ಬಸವಣ್ಣನವರನ್ನು ಪೂಜಿಸುವ ಎಲ್ಲರೂ ಲಿಂಗಾಯತರೇ ಆಗಿದ್ದು, ಇದೇ ತಿಂಗಳಿನಲ್ಲಿ ನಡೆಯಲಿರುವ ಗಣತಿ ಕಾರ್ಯದಲ್ಲಿ ಎಲ್ಲರೂ ಧರ್ಮದ ಕಲಂನ ಇತರೆ ಧರ್ಮ ಎನ್ನುವ ಸ್ಥಳದಲ್ಲಿ ‘ಲಿಂಗಾಯತ’ ಎಂದು ಬರೆಯಿಸಿ, ಜಾತಿ-ಉಪಜಾತಿ ಕಲಂಗಳಲ್ಲಿ ತಮ್ಮ ತಮ್ಮ ಕುಲಕಸುಬಿನ ಜಾತಿಗಳನ್ನು ಬರೆಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಬಸವರಾಜ ಬುಳ್ಳ ತಿಳಿಸಿದ್ದಾರೆ.
ಬುಧವಾರ ಬೆಂಗಳೂರು ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಪ್ರಥಮ ಜನಗಣತಿ 1871ರಲ್ಲಿ ನಡೆಯಿತು. ಅಂದು ಬ್ರಿಟಿಷ ಸರಕಾರ ಅಧಿಕಾರದಲ್ಲಿತ್ತು. ಆಗಲೂ ಲಿಂಗಾಯತ ಒಂದು ಧರ್ಮ ಎಂದು ಗುರುತಿಸಿದೆ. ಆದರೆ ಮುಂಬರುವ ದಿನದಲ್ಲಿ ಮೈಸೂರ ರಾಜ್ಯದ ದಿವಾನರು ಲಿಂಗಾಯತ ಧರ್ಮವನ್ನು ಮರೆಮಾಚಿದ್ದಾರೆ ಎಂದರು.
ಈ ಹಿಂದೆ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭೆ ಸಮಾಜದ ಸಚಿವ, ಶಾಸಕರ ಹಾಗೂ ಗಣ್ಯರ ಸಭೆ ನಡೆಸಿ ಧರ್ಮದ ಕಲಂ ನಲ್ಲಿ ‘ವೀರಶೈವ ಲಿಂಗಾಯತ’ ಅಥವಾ ‘ಲಿಂಗಾಯತ’ ಯಾವುದನ್ನಾದರೂ ಬರೆಸಬಹುದೆಂದು ಒಮ್ಮತದಿಂದ ತೀರ್ಮಾನ ಮಾಡಿದ್ದರು. ಆದರೆ ಇದೀಗ ಮಹಾಸಭಾ ವತಿಯಿಂದ ಹೇಳಿಕೆ ನೀಡಿ, ‘ವೀರಶೈವ ಲಿಂಗಾಯತ’ ಧರ್ಮ ಎಂದು ಬರೆಸಬೇಕೆಂದು ಹೇಳಿದ್ದಾರೆ. ಇದು ಲಿಂಗಾಯತರಿಗೆ ಮಾಡುತ್ತಿರುವ ದ್ರೋಹ ಮತ್ತು ಈ ದ್ವಂದ್ವ ನಿಲುವಿನಿಂದ ಸಮಾಜದಲ್ಲಿ ಗೊಂದಲ ಮೂಡಿಸುತ್ತಿದೆ. ಈ ಗೊಂದಲಕ್ಕೆ ವೀರಶೈವ ಮಹಾಸಭಾ ಕಾರಣವಾಗಿದೆ ಎಂದು ಅವರು ದೂರಿದರು.
ಇದನ್ನು ಓದಿದ್ದೀರಾ? ಧರ್ಮಸ್ಥಳ | ಬಂಗ್ಲೆಗುಡ್ಡೆಯಲ್ಲಿ ರಾಶಿ ರಾಶಿ ಮೂಳೆ ಪತ್ತೆ: ವ್ಯಾಪಕ ಶೋಧಕ್ಕೆ ಮುಂದಾದ ಎಸ್‌ಐಟಿ
ಲಿಂಗಾಯತರು ಯಾವುದೇ ಗೊಂದಲಕ್ಕೆ ಒಳಗಾಗದೇ, ಸರಕಾರ ನಡೆಸಲಿರುವ ಗಣತಿ ಕಾರ್ಯಕ್ರಮದಲ್ಲಿ ಧರ್ಮದ ಕಾಲಂನಲ್ಲಿ ಇತರೆ ಧರ್ಮವೆನ್ನುವ ಸ್ಥಳದಲ್ಲಿ ‘ಲಿಂಗಾಯತ’ ಎಂದು ಬರೆಸಬೇಕು ಎಂದು ಕರೆ ಬಸವರಾಜ್ ಬುಳ್ಳ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷರಾದ ಮಹದೇವಪ್ಪ, ಸಂಜೀವ್ ಕಡಗದ, ವೀರಭದ್ರಪ್ಪ, ನಿಜಗುಣ ಮೂರ್ತಿ ಉಪಸ್ಥಿತರಿದ್ದರು.





