ಭಾರತೀಯ ಯುವಕರನ್ನು ಉದ್ಯೋಗ ಕೊಡಿಸುವ ನೆಪದಲ್ಲಿ ಮ್ಯಾನ್ಮಾರ್‌ಗೆ ಕಳ್ಳಸಾಗಣೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಯುವಕರ ಕಳ್ಳಸಾಗಣೆ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ಬವಾನಾ ನಿವಾಸಿ ಡ್ಯಾನಿಶ್ ರಾಜಾ (24) ಮತ್ತು ಫರೀದಾಬಾದ್‌ನ ಹರ್ಷ (30) ಬಂಧಿತ ಆರೋಪಿಗಳು. ಈ ಇಬ್ಬರು ಸೈಬರ್ ಅಪರಾಧ ಎಸಗುವ ಜಾಲದೊಂದಿಗೆ ಸಂಪರ್ಕದಲ್ಲಿದ್ದು, ಯುವಕರನ್ನು ಮ್ಯಾನ್ಮಾರ್‌ಗೆ ಕಳ್ಳಸಾಗಣೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಮ್ಯಾನ್ಮಾರ್‌ಗೆ ಯುವಕರನ್ನು ಕಳೆದೊಯ್ದು, ಸೈಬರ್ ಗಲಾಮಗಿರಿಗೆ ತಳ್ಳಲಾಗುತ್ತಿದೆ. ಅವರನ್ನು ಸೈಬರ್ ಅಪರಾಧ ಕೃತ್ಯಗಳಲ್ಲಿ ಬಳಸಿಕೊಳ್ಳಲಾಗುತ್ತಿತ್ತು ಎಂದು ಹೇಳಲಾಗಿದೆ.
ಇತ್ತೀಚೆಗೆ, ಮ್ಯಾನ್ಮಾರ್ ಮಿಲಿಟರಿ ಅಧಿಕಾರಿಗಳು ಸೈಬರ್ ವಂಚನೆ ಕೇಂದ್ರದ ಮೇಲೆ ದಾಳಿ ಮಾಡಿ, ಸೈಬರ್ ವಂಚನೆ ಜಾಲದಲ್ಲಿ ಸಿಲುಕಿದ್ದ ಅನೇಕ ಭಾರತೀಯರನ್ನು ರಕ್ಷಿಸಿದ್ದಾರೆ. ಈ ಬೆನ್ನಲ್ಲೇ, ದೆಹಲಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
“ಮ್ಯಾನ್ಮಾರ್‌ನಲ್ಲಿ ಸಿಕ್ಕಿಕೊಂಡಿದ್ದ 300ಕ್ಕೂ ಹೆಚ್ಚು ಭಾರತೀಯ ಯುವಕರನ್ನು ರಕ್ಷಿಸಿ, ಭಾರತಕ್ಕೆ ಕರೆತರಲಾಗಿದೆ. ಈ ಎಲ್ಲರನ್ನು ಸೈಬರ್ ವಂಚನೆ ಕೇಂದ್ರಗಳಲ್ಲಿ ಬಲವಂತವಾಗಿ ಕೆಲಸಕ್ಕೆ ಹಚ್ಚಲಾಗಿತ್ತು. ಭಾರತಕ್ಕೆ ಮರಳಿದವರು ನೀಡಿದ ಮಾಹಿತಿ ಮೇಲೆ ಕ್ರಮ/ಕಾರ್ಯಾಚರಣೆಗಳು ನಡೆಯುತ್ತಿವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
“ಭಾರತಕ್ಕೆ ಮರಳಿದ ಯುವಕರಲ್ಲಿ ಒಬ್ಬರಾದ ಬವಾನಾ ಮೂಲದ ಇಮ್ತಿಯಾಜ್ ಬಾಬು ಎಂಬವರು ದೂರು ದಾಖಲಿಸಿದ್ದಾರೆ. ಡೇಟಾ ಎಂಟ್ರಿ ಉದ್ಯೋಗ ಕೊಡಿಸುವ ನೆಪವೊಡ್ಡಿ ತಮ್ಮನ್ನು ಮ್ಯಾನ್ಮಾರ್‌ಗೆ ಕಳ್ಳಸಾಗಣೆ ಮಾಡಿ, ವಂಚಿಸಲಾಗಿದೆ ಎಂಬುದಾಗಿ ಅವರು ವಿವರಿಸಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.




