ಅಹಿಂದ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರೋತ್ಸಾಹ ಧನ ಯೋಜನೆಯಲ್ಲಿ ಕತ್ತರಿ ಪ್ರಯೋಗ ಮಾಡಿರುವ ರಾಜ್ಯ ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿಯನ್ನು ಭಾರತ ವಿದ್ಯಾರ್ಥಿ ಫೆಡರೇಷನ್ ಖಂಡಿಸಿ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು. ಆ ಬಳಿಕ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಎಸ್ಎಫ್ಐ ರಾಜ್ಯ ಪದಾಧಿಕಾರಿ ಗಣೇಶ ರಾಠೋಡ ಮಾತನಾಡಿ, “ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ವಿದ್ಯಾರ್ಥಿಗಳಿಗೆ ಎಸೆಸೆಲ್ಸಿಯಲ್ಲಿ ಶೇಕಡಾ 60 ರಿಂದ 74.99 ಫಲಿತಾಂಶದೊಂದಿಗೆ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ 7000 ಪ್ರೋತ್ಸಾಹ ಧನವನ್ನು ಈ ಶೈಕ್ಷಣಿಕ ವರ್ಷದಲ್ಲಿ ರದ್ದು ಮಾಡಿದ್ದಾರೆ” ಎಂದು ಆಕ್ರೋಶ ಹೊರಹಾಕಿದರು.
“ಎಸ್ಸಿಪಿ-ಟಿಎಸ್ಪಿ ಯೋಜನೆಗಾಗಿ ಸಾವಿರಾರು ಕೋಟಿ ರೂಪಾಯಿ ಹಣ ಖರ್ಚು ಮಾಡುತ್ತಿದ್ದೇವೆ ಎಂದು ಹೇಳುತ್ತಿರುವ ಮುಖ್ಯಮಂತ್ರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರು, ಶೋಷಿತ ಸಮುದಾಯಗಳ ಮಕ್ಕಳ ಶಿಕ್ಷಣಕ್ಕೆ ಉತ್ತೇಜಿಸಲು ಯೋಜನೆಗಳನ್ನು ರೂಪಿಸಬೇಕೆ ವಿನಃ ಆ ಯೋಜನೆಗಳಿಗೆ ಕತ್ತರಿ ಪ್ರಯೋಗ ಮಾಡುವುದಲ್ಲ. ಪರಿಷ್ಕೃತ ಆದೇಶದಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಏನು ಹೇಳಲು ಬಯಸುತ್ತೀರಿ” ಎಂದು ಪ್ರಶ್ನಿಸಿದರು.
ನಂತರ ಮಾತನಾಡಿದ ಎಸ್ಎಫ್ಐನ ಜಿಲ್ಲಾ ಮುಖಂಡ ಚಂದ್ರು ರಾಠೋಡ್ , “ಸರಕಾರವು ಈ ಶೈಕ್ಷಣಿಕ ವರ್ಷದಲ್ಲಿ ಶುಲ್ಕ ಮರುಪಾವತಿ ವಿಷಯಕ್ಕೆ ಪರಿಷ್ಕೃತ ಆದೇಶವನ್ನು ಹೊರಡಿಸಿ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಮಾತ್ರ ಶುಲ್ಕ ಮರುಪಾವತಿಗೆ ಅರ್ಹತೆ ಹೊಂದಿದ್ದಾರೆ ಎಂದಿದೆ. ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿಗೆ ಅರ್ಹತೆ ಹೊಂದಿಲ್ಲ, ಅವರಿಗೆ ಶುಲ್ಕ ಮರುಪಾವತಿ ಕೊಡವುದಿಲ್ಲ ಎಂದು ಹೇಳುತ್ತಿದ್ದಾರೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು, ಹಿಂದುಳಿದ ವರ್ಗಗಳ ಸಮುದಾಯದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಯಾವಾಗ ಸರಿಪಡಿಸುತ್ತೀರಿ? ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಎಸ್ಎಫ್ಐನ ತಾಲೂಕು ಮುಖಂಡರಾದ ಅನಿಲ ರಾಠೋಡ್ ಮಾತನಾಡಿ, “ಅಲ್ಪಸಂಖ್ಯಾತ ಸಮುದಾಯದ ಪಿಎಚ್ಡಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಇದ್ದ ಪ್ರೋತ್ಸಾಹ ಧನವನ್ನು 25 ಸಾವಿರ ರೂಪಾಯಿಯಿಂದ 10 ಸಾವಿರ ರೂಪಾಯಿ ಮಾಡಿ ಈ ಹಿಂದಿನ ಬಿಜೆಪಿ ಸರಕಾರ ಕಡಿತ ಮಾಡಿತ್ತು. ಅದನ್ನು ಸರಿಪಡಿಸಿ ಎಂದು ಒಂದು ವರ್ಷದಿಂದ ಸಚಿವರಿಗೆ ಮನವಿ ಪತ್ರ ಕೊಡುತ್ತಾ ಬಂದಿದ್ದರೂ, ಯಾಕೆ ಸರಿಪಡಿಸುತ್ತಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ತಿರುಪತಿ, ಅಂದಪ್ಪ ಕುರಿ, ಮೈಬು ಹವಾಲ್ದಾರ್, ಬಸು, ಕನಕಪ್ಪ ಮತ್ತು ಇತರರು ಹಾಜರಿದ್ದರು.





