಿವೆ.
ಚೀನೀ ಕಂಪನಿಗಳಾದ ಜಿಕ್ ಲ್ಯಾಬ್ಸ್, ಯುನಿಟ್ರೀ ರೋಬೋಟಿಕ್ಸ್, ನೋಯೆಟಿಕ್ಸ್ ರೋಬೋಟಿಕ್ಸ್ ಮತ್ತು ಬೀಜಿಂಗ್ ಗಾಲ್ಬೋಟ್ ಕಂಪನಿಗಳು ಈ ಹ್ಯೂಮನಾಯ್ಡ್ ರೋಬೋಟ್‌ಗಳನ್ನು ಸಿದ್ದಪಡಿಸಿವೆ. ಈ ರೋಬೋಟ್‌ಗಳು ಚಲನೆ, ನೃತ್ಯ ಹಾಗೂ ಸಮರ ಕಲೆಗಳನ್ನು ಪ್ರದರ್ಶಿಸಿವೆ. ನೋಡುಗರ ಗಮನ ಸೆಳೆದಿವೆ. ಭವಿಷ್ಯವು ಹೇಗಿರಲಿದೆ ಎಂಬುದನ್ನು ರೋಬೋಟ್‌ಗಳ ಮೂಲಕ ಕಾರ್ಯಕ್ರಮವು ಪ್ರದರ್ಶಿಸಿದೆ.
ಯುನಿಟ್ರೀ ರೋಬೋಟಿಕ್ಸ್ ಕಂಪನಿಯ G1 ಮತ್ತು H2 ಹ್ಯೂಮನಾಯ್ಡ್ ರೋಬೋಟ್‌ಗಳು WuBOT ಎನ್ನುವ ಸಮರ ಕಲೆಗಳನ್ನು ಪ್ರದರ್ಶಿಸಿವೆ. ಈ ರೋಬೋಟ್‌ಗಳು ಸಮರ ಕಲೆ ಕಲಿತಿರುವ ಕಲಾವಿದರ ಜೊತೆಯಲ್ಲೇ ಸೆಣೆಸಾಡಿವೆ. ಜೊತೆಗೆ ಕುದುರೆ ಭಂಗಿ, ಪಲ್ಟಿ ಹೊಡೆತ ಸೇರಿದಂತೆ ಕಷ್ಟಕರ ಕಲೆಗಳನ್ನೂ ಪ್ರದರ್ಶಿಸಿವೆ.
ಮ್ಯಾಜಿಕ್ ಲ್ಯಾಬ್‌ನ ‘ಮ್ಯಾಜಿಕ್‌ಬಾಟ್ Z1’ ರೋಬೋಟ್‌ಗಳು ಸಂಪೂರ್ಣ 360 ಡಿಗ್ರಿ ತಿರುಗುವ ಮೂಲಕ ನೆರೆದಿದ್ದವರ ಚಿತ್ತ ಸೆಳೆದಿವೆ. ನೋಯೆಟಿಕ್ಸ್ ರೋಬೋಟಿಕ್ಸ್‌ನ ರೋಬೋಟ್‌ಗಳು ಹಾಸ್ಯ ರೇಖಾ ಚಿತ್ರವನ್ನು ಪ್ರದರ್ಶಿಸಿವೆ. ಈ ರೋಬೋಟ್‌ಗಳು 12 ಚದರ ಮೀಟರ್ ಒಳಗೆ ಸೈಡ್ ಫ್ಲಿಪ್ ಮತ್ತು ಬ್ಯಾಕ್ ಫ್ಲಿಪ್ ಚಲನೆಯನ್ನೂ ಯಶಸ್ವಿಯಾಗಿ ಪೂರೈಸಿವೆ.
ಚೀನಾ ತನ್ನ ಪ್ರಗತಿಯ ವೇಗವನ್ನು ರೋಬೋಟ್‌ಗಳ ಮೂಲಕವೂ ತೋರಿಸಿದೆ. ಈವರೆಗೆ, ಯಾವುದೇ ರಾಷ್ಟ್ರವು ಸಿದ್ದಪಡಿಸದ ರೀತಿಯ ರೋಬೋಟ್‌ಗಳನ್ನು ನಿರ್ಮಿಸಿದೆ. ಸದ್ಯ, ಪಾಶ್ಚಿಮಾತ್ಯ ಕಂಪನಿಗಳಾದ ಟೆಸ್ಲಾ ಸಂಸ್ಥೆಯು ಆಪ್ಟಿಮಸ್ ಮತ್ತು ನಿಯೊ ಕೂಡ ರೋಬೋಟ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿವೆ. ಆದರೆ, ಇನ್ನೂ ರೋಬೋಟ್‌ಗಳ ಪರಿಪೂರ್ಣ ನಿರ್ಮಾಣ ಸಾಧ್ಯವಾಗಿಲ್ಲವೆಂದು ವರದಿಯಾಗಿದೆ.





