ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇಂದು ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಯ ನಡುವೆಯೇ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಹುಭಾಷಾ ನಟ ಕಿಶೋರ್ ಕುಮಾರ್, “ಇಂದು ಮತ್ತೆ ರಾಜರ ಕಾಲಕ್ಕೆ ಹೋದ ಅನುಭವ” ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್‌ಗಿಂತಲೂ ಮುನ್ನ ಬಸವಣ್ಣನವರ ‘ಉಳ್ಳವರು ಶಿವಾಲಯ ಕಟ್ಟುವರು, ನಾನೇನು ಮಾಡಲಿ ಬಡವನಯ್ಯಾ’ ಎಂಬ ವಚನವೊಂದನ್ನು ಹಂಚಿಕೊಂಡಿದ್ದರು. ಆ ಬಳಿಕ ಈ ಪೋಸ್ಟ್ ಹಾಕಿರುವ ಅವರು, “ಧರ್ಮ, ದೇವರನ್ನು ಮುಂದಿಟ್ಟು ರಾಜಕಾರಣಿಗಳು ಪ್ರಶ್ನಾತೀತರಾಗುವುದು ನಾಡಿನ ಭವಿಷ್ಯಕ್ಕೆ ಅಪಾಯಕಾರಿ” ಎಂದು ಬರೆದುಕೊಂಡಿದ್ದಾರೆ.
“ಮಂದಿರ, ರಾಜರು ಮತ್ತು ರಾಜಕೀಯ ನಿಯಂತ್ರಣ ನಾವು ನೋಡದ್ದೇನಲ್ಲ. ಇಂದು ಮತ್ತೆ ರಾಜರ ಕಾಲಕ್ಕೆ ಹೋದ ಅನುಭವ.. ದೇವರ ಹೆಸರಲ್ಲಿ ಪೂಜಾರಿಯೊಂದಿಗೆ ಸೇರಿ ಜನರನ್ನು ನಿಯಂತ್ರಿಸಿ, ದೇಗುಲ ಕಟ್ಟಿಸಿ, ತಮ್ಮ ಹೆಸರು ಕೆತ್ತಿಸಿ, ದೇಗುಲದ ಶಿಲ್ಪಿಯ ಕೈ ಕತ್ತರಿಸಿ, ತಮ್ಮ ಕೀರ್ತಿ ಪತಾಕೆಯನ್ನು ಹಾರಿಸಿ, ಅಜರಾಮರರಾದ ದೊರೆಗಳು, ಉಧೋ ಉಧೋ ಎಂದ ಪ್ರಜೆಗಳು, ಭಟ್ಟಂಗಿಗಳು, ಧರ್ಮ ಮತ್ತು ದೇವರು ರಾಜಕಾರಣಿಗಳ ಕೈಗೆ ಹೋಗಿ ತಾವೂ ಪ್ರಶ್ನಾತೀತವಾಗಿ ಅವರನ್ನೂ ಪ್ರಶ್ನಾತೀತರನ್ನಾಗಿಸಿಬಿಡುವುದು ಸಂಸ್ಕೃತಿಯ ಚಲನಶೀಲತೆಗೆ, ನಾಡಿನ ಭವಿಷ್ಯಕ್ಕೆ ಅತೀ ಅಪಾಯಕಾರಿ” ಎಂದು ಬಹುಭಾಷಾ ನಟ ಕಿಶೋರ್ ಕುಮಾರ್ ಪರೋಕ್ಷವಾಗಿ ಪ್ರಧಾನಿ ನರೇಂದ್ರಯವರನ್ನು ಟೀಕಿಸಿದ್ದಾರೆ.
ಈ ಪೋಸ್ಟ್‌ನ ಜೊತೆಗೆ ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಬಿಡಿಸಿದ್ದ ವ್ಯಂಗ್ಯಚಿತ್ರವೊಂದನ್ನು ಕೂಡ ಹಂಚಿಕೊಂಡಿದ್ದಾರೆ. ಈ ವ್ಯಂಗ್ಯಚಿತ್ರದಲ್ಲಿ ಗೋದಿ ಮಾಧ್ಯಮಗಳು ರಾಮಮಂದಿರ ಉದ್ಘಾಟನೆ ಪ್ರಸಾರದ ಬಗ್ಗೆ ನಿರತವಾಗಿದ್ದರೆ, ದೇಶದಲ್ಲಿರುವ ಹಣದುಬ್ಬರ, ಬಡತನ, ನಿರುದ್ಯೋಗ, ಕೋಮುವಾದ ಹಾಗೂ ಬಂಡವಾಳಶಾಹಿ ವ್ಯವಸ್ಥೆಯ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವ ದೃಶ್ಯವನ್ನು ಚಿತ್ರಿಸಿದ್ದಾರೆ.





