ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ‘ಮಹಾಸತಿ’ ಗಿಲ್ನೆಟ್ ದೋಣಿಯೊಂದು ಸಮುದ್ರದಲ್ಲಿ ಭಾರೀ ಅಲೆಗಳಿಗೆ ಸಿಲುಕಿ ಮುಳುಗಿದ ಪರಿಣಾಮ ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದು, ಇಬ್ಬರನ್ನು ರಕ್ಷಿಸಲಾಗಿದೆ.
ಘಟನೆ ಬುಧವಾರ ಸಂಜೆಯ ವೇಳೆಗೆ ನಡೆದಿದ್ದು, ನಾಪತ್ತೆಯಾಗಿರುವವರ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಲಾಗಿದೆ.
ದೋಣಿಯಲ್ಲಿದ್ದ ಆರು ಮಂದಿ ಮೀನುಗಾರರ ಪೈಕಿ ದೋಣಿ ಮಾಲೀಕ ಮನೋಹರ ಈರಯ್ಯ ಮೊಗೇರ (40) ಮತ್ತು ರಾಮ ಮಾಸ್ತಿ ಖಾರ್ವಿ (43) ಅವರನ್ನು ರಕ್ಷಿಸಿ, ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.

ಆದರೆ, ರಾಮಕೃಷ್ಣ ಮಂಜು ಮೊಗೇರ (40), ಸತೀಶ್ ತಿಮ್ಮಪ್ಪ ಮೊಗೇರ (26), ಗಣೇಶ್ ಮಂಜುನಾಥ ಮೊಗೇರ (27) ಮತ್ತು ನಿಶ್ಚಿತ ಮೊಗೇರ (30) ಎಂಬ ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದಾರೆ.

ಘಟನೆ ನಡೆದ ಕೂಡಲೇ ಕರಾವಳಿ ರಕ್ಷಣಾ ಪಡೆಯ ಪಿಎಸ್ಐ ವೀಣಾ ಚಿತ್ರಪುರ ನೇತೃತ್ವದ ತಂಡ ರಕ್ಷಣಾ ಕಾರ್ಯಾಚರಣೆ ಕೈಗೊಂಡಿತು. ನಾಪತ್ತೆಯಾದವರ ಪತ್ತೆಗಾಗಿ ಕರಾವಳಿ ಕಾವಲುಪಡೆ ಸಿಬ್ಬಂದಿಗಳು, ಸ್ಥಳೀಯ ಮೀನುಗಾರರು ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಸಮುದ್ರದಲ್ಲಿ ತೀವ್ರ ಶೋಧಕಾರ್ಯವನ್ನು ಮುಂದುವರಿಸಿದ್ದಾರೆ. ಈ ದುರ್ಘಟನೆಯಿಂದಾಗಿ ಸ್ಥಳೀಯ ಮೀನುಗಾರ ಸಮುದಾಯದಲ್ಲಿ ತೀವ್ರ ಆತಂಕ ಮನೆಮಾಡಿದೆ.
ಸ್ಥಳಕ್ಕೆ ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಭೇಟಿ
ಘಟನಾ ಸ್ಥಳಕ್ಕೆ ಗುರುವಾರ ಬೆಳಗ್ಗೆ ಭೇಟಿ ನೀಡಿರುವ ಮೀನುಗಾರಿಕಾ ಸಚಿವ ಮಂಕಾಳ್ ಎಸ್ ವೈದ್ಯ, ನಾಲ್ಕು ಜನ ಮೀನುಗಾರರು ನಾಪತ್ತೆಯಾಗಿದ್ದು, ಇಬ್ಬರು ಪ್ರಾಣಪಾಯದಿಂದ ಪಾರಾಗಿರುತ್ತಾರೆ. ನಾಪತ್ತೆಯಾದ ಮೀನುಗಾರರ ಹುಡುಕಾಟ ನಡೆಯುತ್ತಿದೆ. ಪ್ರಾಣಪಾಯದಿಂದ ಪಾರಾದ ಮೀನುಗಾರರ ಸೂಕ್ತ ಚಿಕಿತ್ಸೆ ನೀಡಲಾಗಿದೆ. ನಾಪತ್ತೆಯಾದ ನಾಲ್ಕು ಜನ ಮೀನುಗಾರರು ಯಾವುದೇ ತೊಂದರೆಯಾಗದಂತೆ ಸುರಕ್ಷಿತವಾಗಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.





