ಮದುವೆಯಾಗಲು ತಯಾರಿದ್ದರೂ ಹೆಣ್ಣು ಸಿಗದೆ ಹತಾಶೆಗೊಳಗಾದ ಯುವಕರು, ‘ನಮಗೆ ಗ್ರಾಮದಲ್ಲಿ ಮಠ ಕಟ್ಟಿಸಿಕೊಡಿ’ ಎಂದು ಬೇಡಿಕೆ ಇಟ್ಟಿರುವ ಪ್ರಸಂಗ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಮದ್ದೂರು ತಾಲೂಕಿನ ಮರಳಿಗ ಗ್ರಾಮದ ಅವಿವಾಹಿತ ಯುವಕರು ತಮ್ಮ ಗ್ರಾಮ ಪಂಚಾಯತ್‌ಗೆ ಈ ವಿಚಿತ್ರ ಅರ್ಜಿ ಸಲ್ಲಿಸಿದ್ದು, ಗ್ರಾಮದ 30ರಿಂದ 40 ವರ್ಷ ವಯಸ್ಸಿನ ಯುವಕರು ಈ ಮನವಿಗೆ ಸಹಿ ಹಾಕಿದ್ದಾರೆ.
ಪ್ರಸನ್ನ ಎಂಬ ಯುವಕನ ನೇತೃತ್ವದಲ್ಲಿ ಪಂಚಾಯ್ತಿಗೆ ಅರ್ಜಿ ಬರೆದು ಸಲ್ಲಿಸಿದ್ದಾರೆ. ಅವಿವಾಹಿತ ಯುವಕರ ಈ ವಿಚಿತ್ರ ಅರ್ಜಿ ಕಂಡು ಒಂದು ಕ್ಷಣದ ಸದಸ್ಯರು ಹಾಗೂ ಅಧಿಕಾರಿ ಒಮ್ಮೆ ಶಾಕ್ ಆಗಿದ್ದಾರೆ.
ಯುವಕರು ಸಲ್ಲಿಸಿರುವ ಮನವಿಯ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿರುವ ಮರಳಿಗ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನೀತಾ, “ಗ್ರಾಮದ 30ರಿಂದ 40 ವರ್ಷ ವಯಸ್ಸಿನ ಯುವಕರು ತಮಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ಉಲ್ಲೇಖಿಸಿದ್ದು, ಗ್ರಾಮದಲ್ಲಿ ಮಠ ನಿರ್ಮಿಸಿಕೊಡಿ ಎಂದು ಡಿಸೆಂಬರ್ 9ರಂದು ನಡೆದ ಗ್ರಾಮ ಸಭೆಗೆ ಅರ್ಜಿ ಸಲ್ಲಿಸಿದ್ದಾರೆ. ಯುವಕರು ನೀಡಿರುವ ಈ ಮನವಿಯನ್ನು ತಹಶೀಲ್ದಾರ್ ಗಮನಕ್ಕೆ ತರುತ್ತೇವೆ” ಎಂದು ತಿಳಿಸಿದರು.
ತಮ್ಮೂರಿನ ಗಂಡು ಮಕ್ಕಳ ಸ್ಥಿತಿಗೆ ಕಂಗಾಲಾಗಿರೋ ಯುವಕರ ಪೋಷಕರು, ರೈತ ಕುಟುಂಬದ ಗಂಡು ಮಕ್ಕಳಿಗೆ ಹೆಣ್ಣು ಕೊಡದ ಸ್ಥಿತಿಗೆ ಬಂದಿದ್ದಕ್ಕೆ ವಿಷಾದ ಸೂಚಿಸಿದ್ದಾರೆ.





