“ಪ್ರಧಾನಿ ನರೇಂದ್ರ ಮೋದಿ ನಾಟಕ ಆಡುವುದರಲ್ಲಿ ನಿಸ್ಸೀಮರು. ಮಾಧ್ಯಮಗಳ ಮೂಲಕ ಸುಳ್ಳು ಪ್ರಚಾರ ಮಾಡುವುದರಲ್ಲೂ ಬಿಜೆಪಿಗರು ಎತ್ತಿದ ಕೈ” ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಸಿ ವಿ ಲೋಕೇಶ್ ಗೌಡ ವಾಗ್ದಾಳಿ ನಡೆಸಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೇಂದ್ರ ಸರಕಾರ ಕಿವುಡುತನ ಪ್ರದರ್ಶನ ಮಾಡುತ್ತಿದೆ. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ರೈತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ, ರೈತರ ಹೋರಾಟ ಹಿಂಪಡೆಯುವಂತೆ ಮನವಿ ಮಾಡಿದ್ದರು. ಆನಂತರ ಯಾವುದೇ ಭರವಸೆಗಳನ್ನು ಈಡೇರಿಸಲಿಲ್ಲ. ಈ ರೀತಿ ರೈತರನ್ನ ನಂಬಿಸಿ, ನಂಬಿಕೆ ದ್ರೋಹ ಬಗೆದಿದ್ದಾರೆ” ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.
“ದೆಹಲಿಯಲ್ಲಿ ನಡೆದ ರೈತರ ಹೋರಾಟದಲ್ಲಿ ಹಲವು ಮಂದಿ ಸಾವನ್ನಪ್ಪಿದ್ದರೆ, ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ. ಕೆಲವರು ಕಣ್ಣು ಕಳೆದುಕೊಂಡರು. ಹೀಗೆ ಪೆಟ್ಟು ತಿಂದು ಬೀದಿಗಿಳಿದ ರೈತರಿಗೆ ಕೇಂದ್ರ ಸರಕಾರ ಅನ್ಯಾಯ ಮಾಡಿದೆ. ಈ ಬಾರಿ ದೇಶದ ಸುಮಾರು 90 ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿಗೆ ರೈತ ಸಂಘಟನೆಗಳು ಪ್ರಮುಖ ಕಾರಣ” ಎಂದು ಹೇಳಿದರು.
“ಎಂ.ಎಸ್.ಪಿ ಜಾರಿಗೆ ತಂದಿದ್ದೇವೆ ಎಂದು ಹೇಳುತ್ತಾರೆ. ಆದರೆ ಯಾವ ರೀತಿ ಜಾರಿಗೆ ಬಂದಿದೆ ಎಂದು ಪ್ರಧಾನಿ ಮೋದಿ ವಿವರಣೆ ನೀಡಲಿ. ಕಾರ್ಪೊರೇಟ್ ಕಂಪೆನಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಶ್ವ ವ್ಯಾಪಾರ ಒಪ್ಪಂದಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಈ ಒಪ್ಪಂದವನ್ನು ಕೈಬಿಡಬೇಕು” ಎಂದು ಸಿ.ವಿ.ಲೋಕೇಶ್ ಗೌಡ ಆಗ್ರಹಿಸಿದರು.
ಮೊಸಳೆ ಕಣ್ಣೀರಿನ ಪ್ರಣಾಳಿಕೆ
ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವ ನಿಟ್ಟಿನಲ್ಲಿ ರೈತರ ಪರ ಧ್ವನಿ ಎತ್ತಲು ಆಯಾ ಭಾಗದ ಸಂಸದರಿಗೆ ಮನವಿ ಮಾಡಲಾಗಿದೆ. ಕೇಂದ್ರ ಸರಕಾರ ತಮ್ಮ ಪ್ರಣಾಳಿಕೆಯಲ್ಲಿ ಹಾಕಿರುವ ಮೊಸಳೆ ಕಣ್ಣೀರಿನ ಭರವಸೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಖಂಡಿತ ಎಂದು ಎಚ್ಚರಿಕೆ ನೀಡಿದರು.
ಕೃಷಿ ಕ್ಷೇತ್ರ, ರೈತ ಸಂಘಟನೆಗಳು, ಹೋರಾಟಗಳು ದುರ್ಬಲವಾಗುತ್ತಿರುವ ಸಂದರ್ಭದಲ್ಲಿ ರೈತ ಸಂಘಟನೆಗಳು ಸಮಾನ ಸೂತ್ರದ ನೀತಿಯನ್ನು ಅನುಸರಿಸಬೇಕು. ಎಲ್ಲರೂ ಒಗ್ಗಟ್ಟಾಗಿ ಹೋರಾಟ ರೂಪಿಸಿದರೆ ರೈತರಿಗೆ ನ್ಯಾಯ ಸಿಕ್ಕೆ ಸಿಗುತ್ತದೆ. ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಲ್ಲಿ ಜುಲೈ 21 ರಂದು ರೈತ ಹುತಾತ್ಮರ ದಿನಾಚರಣೆ ಅಂಗವಾಗಿ ರೈತ ಸಮಾವೇಶವನ್ನು ಆಯೋಜಿಸಲಾಗಿದೆ. ಇದಕ್ಕೆ ರೈತ ಸಂಘಟನೆಗಳ ಬೆಂಬಲ ಅತ್ಯಗತ್ಯ ಎಂದರು.
ಬೆಳೆ ವಿಮೆ ನೀತಿ ಜಾರಿಗೊಳಿಸಬೇಕು, ರಸಗೊಬ್ಬರ, ಕೀಟನಾಶಕಗಳ ಮೇಲಿನ ಜಿ.ಎಸ್.ಟಿ ರದ್ದುಗೊಳಿಸಬೇಕು, ಕೃಷಿ ಸಾಲ ಮನ್ನಾ ಸೇರಿದಂತೆ ಹತ್ತಲವು ಬೇಡಿಕೆಗಳನ್ನಿಟ್ಟು ಜುಲೈ 22 ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
“ಕೋಲಾರ ಸಂಸದ ಮಲ್ಲೇಶ್ ಬಾಬು ಅವರಿಗೂ ಮನವಿ ಪತ್ರ ಕೊಟ್ಟಿದ್ದೇವೆ. ನಾವು ಎನ್.ಡಿ.ಎ ಮೈತ್ರಿ ಕೂಟದಲ್ಲಿದ್ದೇವೆ, ನಾವು ಹೇಗೆ ಬೆಂಬಲ ಸೂಚಿಸಲಿ?, ನೀವು ಹೋರಾಟ ಮಾಡಿ” ಎಂದು ಅಸಹಾಯಕತೆ ತೋರಿದರು ಎಂದು ಸಿ.ವಿ.ಲೋಕೇಶ್ ಗೌಡ ಹೇಳಿಕೆ ನೀಡಿದರು.
ನಾರಾಯಣ ರೆಡ್ಡಿ ಬಣದ ರೈತ ಸಂಘ ಜಿಲ್ಲಾಧ್ಯಕ್ಷ ಗೋವಿಂದರೆಡ್ಡಿ ಮಾತನಾಡಿ, “ನೀರಿನ ಸಮಸ್ಯೆ ನಡುವೆ ರೈತರು ಬೆಳೆಯುವ ಬೆಳೆಗಳಿಗೆ ರೋಗಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಸೂಕ್ತ ಸಲಹೆ ಕೊಡುವ ನಿಟ್ಟಿನಲ್ಲಿ ಇಲಾಖೆಗಳಲ್ಲಿ ಯೋಗ್ಯ ಅಧಿಕಾರಿಗಳು ಇಲ್ಲ. ಇದರಿಂದ ಹೆಚ್ಚು ರೈತರು ನಷ್ಟ ಅನುಭವಿಸುತ್ತಿದ್ದಾರೆ. ಈ ಕುರಿತು ಸರಕಾರ ಗಮನಹರಿಸಬೇಕು” ಎಂದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಖಜಾಂಚಿ ಕೃಷ್ಣಪ್ಪ, ಬಾಗೇಪಲ್ಲಿ ತಾಲೂಕು ಅಧ್ಯಕ್ಷ ವೆಂಕಟ ಶಿವಾರೆಡ್ಡಿ, ರೈತ ಮುಖಂಡರಾದ ಈಶ್ವರಪ್ಪ, ಅಶ್ವತ್ಥ್, ವೆಂಕಟರಾಮ್ ಮತ್ತಿತರರು ಇದ್ದರು.





