- ಸುದ್ದಿ ನಿಜವೆಂದು ತಿಳಿದು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದ ಹಲವಾರು ನೆಟ್ಟಿಗರು
- ‘ಅವರು ಚೆನ್ನಾಗಿಯೇ ಇದ್ದಾರೆ’ ಎಂದು ಟ್ವೀಟ್ ಮಾಡಿದ ರಮ್ಯಾ ಆಪ್ತೆ ಚಿತ್ರಾ ಸುಬ್ರಹ್ಮಣ್ಯ
ಸ್ಯಾಂಡಲ್‌ವುಡ್ ನಟಿ, ಲೋಕಸಭೆಯ ಮಾಜಿ ಸದಸ್ಯೆ ‘ರಮ್ಯಾ ಹೃದಯಾಘಾತದಿಂದ ನಿಧನ’ ಎಂದು ಕೆಲ ಕಿಡಿಗೇಡಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿ ಹಬ್ಬಿಸಿದ್ದು, ‘ಇದು ಸುಳ್ಳು’ ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ, ರಮ್ಯಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಶಾಕಿಂಗ್ ಸುದ್ದಿ ಹರಿದಾಡಿತ್ತು. ಆದರೆ, ರಮ್ಯಾ ಅವರ ಆಪ್ತರು ಈ ಸುದ್ದಿಯನ್ನು ತಳ್ಳಿ ಹಾಕಿದ್ದು, ನಟಿ ಆರೋಗ್ಯವಾಗಿದ್ದಾರೆ. ಸದ್ಯ ಜಿನೆವಾ ಪ್ರವಾಸದಲ್ಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ರಮ್ಯಾ ತೀರಿಕೊಂಡಿದ್ದಾರೆ ಎಂಬ ವದಂತಿಯನ್ನು ನಂಬಿ ಹಲವು ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ನಟಿಗೆ ಸಂತಾಪ ಸೂಚಿಸಿದ್ದರು. ಸುದ್ದಿಯನ್ನು ಖಚಿತ ಪಡಿಸಿಕೊಳ್ಳದೆ ಮಾಧ್ಯಮಗಳು ಕೂಡ ರಮ್ಯಾ ಸಾವಿನ ಸುದ್ದಿಯನ್ನು ಬಿತ್ತರಿಸಿದ್ದವು. ಅಸಲಿ ವಿಚಾರ ಬೆಳಕಿಗೆ ಬಂದ ನಂತರ ಟ್ವೀಟ್ ಡಿಲೀಟ್ ಮಾಡಿ ಕ್ಷಮೆ ಯಾಚಿಸಿದ್ದಾರೆ.
ತಮಿಳುನಾಡಿನ ಕೆಲವು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೂ ನಟಿಯ ಅಗಲಿಕೆ ಸುದ್ದಿ ಸತ್ಯ ಎಂದು ತಿಳಿದು ಸಂತಾಪ ಸೂಚಿಸಿದ್ದರು.
ಬುಧವಾರ ಬೆಳಗ್ಗೆ ಸುಮಾರು 12 ಗಂಟೆಯಿಂದ ನಟಿ ರಮ್ಯಾ ಅವರ ನಿಧನ ಕುರಿತ ಸುದ್ದಿ ವೈರಲ್ ಆಗಿತ್ತು. ಅನೇಕರು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. ಇದರಿಂದ ಅವರ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿತ್ತು. ಸದ್ಯ ರಮ್ಯಾ ಅವರು ಜಿನೆವಾದಲ್ಲಿ ಆರೋಗ್ಯವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಕುರಿತು ರಮ್ಯಾ ಆಪ್ತೆ ಚಿತ್ರಾ ಸುಬ್ರಹ್ಮಣ್ಯ ಅವರು ಟ್ವೀಟ್‌ನಲ್ಲಿ ಅವರೊಂದಿಗಿನ ಫೋಟೋ ಹಂಚಿಕೊಂಡು ಇಬ್ಬರು ಜೊತೆಯಾಗಿ ರಾತ್ರಿ ಊಟ ಮಾಡಿದ್ದಾಗಿ ತಿಳಿಸಿದ್ದಾರೆ. ಸದ್ಯ ರಮ್ಯಾ ಜಿನೇವಾದಲ್ಲಿ ಕ್ಷೇಮವಾಗಿದ್ದು, ಇದೇ ವಾರ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಎಂದು ತಿಳಿಸಿದ್ದಾರೆ.





