ಐವಿಎಫ್ ಮೂಲಕ ಗರ್ಭ ಧರಿಸಿದ್ದ ಕನ್ನಡದ ನಟಿ ಭಾವನಾ ರಾಮಣ್ಣ ಅವರಿಗೆ ಅವಳಿ ಮಕ್ಕಳು ಜನಿಸಿದ್ದು, ಈ ಪೈಕಿ ಒಂದು ಮಗು ಆರೋಗ್ಯ ಸಮಸ್ಯೆಯಿಂದಾಗಿ ನಿಧನವಾಗಿರುವುದಾಗಿ ವರದಿಯಾಗಿದೆ.
ಮತ್ತೊಂದು ಹೆಣ್ಣು ಮಗು ಹಾಗೂ ತಾಯಿ ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ. ನಟಿ ಭಾವನಾ ಗರ್ಭಿಣಿಯಾಗಿ 7 ತಿಂಗಳ ಪೂರ್ಣಗೊಳಿಸುತ್ತಿದ್ದಂತೆಯೇ ಒಂದು ಮಗುವಿನ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರ ಸೂಚನೆಯಂತೆ 8 ತಿಂಗಳಿಗೆ ಹೆರಿಗೆ ಮಾಡಿಸಲಾಗಿದೆ. ಈ ವೇಳೆ ಒಂದು ಮಗು ಮೃತಪಟ್ಟಿದೆ. ಇದೀಗ ಹೆಣ್ಣು ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ವೆನಿಸ್ ಚಿತ್ರೋತ್ಸವ | ದಾಖಲೆಯ 23 ನಿಮಿಷಗಳ ಚಪ್ಪಾಳೆ ಗಿಟ್ಟಿಸಿಕೊಂಡ ಗಾಝಾದ ‘ದಿ ವಾಯ್ಸ್ ಆಫ್ ಹಿಂದ್ ರಜಬ್’ ಚಿತ್ರ
40 ವರ್ಷದ ಕನ್ನಡದ ನಟಿ ಹಾಗೂ ರಾಜಕಾರಣಿ ಭಾವನಾ ರಾಮಣ್ಣ ಮದುವೆಯಾಗಿಲ್ಲ. ಹೀಗಾಗಿ, ತಾಯಿಯಾಗುವ ಬಯಕೆಯಿಂದ ಐವಿಎಫ್ ಚಿಕಿತ್ಸೆ ಪಡೆದಿದ್ದರು. ಅಲ್ಲದೇ, ತಾನು ಎರಡು ಮಕ್ಕಳ ತಾಯಿಯಾಗಲಿದ್ದೇನೆ ಎಂದು ಸ್ವತಃ ಅವರೇ ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಅಲ್ಲದೇ, ಆ ಬಳಿಕ ಇತ್ತೀಚೆಗಷ್ಟೇ ಕುಟುಂಬ ಸದಸ್ಯರು, ಆಪ್ತ ವಲಯದೊಂದಿಗೆ ಸೀಮಂತ ಕೂಡ ಆಚರಿಸಿಕೊಂಡಿದ್ದರು.





