ಕುಡಿತ, ಧೂಮಪಾನ, ಡ್ರಗ್ಸ್, ಅಮಲು ವಸ್ತುಗಳ ಸೇವನೆಯಿಂದ ಆಗಬಹುದಾದ ಗಂಡಾಂತರಗಳ ಬಗ್ಗೆ ಜಿಲ್ಲೆಯಲ್ಲಿ ಹೆಚ್ಚು, ಹೆಚ್ಚು ಅರಿವು ಮೂಡಿಸಿ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ ಕುಮಾರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಶಾ ಮುಕ್ತ ಭಾರತ ಅಭಿಯಾನ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಸಭೆ ನಡೆಸಿ ಮಾತನಾಡಿದರು.
ಕುಡಿತ, ಡ್ರಗ್ಸ್ ಸೇರಿದಂತೆ ಇನ್ನಿತರ ಚಟಗಳು ಸಮಾಜವನ್ನು ಕೊಲ್ಲುವಂತವು. ಕುತೂಹಲಕ್ಕಾಗಿ ಮೊದಲು ಶುರು ಮಾಡಿ ನಂತರ ಅವುಗಳ ದಾಸರಾಗುತ್ತಾರೆ. ಅಮಲು ವಸ್ತುಗಳ ಸೇವನೆ ಮಾಡುತ್ತಿರುವವರನ್ನು ಅದರಿಂದ ಹೊರ ತರಲು ಅಗತ್ಯ ಕ್ರಮ ವಹಿಸಿ ಎಂದರು.
ದಾಸ್ಯಕ್ಕೆ ಒಳಗಾಗಿರುವ ವ್ಯಕ್ತಿಯಿಂದ ಅವರ ಮಕ್ಕಳು ಹಾಗೂ ಕುಟುಂಬದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಅಂತಹ ವ್ಯಕ್ತಿಗಳಿಗೆ ಅಗತ್ಯ ಆಯ್ಕೆ ಮಾಡುವುದರ ಜೊತೆಗೆ ತಿಳುವಳಿಕೆ ನೀಡಿ ಅವರ ಮನವೊಲಿಸುವ ಪ್ರಯತ್ನ ಮಾಡಬೇಕು ಎಂದರು.
ದುಶ್ಚಟಕ್ಕೆ ಒಳಗಾಗಿರುವ ವ್ಯಕ್ತಿಗಳು ಯಾವುದೋ ಒತ್ತಡ, ಕೌಟುಂಬಿಕ ತೊಡಕುಗಳಿಂದ ಛಟಗಳಿಗೆ ಒಳಗಾಗಿರುತ್ತಾರೆ. ದುಶ್ಚಟಗಳಿಗೆ ಒಳಗಾಗಿರುವವರನ್ನು ಚಟಗಳಿಂದ ಹೊರ ತಂದು ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ ಬದುಕಲು ಅನುವು ಮಾಡಬೇಕು ಎಂದರು.
ಜಿಲ್ಲಾಮಟ್ಟದ ನಶಾ ಮುಕ್ತ ಭಾರತ ಅಭಿಯಾನ ಸಮಿತಿಗೆ ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕಾಗಿದ್ದು, ಚುರುಕಾಗಿ ಹಾಗೂ ಪರಿಣಾಮಕಾರಿಯಾಗಿ ಕೆಲಸ ಮಾಡುವವರನ್ನು ನೇಮಿಸಿ ಎಂದರು.
ಕುಡಿತದಿಂದ ಉಂಟಾಗುವ ತೊಡಕು ಹಾಗೂ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಶಾಲೆಯ ಮಕ್ಕಳಿಗೆ ತಿಳಿಸಬೇಕು. ಒಂದು ವೇಳೆ ಶಾಲಾ ಮಕ್ಕಳ ತಂದೆಯರು ಕುಡಿತಕ್ಕೆ ಬಲಿಯಾಗಿದ್ದರೆ ಅವರಿಗೆ ತಮ್ಮ ಮಕ್ಕಳ ಕೈಯಿಂದ ಪತ್ರ ಬರೆಸಿ ಆ ಮೂಲಕ ಅವರ ತಂದೆಯರಿಗೆ ತಿಳುವಳಿಕೆ ಮೂಡಿಸಬಹುದು ಎಂದರು.
ಪ್ರತಿ ಶಾಲೆಗಳಲ್ಲಿ ನಶಾ ಮುಕ್ತ ಅಭಿಯಾನಕ್ಕೆ ಸಂಬಂಧಿಸಿದಂತೆ ಅರಿವು ಜಾಥಾ ಹಾಗೂ ಕಾರ್ಯಕ್ರಮವನ್ನು ನಡೆಸುವ ಮೂಲಕ ಅರಿವು ತರಬೇಕು ಎಂದರು.

ಕುಡಿತದ ಚಟಕ್ಕೆ ಒಳಗಾದವರನ್ನು ಈಗಾಗಲೇ ಕುಡಿತ ಬಿಡಿಸುವ ಶಿಬಿರವನ್ನು ಏರ್ಪಡಿಸಿ ಕುಡಿತ ಬಿಡಿಸಲಾಗುತ್ತಿದೆ. ಕುಡಿತ ಬಿಟ್ಟವರಿಗೆ ಕಾರ್ಯಕ್ರಮಗಳನ್ನು ನಡೆಸಿ ಅವರನ್ನು ಸನ್ಮಾನಿಸುವ ಕೆಲಸವಾಗುತ್ತಿದೆ. ಇದರಿಂದ ಉಳಿದಿರುವ ಕುಡಿತ ಕಲಿತವರ ಬಗೆಯನ್ನು ಬದಲಾಯಿಸಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ಕೋಮಲ್ ಕುಮಾರ್ ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ ಆನಂದ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಾ. ಸಿದ್ದಲಿಂಗೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಸ್ ರಾಜಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹೆಚ್ ಶಿವರಾಮೇಗೌಡ, ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಸೋಮಶೇಖರ್ ಸೇರಿದಂತೆ ಇನ್ನಿತರರು ಹಾಜರಿದ್ದರು.





