ಕಲರ್ಸ್ ಕನ್ನಡ ವಾಹಿನಿಯಲ್ಲಿ ಸ್ಯಾಂಡಲ್ವುಡ್ ನಟ ಕಿಚ್ಚ ಸುದ್ದೀಪ್ ನಡೆಸಿಕೊಡುವ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ 12ನೇ ಸೀಸನ್ನಲ್ಲಿ ಗಿಲ್ಲಿ ನಟ ಎಂದೇ ಖ್ಯಾತಿ ಪಡೆದಿರುವ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನಟರಾಜ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ರನ್ನರ್ ಅಪ್ ಪ್ರಶಸ್ತಿಯನ್ನು ಕರಾವಳಿ ಮೂಲದ ಮುಂಬೈಯಲ್ಲಿ ವಾಸವಿರುವ ರಕ್ಷಿತಾ ಶೆಟ್ಟಿ ತಮ್ಮದಾಗಿಸಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರದ ಹಳ್ಳಿಯ ರೈತ ಕುಟುಂಬದಿಂದ ಬಂದಿರುವ ಗಿಲ್ಲಿ ನಟ ಹಾಸ್ಯ ಕಲಾವಿದನಾಗಿ ಕಾಣಿಸಿಕೊಂಡಿದ್ದಾರೆ.
ತಮ್ಮ 10ನೇ ತರಗತಿ ಪೂರ್ಣಗೊಳಿಸಿದ ನಂತರ 2 ವರ್ಷಗಳ ಕೋರ್ಸ್ ಐಟಿಐ ಮಾಡಿದ್ದಾರೆ. ಪಕ್ಕಾ ಹಳ್ಳಿ ಪ್ರತಿಭೆಯಾಗಿರುವ ಗಿಲ್ಲಿ, ಮಾತನಾಡುವ ಶೈಲಿಯನ್ನೇ ತನ್ನ ಕಾಮಿಡಿಯಲ್ಲಿ ಬಳಸಿ ಜನಪ್ರಿಯರಾಗಿದ್ದರಿಂದ ಬಿಗ್ ಬಾಸ್ ಫೈನಲ್ನಲ್ಲಿ ತಮ್ಮ ಹೆಸರು ಉಳಿಸಿಕೊಂಡಿದ್ದರು.
ಬಿಗ್ ಬಾಸ್ ಗೆದ್ದ ಗಿಲ್ಲಿನಟ ಅವರಿಗೆ 50 ಲಕ್ಷ ರೂ. ನಗದು ಬಹುಮಾನ ಹಾಗೂ ಮಾರುತಿ ಕಂಪನಿಯ ಹೊಸ ಕಾರು ಸಿಕ್ಕಿದೆ.
ರಕ್ಷಿತಾ ಶೆಟ್ಟಿ ಮೊದಲ ರನ್ನರ್ ಅಪ್ ಆದರೆ, ಕನ್ನಡಪರ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಅಶ್ವಿನಿ ಗೌಡ ಎರಡನೇ ರನ್ನರ್ ಅಪ್ ಆಗಿದ್ದಾರೆ.
ಬಿಗ್ ಬಾಸ್ ಸ್ಟುಡಿಯೋ ಮುಂದೆ ಜನಜಂಗುಳಿ: ಸ್ಥಳಕ್ಕಾಗಮಿಸಿದ ಎಸ್ಪಿ
ಗಿಲ್ಲಿ ನಟ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಹೊರವಲಯದಲ್ಲಿರುವ ಬಿಗ್ ಬಾಸ್ ಸ್ಟುಡಿಯೋ ಮುಂದೆ ಗಿಲ್ಲಿಯ ಅಭಿಮಾನಿಗಳು ಸೇರಿದ ಹಿನ್ನೆಲೆಯಲ್ಲಿ ಜನರನ್ನು ನಿಯಂತ್ರಿಸಲು ಎಸ್ಪಿ ಸ್ಥಳಕ್ಕೆ ಆಗಮಿಸಬೇಕಾದ ಪರಿಸ್ಥಿತಿ ಬಂದಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಕೂಡ ಮಾಡಿರುವುದಾಗಿ ವರದಿಯಾಗಿದೆ.





