ಕಾವೇರಿ ಅಚ್ಚುಕಟ್ಟಿನ ಕೊನೆಯ ಭಾಗಕ್ಕೆ ನೀರು ತಲುಪದ್ದರಿಂದ ಆಕ್ರೋಶಗೊಂಡಿರುವ ಮಂಡ್ಯದ ರೈತರು ಕಾವೇರಿ ನೀರಾವರಿ ಇಲಾಖೆಯ ವಿಭಾಗ ಕಚೇರಿಯ ಎದುರು ಧರಣಿ ನಡೆಸಿದರು.
ಜಿಲ್ಲೆಯ ಮಳವಳ್ಳಿ ತಾಲೂಕಿನ ಟಿ.ಕಾಗೇಪುರ ಗ್ರಾಮದ ಕಾವೇರಿ ನೀರಾವರಿ ಇಲಾಖೆಯ ವಿಭಾಗ ಕಚೇರಿಯ ಎದುರು ನೀರು ಬಿಡದ ಅಧಿಕಾರಿಗಳ ಬೇಜವಾವ್ದಾರಿತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು, ಕೂಡಲೇ ನೀರು ಹರಿಸುವಂತೆ ಆಗ್ರಹಿಸಿದರು.
ಧರಣಿ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಎಂ.ವಿ.ಕೃಷ್ಣ, “ಮೇ, ಜೂನ್, ಜುಲೈ ಈ ಮೂರು ತಿಂಗಳು ಬಿತ್ತನೆ ಮಾಡಲು ಒಳ್ಳೆಯ ಕಾಲ. ಈ ಸಮಯದಲ್ಲಿ ಬಿತ್ತಿದರೆ ಒಳ್ಳೆಯ ಇಳುವರಿ ಬರುತ್ತದೆ. ಈಗಾಗಲೇ ಆಗಸ್ಟ್ ಬಂದಿದೆ. ಇನ್ನೂ ಕೊನೆಯ ಭಾಗಕ್ಕೆ ನೀರು ಬಂದಿಲ್ಲ. ಇನ್ಯಾವಾಗ ಹೊಟ್ಲು ಹಾಕೋದು” ಎಂದು ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರು.
“ಈ ಮೂರು ತಿಂಗಳಲ್ಲಿ ಬಿತ್ತಿದರೆ ಒಳ್ಳೆ ಇಳುವರಿ ಬರುತ್ತದೆ. ರೋಗ ಭಾದೆಗೆ ತುತ್ತಾಗುವುದಿಲ್ಲ. ಭತ್ತ ಕೊಯ್ಲಿಗೆ ಬಂದಾಗ ಮಳೆಗೆ ಸಿಗುವುದಿಲ್ಲ. ಸರಿಯಾದ ಹೊತ್ತಿಗೆ ನೀರು ಕೊಟ್ಟಿದ್ದರೆ ಈಗಾಗಲೇ ನಾಟಿ ಮಾಡಬೇಕಾಗಿತ್ತು. ಹಿಂದಿನ ಜನ ಅನುಭವದಿಂದ ಯಾವಾಗ ಬಿತ್ತಬೇಕು, ನಾಟಿ ಮಾಡಬೇಕು ಹಾಗೂ ಕೊಯ್ಲು ಮಾಡಬೇಕು ಅಂತ ಪದ್ಧತಿ ಮಾಡಿದ್ದಾರೆ. ಕಬ್ಬು ಕೂಡ ಈ ಹೊತ್ತಿನಲ್ಲಿ ನೆಟ್ಟರೆ ಹೂ ಬಿಡದೆ ಚೆನ್ನಾಗಿ ಬೆಳೆಯುತ್ತದೆ. ಯಾವುದೇ ಸಸಿಗಳನ್ನು ಈ ಹೊತ್ತಲ್ಲಿ ನೆಟ್ಟರೆ ಒಳ್ಳೆ ಚಿಗುರು ಬಂದು ಚೆನ್ನಾಗಿ ಬೆಳೆಯುತ್ತದೆ” ಎಂದರು.

“ಕೆರೆಗಳ ಸರಪಳಿ ಜಾಲ ಇದೆ. ಒಂದು ಕೆರೆ ತುಂಬಿ, ನಂತರ ಅದರ ಕೋಡಿ ಬಿದ್ದು ಇನ್ನೊಂದು ಕೆರೆ ತುಂಬಬೇಕು. ಹೀಗೆ ತುಂಬಿಸಿದರೆ ಅಂತರ್ಜಲ ಹೆಚ್ಚುತ್ತದೆ. ಇದು ವಿಜ್ಞಾನ. ಅವೈಜ್ಞಾನಿಕವಾಗಿ ನೀರು ಬಿಟ್ಟರೆ ಏನು ಪ್ರಯೋಜನ. ಈ ತಿಳುವಳಿಕೆ ನೀರಾವರಿ ಇಲಾಖೆಯ ಇಂಜಿನಿಯರುಗಳಿಗೆ ಇರಬೇಕು. ಇವರ ಬೇಜವಾಬ್ದಾರಿಯಿಂದ ರೈತರಿಗೆ ಆಗುವ ನಷ್ಟವನ್ನು ಕಟ್ಟಿ ಕೊಡುವವರು ಯಾರು” ಎಂದು ಅಧಿಕಾರಿಗಳನ್ನು ಖಾರವಾಗಿ ತರಾಟೆಗೆ ತೆಗೆದುಕೊಂಡರು.
ಸಿಪಿಐಎಂನ ಭರತರಾಜು ಮಾತನಾಡಿ, “ಅಂತರ್ಜಲ ಕುಸಿತವಾಗಿ ಕುಡಿಯುವ ನೀರಿಗೂ ನಮ್ಮ ಮಳವಳ್ಳಿ ತಾಲೂಕಿನ ಹಳ್ಳಿಗಳಲ್ಲಿ ಸಮಸ್ಯೆಯಾಗಿದೆ. ಟ್ಯಾಂಕರುಗಳಲ್ಲಿ ನೀರನ್ನು ಸರಬರಾಜು ಮಾಡುವ ಪರಿಸ್ಥಿತಿ ಇನ್ನೂ ಇದೆ. ಬೆಳೆಗಳಿಗೆ ನೀರು ಕೊಡುವ ವಿಚಾರದಲ್ಲಿ, ಕೆರೆ, ಕಟ್ಟೆಗಳನ್ನು ತುಂಬಿಸುವ ವಿಚಾರದಲ್ಲಿ ಬೇಜವಾಬ್ದಾರಿ ಮಾಡಿರುವ ಅಧಿಕಾರಿಗಳ ವರ್ಗ ಹಾಗೂ ಶಾಸಕಾಂಗದ ಚುನಾಯಿತ ಜನ ಪ್ರತಿನಿಧಿಗಳಿಗಾಗಲಿ ರೈತರ ಬಗ್ಗೆ ಕಳಕಳಿ ಇಲ್ಲದೆ ಇರುವುದನ್ನು ನೋಡುತ್ತಿದ್ದೇವೆ” ಎಂದರು.
“ನಮ್ಮ ಒತ್ತಾಯ ಇಷ್ಟೇ, ಈಗ ಬೆಳೆದು ನಿಂತಿರುವ ಬೆಳೆಗಳನ್ನು ಉಳಿಸಿಕೊಳ್ಳಬೇಕು. ಜೊತೆಗೆ ಮುಂದೆ ಭತ್ತದ ಹೊಟ್ಲು ಹಾಕಿ ಭತ್ತ ಬೆಳೆಯಲು ನೀರು ಕೊಡಬೇಕು. ಅವೈಜ್ಞಾನಿಕ ಕಟ್ಟು ಪದ್ಧತಿಯಲ್ಲಿ ನೀರು ಕೊಡುತ್ತೇವೆ ಎಂದುಮಾಡಿರುವ ಘೋಷಣೆ ರೈತ ವಿರೋಧಿಯಾದದ್ದು, ಅದನ್ನು ಕೈಬಿಟ್ಟು ಮಾಮೂಲಿನಂತೆ ನೀರು ಕೊಡಬೇಕು” ಎಂದು ಹಕ್ಕೊತ್ತಾಯ ಮಾಡಿದರು.
ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಭರತ್ ಕುಮಾರ್ ಮಾತನಾಡಿ, “ಸಂಜೆ ಆರು ಗಂಟೆಯಿಂದ ಎಲ್ಲ ಕಾಲುವೆಗಳಿಗೆ ನೀರು ಬಿಡುತ್ತೇವೆ. ಕೆರೆಕಟ್ಟೆಗಳಿಗೂ ನೀರು ತುಂಬಿಸುತ್ತೇವೆ” ಎಂದು ಭರವಸೆ ನೀಡಿದರು. ಸಹಾಯಕ ಇಂಜಿನಿಯರ್ ಗೋವರ್ಧನ್ ಹಾಜರಿದ್ದರು.
ಧರಣಿಯಲ್ಲಿ ಸಿಪಿಐಎಂನ ಕೃಷ್ಣೇಗೌಡ ಟಿ.ಎಲ್, ಆನಂದ್ ಟಿ.ಎಚ್, ಮಾದಳ್ಳಿ ಎನ್. ಶಿವಕುಮಾರ್, ಚೇತನ್ ಕಾಗೇಪುರ, ಸತೀಶ್, ವಿಜಯ್ ಗೂಳಘಟ್ಟ, ಬಸವರಾಜು ತಳಗವಾದಿ, ಹೇಮಂತ್ ಗೂಳಘಟ್ಟ ಹಾಗೂ ಕಾಗೇಪುರ (ಬಿಲ್ಡಿಂಗ್), ತಳಗವಾದಿ, ಗೂಳಘಟ್ಟ, ನೆಲಮಾಕನಹಳ್ಳಿ, ದೇವಿಪುರ, ಹೊಂಬೇಗೌಡನದೊಡ್ಡಿ ಹಾಗೂ ಮಾದಳ್ಳಿ ಗ್ರಾಮಗಳ ರೈತರು ಭಾಗವಹಿಸಿದ್ದರು.





