2026ರ ಹೊಸ ವರ್ಷದ ಆರಂಭದಲ್ಲೇ ಜಾಗತಿಕ ಬೆಳವಣಿಗೆಯೊಂದು ನಡೆದುಹೋಗಿದೆ. ‘ಆನೆ ನಡೆದಿದ್ದೇ ದಾರಿ’ ಎಂಬಂತೆ ವಿಶ್ವದ ‘ದೊಡ್ಡಣ್ಣ’ ಎಂದು ಕರೆಸಿಕೊಂಡಿರುವ ಅಮೆರಿಕ, ವೆನಿಜುವೆಲಾ ಮೇಲೆ ಹಿಡಿತ ಸಾಧಿಸಿದೆ.
‘ಮಾದಕ ವಸ್ತುಗಳ ಕಳ್ಳಸಾಗಣೆ ಮತ್ತು ಭಯೋತ್ಪಾದನೆಗೆ ಪಿತೂರಿ’ಯ ನೆಪವೊಡ್ಡಿ 2026ರ ಜನವರಿ 3ರಂದು ದಕ್ಷಿಣ ಅಮೆರಿಕದ ಉತ್ತರ ಭಾಗದಲ್ಲಿರುವ ವೆನೆಜುವೆಲಾದ ರಾಜಧಾನಿ ಕ್ಯಾರಕಸ್ ಮೇಲೆ ಅಮೆರಿಕ ದಾಳಿ ನಡೆಸಿದ್ದಲ್ಲದೇ, ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋಸ್ ಅವರನ್ನು ಅಪಹರಿಸಿ, ನ್ಯೂಯಾರ್ಕ್ಗೆ ಕರೆದುಕೊಂಡು ಹೋಗಿದೆ. ಕ್ರಿಮಿನಲ್ ಆರೋಪಿಗಳ ರೀತಿಯಲ್ಲಿ ಕೈಗೆ ಕೋಳ ತೊಡಿಸಿ ವೆನೆಜುವೆಲಾ ಅಧ್ಯಕ್ಷ , ಮತ್ತವರ ಪತ್ನಿಯನ್ನು ಕರೆದೊಯ್ಯಲಾಗಿದೆ. ಈ ನಡುವೆ ವೆನೆಜುವೆಲಾದ ಸುಪ್ರೀಂ ಕೋರ್ಟ್ ವಿಶೇಷ ಸಭೆಯನ್ನು ನಡೆಸಿ, ಉಪ ರಾಷ್ಟ್ರಪತಿ ಡೆಲ್ಸಿ ರಾಡ್ರಿಗಸ್ ಅವರಿಗೆ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವಂತೆ ಸೂಚಿಸಿದೆ.
ಅಮೆರಿಕವು ವೆನಿಜುವೆಲಾ ಮೇಲೆ ನಡೆಸಿರುವ ಈ ದಾಳಿಯ ವಾಸ್ತವ ಸತ್ಯ ಇಡೀ ಜಗತ್ತಿಗೇ ಗೊತ್ತಿದೆ. ‘ವೆನಿಜುವೇಲಾದ ತೈಲ ನಮ್ಮದು. ಏಕೆಂದರೆ ನಮ್ಮ ತಾಂತ್ರಿಕತೆ, ನಮ್ಮ ಬೆವರು, ನಮ್ಮ ಪರಿಶ್ರಮ ಅಲ್ಲಿದೆ ‘ ಎಂದು 2023ರಲ್ಲೇ ಟ್ರಂಪ್ ಹೇಳಿಕೆ ನೀಡಿದ್ದರು. ಅಮೆರಿಕ ವೆನಿಜುವೆಲಾದ ಡ್ರಗ್ ಟ್ರಾಫಿಕಿಂಗ್ ತಡೆಗಟ್ಟುವ ನೆಪವೊಡ್ಡಿ 2025ರ ಆಗಸ್ಟ್ ತಿಂಗಳಿನಲ್ಲಿ ದೊಡ್ಡಹಡಗನ್ನು ಕಳುಹಿಸಿತ್ತು. ಇದರ ಉದ್ದೇಶ ‘ಡ್ರಗ್ ಟ್ರಾಫಿಕಿಂಗ್’ ನಿಲ್ಲಿಸುವುದು ಆಗಿರಲಿಲ್ಲ. ಬದಲಾಗಿ ಆಡಳಿತ ಬದಲಾವಣೆ ಮಾಡುವುದಾಗಿತ್ತು ಎಂಬುದು ಜನವರಿಯ ಬೆಳವಣಿಗೆಯನ್ನು ಗಮನಿಸಿದಾಗ ತಿಳಿಯುತ್ತಿದೆ.
ವೆನಿಜುವೆಲಾ ಒಂದು ಪುಟ್ಟ ರಾಷ್ಟ್ರ. ಆದರೆ, ವೆನಿಜುವೆಲಾದಲ್ಲಿ ಭಾರೀ ಪ್ರಮಾಣದಲ್ಲಿ ತೈಲ ಸಂಪತ್ತು ಇದೆ. ವಿಶ್ವದ ತೈಲ ಸಂಗ್ರಹದಲ್ಲಿ ಶೇ. 18ರಷ್ಟು ತೈಲವು ವೆನಿಜುವೆಲಾದಲ್ಲೇ ಇದೆ. ಸೌದಿ ಅರೇಬಿಯಾದಲ್ಲಿರುವುದಕ್ಕಿಂತಲೂ ಹೆಚ್ಚಿನ ತೈಲವು ವೆನಿಜುವೆಲಾದಲ್ಲಿದೆ. ಜೊತೆಗೆ, ವೆನಿಜುವೆಲಾ ತನ್ನ ಒಡಲಿನೊಳಗೆ ಜಗತ್ತಿನಲ್ಲಿ ಅತ್ಯಂತ ಹೆಚ್ಚು ತೈಲ ನಿಕ್ಷೇಪ ಮಾತ್ರವಲ್ಲದೆ, ಸ್ಮಾರ್ಟ್ ಫೋನ್ ಸೇರಿದಂತೆ ಎಲ್ಲದಕ್ಕೂ ಬಳಕೆಯಾಗುವ ನೀಲಿ ಚಿನ್ನ ಎಂದೇ ಹೇಳಲಾಗುತ್ತಿರುವ ಕೋಲ್ಟನ್, ನ್ಯಾಚುರಲ್ ಗ್ಯಾಸ್ ಸೇರಿದಂತೆ ಹಲವು ಅಪರೂಪದ ಸಂಪತ್ತನ್ನು ಹೊಂದಿದೆ. ದಶಕಗಳ ಕಾಲ ಜಗತ್ತಿನ ತೈಲದ ಹಸಿವನ್ನು ನೀಗಿಸುವ ಸಾಮಥ್ಯವಿರುವ ವೆನಿಜುವೆಲಾದ ಮೇಲೆ ಸದ್ಯ ಅಮೆರಿಕವು ಹಿಡಿತ ಸಾಧಿಸಲು ಹೊರಟಿದೆ.
ವೆನಿಜುವೆಲಾ ಅಧ್ಯಕ್ಷ ಮಡುರೊನನ್ನು ಟ್ರಂಪ್ ಆಡಳಿತವು ಬಂಧಿಸಲು ಆಯ್ಕೆ ಮಾಡಿಕೊಂಡ ದಿನಾಂಕ ಜನವರಿ 3. ಈ ಹಿಂದೆ ಕೂಡ ಇದೇ ಟ್ರಂಪ್ ಆಡಳಿತವು 2020ರ ಜನವರಿ 3ರಂದು ಇರಾನಿನ ಸೇನಾ ಕಮಾಂಡರ್ ಸುಲೈಮಾನಿಯನ್ನು ಹತ್ಯೆಗೈದಿತ್ತು. ಅಲ್ಲದೇ, ಅಮೆರಿಕವು 1989ರಲ್ಲಿ ಪನಾಮಾ ದೇಶದ ಅಧ್ಯಕ್ಷರಾಗಿದ್ದ ನೊರಿಗೆಯವರನ್ನೂ ಬಂಧಿಸಿದ್ದು ಜನವರಿ 3 ಎಂಬುದನ್ನು ಸ್ಮರಿಸಬಹುದು.
ವೆನಿಜುವೆಲಾ ಮೇಲೆ ಸದ್ಯ ‘ಅಮೆರಿಕ’ದ ಹಿಡಿತವು ಮೂರನೇ ವಿಶ್ವಯುದ್ಧದ ಕಾರ್ಮೋಡ ಆವರಿಸಿದೆ. ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಜಾಗತಿಕವಾಗಿ ಏನು ಬೇಕಾದರೂ ಬೆಳವಣಿಗೆ ಸಂಭವಿಸುವುದಕ್ಕೆ ವೇದಿಕೆಯೊದಗಿಸಿದೆ.
ವೆನಿಜುವೆಲಾದ ಬೆಳವಣಿಗೆಯಿಂದಾಗಿ ಅಮೆರಿಕಾದ ಎದುರಾಳಿಗಳಾದ ರಷ್ಯಾ ಹಾಗೂ ಚೀನಾ ಇನ್ನು ಮುಂದೆ ಅಂತಾರಾಷ್ಟ್ರೀಯ ನಿಯಮಗಳಿಗೆ ನಾವು ಬದ್ಧರಲ್ಲ. ಏಕೆಂದರೆ ಅದಕ್ಕೆ ಎಳ್ಳಷ್ಟೂ ಬೆಲೆಯಿಲ್ಲ ಎಂಬ ಅಭಿಯಾನ ಪ್ರಾರಂಭಿಸಿ ಇಂದು ಅಮೆರಿಕದ ಶೈಲಿಯಲ್ಲಿಯೇ ನಾಳೆ ರಷ್ಯಾವು ಉಕ್ರೈನ್ ಅಧ್ಯಕ್ಷ ಝೆಲೆನ್ಸ್ಕಿಯನ್ನು ಬಂಧಿಸುವುದಿಲ್ಲ ಎಂಬ ಖಾತರಿ ಇದೆಯೇ? ದಶಕಗಳಿಂದ ಜಗತ್ತಿನ ಎಐ ಮತ್ತು ಚಿಪ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ತೈವಾನ್ ದೇಶವನ್ನು ಚೀನಾ ನಾಳೆ ಆಕ್ರಮಿಸುವುದಿಲ್ಲ ಎಂದು ಹೇಗೆ ಹೇಳುವುದು? ಅದನ್ನು ತಡೆಯುವ ಶಕ್ತಿ ಯಾರಿಗಿದೆ? ಅನ್ನುವ ಯಾವ ಗ್ಯಾರಂಟಿ ಯಾರಿಗೂ ಇಲ್ಲ.
ಇನ್ನು ಅಮೆರಿಕವು ಮಡುರೊ ಮೇಲೆ ಹೊರಿಸಿರುವ ‘ಮಾದಕ ವಸ್ತುಗಳ ಕಳ್ಳಸಾಗಣೆ’ ಆರೋಪವು ನೆಪ ಮಾತ್ರ. ಈ ಹಿಂದೆ ಕೂಡ ಅಮೆರಿಕ ಇರಾಕ್, ಲಿಬಿಯಾ ಸೇರಿದಂತೆ ಹಲವು ದೇಶಗಳ ಮೇಲೆ ತಮ್ಮ ದಾಳಿಗಳನ್ನು ಸಮರ್ಥಿಸಿಕೊಳ್ಳಲು ಇಂಥದ್ದೇ ನೆಪಗಳನ್ನೊಡ್ಡಿತ್ತು.
ಸದ್ಯದ ಬೆಳವಣಿಗೆಗೆ ಪ್ರಮುಖ ಕಾರಣವನ್ನು ಅವಲೋಕಿಸಿದರೆ ಡಿ ಡಾಲರೈಸೇಷನ್ ಕ್ರಮ. ಅಂದರೆ ಡಾಲರ್ ಹೊರತು ಪಡಿಸಿ ಬೇರೆ ಕರೆನ್ಸಿಯ ಮೂಲಕ ವ್ಯಾಪಾರ, ವಹಿವಾಟು. ಇದನ್ನು ಮಾಡುವುದಾಗಿ ಯಾವುದೇ ದೇಶ ಹೇಳಿದರೂ ಅವರನ್ನು ವ್ಯವಸ್ಥಿತವಾಗಿ ಅಮೆರಿಕ ಮಟ್ಟ ಹಾಕಿ ಬಿಡುತ್ತದೆ. ಏಕೆಂದರೆ ಜಗತ್ತಿನ ಮೇಲೆ ತನ್ನ ನಿಯಂತ್ರಣವನ್ನು ಖಾಯಂ ಆಗಿ ಉಳಿಸಿಕೊಳ್ಳಲು ಅದರ ಬಳಿ ಇರುವ ಅತ್ಯಂತ ಪ್ರಬಲ ಆಯುಧವೆಂದರೆ ಅದು ಡಾಲರ್. ಈ ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಬ್ರಿಕ್ಸ್ ಸಂಘಟನೆಯು ಪ್ರಯತ್ನಿಸುತ್ತಿರುವುದು ಕೂಡ ಅಮೆರಿಕ ಸಹಿಸುತ್ತಿಲ್ಲ. ಭಾರತ ಕೂಡ ಬ್ರಿಕ್ಸ್ ಸಂಘಟನೆಯ ಸದಸ್ಯನಾಗಿರುವುದಕ್ಕಾಗಿಯೇ ಪ್ರಧಾನಿ ಮೋದಿಯವರನ್ನು ‘ಅತ್ಯುತ್ತಮ ಗೆಳೆಯ’ ಎನ್ನುತ್ತಲೇ ‘ಸುಂಕದ ಮೇಲೆ ಸುಂಕ’ದ ಗುದ್ದನ್ನು ನೀಡುತ್ತಿದೆ ಅನ್ನುವುದನ್ನು ಮರೆಯುವಂತಿಲ್ಲ.
ವೆನಿಜುವೆಲಾ, ತೈಲ ವ್ಯಾಪಾರದಲ್ಲಿ ಅಮೆರಿಕದ ಡಾಲರ್ ಕರೆನ್ಸಿಯನ್ನು ಬಳಸುವುದನ್ನು 2017ರಿಂದ ನಿಲ್ಲಿಸಿತ್ತು. ಅದರ ಬದಲು ಚೀನಾದ ಯುವಾನ್ ಕರೆನ್ಸಿ ಮೂಲಕ ವಹಿವಾಟು ನಡೆಸುತ್ತಿತ್ತು. ಇದೂ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿತ್ತು. 2006ರ ವೇಳೆಗೆ ಇರಾಕಿನಲ್ಲಿ ‘ಜಗತ್ತನ್ನು ನಾಶ ಪಡಿಸುವ ಅಸ್ತ್ರಗಳಿವೆ ಎಂಬ ನೆಪವೊಡ್ಡಿ’ ಇರಾಕ್ನ ಸದ್ದಾಂ ಹುಸೇನ್ ಎನ್ನುವ ವ್ಯಕ್ತಿಯನ್ನು ಇಲ್ಲವಾಗಿಸಿದ್ದು ಕೂಡ ‘ಡಾಲರ್’ ಕಾರಣಕ್ಕೆ ಎಂಬುದನ್ನು ನಾವು ಮರೆಯಬಾರದು.
ಈ ಎಲ್ಲ ಜಾಗತಿಕ ವಿದ್ಯಮಾನಗಳನ್ನು ಅವಲೋಕಿಸಿದಾಗ, ಅಮೆರಿಕದ ವಿದೇಶಾಂಗ ನೀತಿಯಲ್ಲಿನ ಹುಳುಕುಗಳು ಮತ್ತು ಬೇರೆ ದೇಶದ ಆಡಳಿತದ ವಿಚಾರದಲ್ಲಿ ಹಸ್ತಕ್ಷೇಪವನ್ನು ಎತ್ತಿ ತೋರಿಸುತ್ತದೆ. ಬಲವಾದ ಆಧಾರವಿಲ್ಲದೇ, ಬೇರೆ ದೇಶಗಳ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸುವುದು, ತಮ್ಮ ಕ್ರಮ ನ್ಯಾಯಯುತ ಎಂದು ಸಮರ್ಥಿಸಿಕೊಳ್ಳುವುದು ಅಮೆರಿಕದ ಹಳೆಯ ಚಾಳಿ.
‘ನನಗೆ ನೊಬೆಲ್ ಶಾಂತಿ ಪ್ರಶಸ್ತಿ’ ಕೊಡಿ ಎಂದು ಅಂಗಲಾಚುತ್ತಿರುವ ಟ್ರಂಪ್ ಎನ್ನುವ ‘ಗೂಂಡಾಗಳ ಜಾಗತಿಕ ನಾಯಕ’ ವೆನಿಜುವೆಲಾ ಮೇಲೆ ದಾಳಿ ನಡೆಸುವ ಮೂಲಕ ಎಲ್ಲ ಜಾಗತಿಕ ನಿಯಮಗಳನ್ನು ಮುರಿದಿದ್ದಾರೆ. ಆ ಮೂಲಕ 2026ರ ಆರಂಭದಲ್ಲೇ ಇನ್ನೂ ಕೆಲವು ವರ್ಷ ಜಾಗತಿಕ ಶಾಂತಿ ಮರೀಚಿಕೆ ಎಂದು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.
‘ವೆನಿಜುವೆಲಾದಲ್ಲಿ ತಾವೇ ಆಡಳಿತ ನಡೆಸುತ್ತೇವೆ’ ಎಂದು ಟ್ರಂಪ್ ಹೇಳಿಕೆ ನೀಡಿದ್ದಾರಾದರೂ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ವೆನಿಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಮೊದಲ ಭಾಷಣದಲ್ಲೇ ಉಚ್ಚರಿಸಿದ್ದಾರೆ. ಇನ್ನು ಟ್ರಂಪ್ ನೀಡಿರುವ ‘ನಮ್ಮದೇ ಆಡಳಿತ’ ಹೇಳಿಕೆಗೆ ಪೂರಕವಾದ ವಾತಾವರಣವಂತೂ ಸದ್ಯ ವೆನಿಜುವೆಲಾದಲ್ಲಿಲ್ಲ. ಬಂಧಿತ ಅಧ್ಯಕ್ಷ ಮಡೂರೊ ಅವರಿಗೆ ನಿಷ್ಠವಾಗಿದ್ದ ವೆನೆಜುವೆಲಾದ ಸೇನೆ ಈಗ ಯಾವ ನಿಲುವು ತಳೆಯಲಿದೆ ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ.
ಇದನ್ನು ಓದಿದ್ದೀರಾ? ವೆನೆಜುವೆಲಾ ದಾಳಿ | ಜಗತ್ತಿನೆದುರು ಬೆತ್ತಲಾದ ಅಮೆರಿಕ ದುಷ್ಟತನ ಮತ್ತು ಟ್ರಂಪ್ ಕಿಡಿಗೇಡಿತನ
ಅಮೆರಿಕ ಸದ್ಯ ವೆನಿಜುವೆಲಾ ಮೇಲೆ ದಾಳಿ ನಡೆಸಿ ಅಂತಾರಾಷ್ಟ್ರೀಯ ಕಾನೂನನ್ನು ಮುರಿದಿದೆ. ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುವ ಇಂತಹ ಬೆಳವಣಿಗೆಗಳು ಮತ್ತೊಂದಿಷ್ಟು ಜಾಗತಿಕ ಬೆಳವಣಿಗೆಗೆ ವೇದಿಕೆಯೊದಗಿಸುತ್ತವೆ. ಹೀಗಾಗಿ, ಅಂಥದ್ದೊಂದು ಸನ್ನಿವೇಶ ಸೃಷ್ಟಿಯಾಗುವುದಕ್ಕೂ ಮುನ್ನ ವಿಶ್ವಸಂಸ್ಥೆಯು ಶಾಂತಿ ಮಾತುಕತೆಗೆ ಮುಂದಾಗಬೇಕಿದೆ.
ವೆನಿಜುವೆಲಾ ಮೇಲೆ ಅಮೆರಿಕದ ದಾಳಿಯು ಖಂಡನೀಯ. ಭಾರತ ಈಗಾಗಲೇ ಈ ಕ್ರಮವನ್ನು ಖಂಡಿಸುವ ಬದಲು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ‘ತೀವ್ರ ಕಳವಳ’ ಎಂದು ಉಚ್ಛರಿಸಿದೆ. ಶಾಂತಿ ಮಾತುಕತೆಗೆ ಮುಂದಾಗುವಂತೆ ತಿಳಿಸಿದೆಯಾದರೂ, ಸ್ಪಷ್ಟವಾಗಿ ಖಂಡಿಸುವ ‘ಎದೆಗಾರಿಕೆ’ಯನ್ನು ತೋರಿಸಿಲ್ಲ. ಇನ್ನು, ಅಮೆರಿಕ ವಿರೋಧಿ ದೇಶಗಳು ಈ ಬೆಳವಣಿಗೆಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎನ್ನುವುದರ ಮೇಲೆ ಜಾಗತಿಕ ಆರ್ಥಿಕತೆಯೂ ನಿಂತಿದೆ. ಕೊನೆಗೂ ಎಲ್ಲವೂ ಬಂದು ನಿಲ್ಲುವುದು ಹಣ ಮತ್ತು ನಿಯಂತ್ರಣ ಎನ್ನುವ ಎರಡು ಅಂಶಗಳಲ್ಲಿ ಎನ್ನುವುದನ್ನು ನಾವು ಯಾರೂ ಮರೆಯಬಾರದು.





