ಸಂಬಳ ಸಿಗದಿದ್ದಕ್ಕೆ ಬೇಸರಗೊಂಡ ಗ್ರಂಥಾಲಯ ಮೇಲ್ವಿಚಾರಕಿಯೋರ್ವರು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ಭಾಗ್ಯಶ್ರಿ (45) ಎಂದು ಗುರುತಿಸಲಾಗಿದ್ದು, ಅವರು ಮಳಖೇಡ ಸರ್ಕಾರಿ ಗ್ರಂಥಾಲಯದಲ್ಲಿ ಮೇಲ್ವಿಚಾರಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಗ್ರಾಮ ಪಂಚಾಯಿತಿ ಸದಸ್ಯ ಪಾಂಡುಸಿಂಗ್ ಚವ್ಹಾಣ್ ಅವರ ಹೇಳಿಕೆಯ ಪ್ರಕಾರ, ಭಾಗ್ಯಶ್ರಿಗೆ ಕಳೆದ ಏಳು ತಿಂಗಳಿಂದ ಸಂಬಳ ಸಿಗದೆ ಇದ್ದ ಕಾರಣ ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ ಡೆತ್ ನೋಟು ಬರೆದು ಗ್ರಂಥಾಲಯದ ಕೋಣೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದರು.
ಘಟನೆಯ ನಂತರ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು “ಸೇಡಂ ಶಾಸಕ ಡಾ. ಶರಣಪ್ರಕಾಶ ಪಾಟೀಲ್ ಸ್ಥಳಕ್ಕೆ ಬರುವವರೆಗೂ ಮೃತದೇಹವನ್ನು ಹೊರತೆಗೆಯುವುದಿಲ್ಲ” ಎಂದು ಪಟ್ಟು ಹಿಡಿದು ಗ್ರಂಥಾಲಯದ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಮಳಖೇಡದ ಪ್ರಮುಖ ರಸ್ತೆಯನ್ನು ತಡೆದ ಗ್ರಾಮಸ್ಥರು ನ್ಯಾಯಕ್ಕಾಗಿ ಆಗ್ರಹಿಸಿ, ಧರಣಿ ಕೂತಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸೇಡಂ ಪಿಎಸ್ಐ ಕುಪೇಂದ್ರ, ಡಿಎಸ್ಪಿ ಮಠಪತಿ, ಹಾಗೂ ಮಳಖೇಡ ಠಾಣೆಯ ಪಿಎಸ್ಐ ಸಂಗಮೇಶ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಈದಿನ.ಕಾಮ್ ಮಳಖೇಡ ಪಿಎಸ್ಐ ಸಂಗಮೇಶ ಅವರನ್ನು ಸಂಪರ್ಕಿಸಿದಾಗ, “ ನಾನು ಘಟನಾ ಸ್ಥಳದಲ್ಲಿರುವೆ ಸ್ವಲ್ಪ ಸಮಯದ ಬಳಿಕ ಮಾತನಾಡುತ್ತೇನೆ” ಎಂದು ಪ್ರತಿಕ್ರಿಯಿಸಿದರು.





