ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಘಟಕದ ನಿಯೋಗವು ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ(ಕೆಎಂಡಿಸಿ) ಮೂಲಕ ನವೋದ್ಯಮಗಳನ್ನು ಉತ್ತೇಜಿಸಲು 2025-26ನೇ ಸಾಲಿನ ಬಜೆಟ್ ವೇಳೆಯಲ್ಲಿ ಮೀಸಲಿಡಲಾದ ‘ಎಲಿವೇಟ್ ಮೈನಾರಿಟೀಸ್-2025’ಯೋಜನೆಯ ಅನುದಾನವನ್ನು ಹೆಚ್ಚಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿತ್ತು.
ಈ ಮನವಿಯನ್ನು ಪುರಸ್ಕರಿಸಿರುವ ರಾಜ್ಯ ಸರ್ಕಾರವು ಯೋಜನೆಗೆ 5 ಕೋಟಿ ಹೆಚ್ಚುವರಿ ಅನುದಾನ ಮಂಜೂರು ಮಾಡಿ, ಆದೇಶ ಹೊರಡಿಸಿದೆ.
ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಕೆಎಂಡಿಸಿ)ದ ವತಿಯಿಂದ ನವೋದ್ಯಮ ಕಂಪನಿಗಳಿಗೆ ಉತ್ತೇಜನ ನೀಡಲು 2025-26ನೇ ಸಾಲಿನ ಆಯವ್ಯಯದಲ್ಲಿ ‘ಎಲಿವೇಟ್ ಮೈನಾರಿಟೀಸ್-2025’ ಯೋಜನೆಯಡಿಯಲ್ಲಿ ಈ ಹಿಂದೆ 5 ಕೋಟಿ ಹಣವನ್ನು ಮೀಸಲಿಟ್ಟಿತ್ತು. ಆದರೆ, ಈ ಯೋಜನೆಯಡಿಯಲ್ಲಿ ಹೆಚ್ಚಿನ ಅರ್ಜಿಗಳು ಸ್ವೀಕೃತವಾಗಿದ್ದು, ಸರ್ಕಾರದಿಂದ ಹಂಚಿಕೆಯಾಗಿರುವ ಅನುದಾನ ಕಡಿಮೆಯಾಗಿದೆ. ಹಾಗಾಗಿ, ಹೆಚ್ಚುವರಿಯಾಗಿ ರೂ.5 ಕೋಟಿಗಳ ಅನುದಾನವನ್ನು ಹೆಚ್ಚಿಸುವಂತೆ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕವು ಮನವಿ ಮಾಡಿತ್ತು.
ಈ ಆಗ್ರಹದ ಭಾಗವಾಗಿ ಸಚಿವರಾದ ಜಮೀರ್ ಅಹ್ಮದ್ ಖಾನ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಿವಾಜಿ ನಗರ ಕ್ಷೇತ್ರದ ಶಾಸಕ ರಿಝ್ವಾನ್ ಅರ್ಶದ್, ಸಚಿವ ರಹೀಂ ಖಾನ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಮೆಹರೋಝ್ ಖಾನ್, ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಬಾನು, ಶಾಸಕರಾದ ಎನ್ ಎ ಹ್ಯಾರಿಸ್, ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್ ಸೇರಿದಂತೆ ಹಲವು ರಾಜಕೀಯ ಮುಖಂಡರನ್ನು ಸೋಲಿಡಾರಿಟಿ ಯೂತ್ ಮೂವೆಂಟ್ ನಿಯೋಗವು ಭೇಟಿ ಮಾಡಿ, ಈ ಬಗ್ಗೆ ಸರ್ಕಾರದ ಗಮನ ಸೆಳೆಯುವಂತೆ ಒತ್ತಾಯಿಸಿತ್ತು.

ಈ ಮನವಿಯನ್ನು ಪುರಸ್ಕರಿಸಿರುವ ರಾಜ್ಯ ಸರ್ಕಾರವು ಯೋಜನೆಗೆ 5 ಕೋಟಿ ಹೆಚ್ಚುವರಿ ಅನುದಾನ ಮಂಜೂರು ಮಾಡಿ, ಆದೇಶ ಹೊರಡಿಸಿದೆ.
ಈ ಬಗ್ಗೆ ಮುಸ್ಲಿಂ ಸಮುದಾಯದ ಎಲ್ಲ ರಾಜಕೀಯ ಮುಖಂಡರಿಗೆ ಧನ್ಯವಾದ ಸಲ್ಲಿಸಿರುವ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ನಸೀಮ್ ಅಹ್ಮದ್, “ಎಲಿವೇಟ್ ಮೈನಾರಿಟೀಸ್-2025’ ಯೋಜನೆಗಾಗಿ ಸರ್ಕಾರವು 5 ಕೋಟಿ ನೀಡಿತ್ತು. ಆದರೆ, ಹೆಚ್ಚು ಅರ್ಜಿಗಳು ಬಂದಿದ್ದವು. ಈ ಬಗ್ಗೆ ಸೋಲಿಡಾರಿಟಿಗೂ ಮಾಹಿತಿ ತಿಳಿದ ತಕ್ಷಣ ಸಚಿವರು ಸೇರಿದಂತೆ ಮುಸ್ಲಿಂ ಸಮುದಾಯದ ಎಲ್ಲ ರಾಜಕೀಯ ಮುಖಂಡರನ್ನು ಭೇಟಿ ಮಾಡಿ ಒತ್ತಾಯಿದ್ದೆವು. ಈ ಮನವಿಯನ್ನು ರಾಜ್ಯ ಸರ್ಕಾರವು ಪುರಸ್ಕರಿಸಿ, 5 ಕೋಟಿ ಹೆಚ್ಚುವರಿ ಅನುದಾನ ಒದಗಿಸಿದೆ. ಸಹಕಾರ ನೀಡಿದ ಎಲ್ಲ ಮುಖಂಡರಿಗೆ ಧನ್ಯವಾದ ಸಲ್ಲಿಸುತ್ತೇವೆ” ಎಂದು ತಿಳಿಸಿದ್ದಾರೆ.

“ಹೆಚ್ಚುವರಿ ಅನುದಾನದಿಂದ ಅಲ್ಪಸಂಖ್ಯಾತ ಸಮುದಾಯದ ಹೊಸ ಉದ್ಯಮಗಳು ಬೆಳೆದು, ರಾಜ್ಯದಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುವ ಸಾಧ್ಯತೆಯಿದೆ. ಇದರ ಫಲಶೃತಿಯಾಗಿ ರಾಜ್ಯದಲ್ಲೂ ಹೆಚ್ಚು ಅಭಿವೃದ್ಧಿಯಾಗುವ ನಿರೀಕ್ಷೆ ಇದೆ. ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಯ ಜೊತೆಗೆ ರಾಜ್ಯದ ಯುವಕ-ಯುವತಿಯರ ನವೋದ್ಯಮಗಳನ್ನು ಉತ್ತೇಜಿಸಲು ಇನ್ನಷ್ಟು ಪೂರಕವಾಗಲಿದೆ” ಎಂದು ಸೋಲಿಡಾರಿಟಿ ಯೂತ್ ಮೂವೆಂಟ್ ರಾಜ್ಯಾಧ್ಯಕ್ಷರಾದ ಡಾ. ನಸೀಮ್ ಅಹ್ಮದ್ ತಿಳಿಸಿದ್ದಾರೆ.







