ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಹಣ ಗಳಿಸುವ ಮೂಲಕ ಸುದ್ದಿಯಾಗಿದ್ದ ‘ಅನಿಮಲ್’ ಸಿನಿಮಾವು ನೆಟ್ಫ್ಲಿಕ್ಸ್ ಒಟಿಟಿಯಲ್ಲಿ ಜ.26ರಂದು ಬಿಡುಗಡೆಯಾಗಲಿದೆ.
ಜನವರಿ 26ರಂದು ‘ಅನಿಮಲ್’ ಸಿನಿಮಾವು ಬಿಡುಗಡೆಯಾಗಲಿದೆ ಎಂದು ಟ್ವೀಟ್ ಮೂಲಕ ನೆಟ್ಫ್ಲಿಕ್ಸ್ ಇಂಡಿಯಾ ಮಾಹಿತಿ ಹಂಚಿಕೊಂಡಿದೆ. ಸಹ ನಿರ್ಮಾಪಕರ ಜತೆಗಿನ ಹಣಕಾಸು ಸಂಘರ್ಷದಿಂದ ‘ಅನಿಮಲ್’ ಒಟಿಟಿ ಬಿಡುಗಡೆ ವಿಳಂಬವಾಗಿತ್ತು. ಇದೀಗ ಈ ವಿವಾದ ಕೊನೆಗೊಂಡಿದ್ದು, ನಾಳೆ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ.
ಕಾನೂನು ಹೋರಾಟದಿಂದ ಬಿಡುಗಡೆ ವಿಳಂಬವಾಗುವ ಆತಂಕವಿತ್ತು. ಈಗ ಈ ಆತಂಕ ನಿವಾರಣೆಯಾಗಿದ್ದರಿಂದ ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ನಟನೆಯ ಈ ಚಿತ್ರವು, ಹಿಂದಿ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಚಿತ್ರ ಸ್ಟ್ರೀಮ್ ಆಗಲಿದೆ ಎಂದು ನೆಟ್ಫ್ಲಿಕ್ಸ್ ತಿಳಿಸಿದೆ.
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ, ಬಾಲಿವುಡ್ ನಟ ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾವು ಡಿಸೆಂಬರ್ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಅತ್ಯಧಿಕ ಹಿಂಸೆಯಿಂದಾಗಿ ವಿಮರ್ಶಕರಿಂದ ಕಟು ಟೀಕೆಗೆ ಒಳಗಾಗಿದ್ದರೂ ಈ ಚಿತ್ರದ ಗಳಿಕೆ ಭರ್ಜರಿಯಾಗಿತ್ತು.
‘ಅನಿಮಲ್’ ಚಿತ್ರದಲ್ಲಿ ಟೀ ಸೀರಿಸ್ (ಕ್ಯಾಸೆಟ್ ಇಂಡಸ್ಟ್ರಿ) ತಮಗೆ ನೀಡಬೇಕಾದ ಮೊತ್ತವನ್ನು ಪಾವತಿಸಿಲ್ಲ ಎಂದು ಸಿನಿ ಒನ್ ಸ್ಟುಡಿಯೋಸ್ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣವನ್ನು ಈ ಎರಡು ಕಂಪನಿಗಳು ಇದೀಗ ಇತ್ಯರ್ಥ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಒಟಿಟಿ ಬಿಡುಗಡೆಗೆ ಇದ್ದ ಆತಂಕ ನಿವಾರಣೆಯಾದ ಬೆನ್ನಲ್ಲೇ ಜ.26ರಂದು ಚಿತ್ರ ಸ್ಟ್ರೀಮ್ ಆಗಲಿದೆ ಎಂದು ನೆಟ್ಫ್ಲಿಕ್ಸ್ ತಿಳಿಸಿದೆ.
ಇದನ್ನು ಓದಿದ್ದೀರಾ? 2024ರ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದ ಬಿಜೆಪಿ
‘ಅನಿಮಲ್’ ಚಿತ್ರದಲ್ಲಿ ನಾಯಕ ರಣಬೀರ್ ಕಪೂರ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ಬಾಬಿ ಡಿಯೋಲ್ ವಿಲನ್ ಆಗಿ ನಟಿಸಿದ್ದಾರೆ. ರಣಬೀರ್ ತಂದೆಯ ಪಾತ್ರವನ್ನು ಹಿರಿಯ ನಟ ಅನಿಲ್ ಕಪೂರ್ ನಿರ್ವಹಿಸಿದ್ದಾರೆ. ತೃಪ್ತಿ ದಿಮ್ರಿ, ಬಬ್ಲು ಪೃಥ್ವಿರಾಜ್, ಶಕ್ತಿಕಪೂರ್, ಪ್ರೇಮ್ ಚೋಪ್ರಾ, ಮಧು ರಾಜಾ, ಸುರೇಶ್ ಒಬೆರಾಯ್ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.





