ಆರ್ಎಸ್ಎಸ್ ಮುಖಂಡ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇಲೆ ಬಂಧನ ಭೀತಿಗೊಳಗಾಗಿದ್ದ ಯುವಕನೋರ್ವನಿಗೆ ಕರ್ನಾಟಕ ಹೈಕೋರ್ಟ್ ಸೋಮವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಅವಹೇಳನಕಾರಿ ಮತ್ತು ಅಶ್ಲೀಲ ಹೇಳಿಕೆ ನೀಡಿದ್ದಾರೆಂದು ಶಾರೂಕ್ ಕೊಪ್ಪಳ ಎನ್ನುವವರ ವಿರುದ್ಧ ಬಂಟ್ವಾಳ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಲ್ಲಡ್ಕ ಶ್ರೀರಾಮ ಶಾಲೆಯ ಸಿಬ್ಬಂದಿ ಸೀತಾರಾಮ ಆಚಾರ್ಯ ಅವರ ಮಗ ಕೃಷ್ಣಪ್ಪ ಅನ್ನುವವರು ಕೊಟ್ಟ ದೂರಿನ ಅನ್ವಯ ಬಂಟ್ವಾಳ ಟೌನ್ ಪೊಲೀಸ್ ಠಾಣೆ ಪೊಲೀಸರು ಎಫ್ಐಆರ್ ಮಾಡಿ ಕ್ರೈಂ ನಂಬರ್ 129/2025 ರಂತೆ ಪೊಲೀಸರು ಕೇಸು ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಆರೋಪಿತರು ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಜಿಲ್ಲಾ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿತ್ತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಟ್ರಂಪ್ ವಿರುದ್ಧ ಇನ್ನಾದರೂ ಎದೆ ಸೆಟೆಸುವರೇ ಮೋದಿ?
ಜಿಲ್ಲಾ ನ್ಯಾಯಾಲಯದಲ್ಲಿ ವಜಾಗೊಂಡ ಮೇಲೆ ಆರೋಪಿ ಯುವಕ ಕರ್ನಾಟಕ ಹೈಕೋರ್ಟಿಗೆ ಎರಡನೇ ಅರ್ಜಿ ಮುಖಾಂತರ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಕರ್ನಾಟಕ ಹೈಕೋರ್ಟ್ ಈ ಪ್ರಕರಣದಲ್ಲಿ ಶಾರೂಕ್ ಕೊಪ್ಪಳ ಅವರಿಗೆ ಷರತ್ತುಬದ್ದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ಹೈಕೋರ್ಟ್ ನ್ಯಾಯವಾದಿ ರಾಶಿಫ್ ನಾಯರ್ಮೂಲೆ ವಾದ ಮಂಡಿಸಿದ್ದರು.





