ಮಹಿಳೆಯರಿಂದ ಮಹಿಳೆಯರಿಗಾಗಿ ಪ್ರಕಟವಾಗುತ್ತಿರುವ ‘ಅನುಪಮ’ ಪತ್ರಿಕೆಯ ರಜತ ವರ್ಷದ ಅಂಗವಾಗಿ ಮಂಗಳೂರಿನ ಪುರಭವನದಲ್ಲಿ ಜ.15ರಂದು ಬೆಳಗ್ಗೆ 10ಕ್ಕೆ ಓದುಗರ ಸಮಾವೇಶ ನಡೆಯಲಿದೆ ಎಂದು ಅನುಪಮ ಮಾಸಿಕದ ಪ್ರಧಾನ ಸಂಪಾದಕಿ ಶಹನಾಝ್ ಎಂ. ತಿಳಿಸಿದ್ದಾರೆ.
ಮಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶವನ್ನು ಖ್ಯಾತ ಸಾಹಿತಿ ಡಾ.ಕೆ.ಶರೀಫಾ ಉದ್ಘಾಟಿಸಿ, 25ನೇ ವರ್ಷದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಿರುವರು ಎಂದು ಮಾಹಿತಿ ನೀಡಿದರು.
ಗೌರವ ಅತಿಥಿಗಳಾಗಿ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಮುಖ್ಯ ಅತಿಥಿಗಳಾಗಿ ಮಂಗಳೂರು ನಗರ ಪೊಲೀಸ್ ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕಿ, ಕರಾವಳಿ ಲೇಖಕಿ-ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಟಿ. ಶೆಟ್ಟಿ, ಬೆಥನಿ ಸೈಂಟ್ ತೆರೇಸಾ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಲೂರ್ಡ್ಸ್ ಅಂತರ್ ರಾಷ್ಟ್ರೀಯ ಚಿನ್ನದ ಪದಕ ವಿಜೇತೆ ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ, ಆಪ್ತ ಸಮಾಲೋಚಕಿ ಡಾ.ರುಕ್ಸಾನ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯೆ ಸಮೀನಾ ಅಫ್ಸಾನ್ ವಹಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಸಾಧಕರಾದ ಕೆ.ಎ.ರೋಹಿಣಿ, ಸರಸ ಬಿ. ಕೃಷ್ಣ ಕಮ್ಮರಡಿ, ಸಮಾಜ ಸೇವಕಿ ಹರಿಣಿ ಕೆ., ಆಯಿಶ ಇ. ಶಾಫಿಯವರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.
ಪ್ರತಿಭಾವಂತರಿಗೆ ಧ್ವನಿ ನೀಡಿದೆ: ಪತ್ರಿಕೋದ್ಯಮದಲ್ಲಿ ಈಗ ಮಹಿಳೆಯರೂ ತೊಡಗಿಸಿಕೊಂಡಿದ್ದು, ಮುಸ್ಲಿಮ್ ಮಹಿಳೆಯರ ಪಾಲುದಾರಿಕೆ ತುಂಬಾ ಕಡಿಮೆ. 2,000 ಇಸವಿಯಲ್ಲಿ ಮಂಗಳೂರಿನಿಂದ ಮುಸ್ಲಿಮ್ ಮಹಿಳೆಯರಿಂದಲೇ ‘ಅನುಪಮ’ ಎಂಬ ಮಾಸಪತ್ರಿಕೆ ಆರಂಭಗೊಂಡಿದ್ದು, ಜಾತಿ, ಜನಾಂಗ, ಮತ, ಧರ್ಮಗಳ ವ್ಯತ್ಯಾಸವಿಲ್ಲದೆ ಪ್ರತಿಭಾವಂತರಿಗೆ ಅನುಪಮ ಧ್ವನಿ ನೀಡಿದೆ ಎಂದು ಶಹನಾಝ್ ಎಂ ಅಭಿಪ್ರಾಯಪಟ್ಟರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸೋಮನಾಥ ಮಂದಿರ ಮರುನಿರ್ಮಾಣವನ್ನು ವಿರೋಧಿಸಿದ್ದರೇ ನೆಹರೂ? ಆ ಕಾಲಮಾನ ಯಾವುದು?
ಸುದ್ದಿಗೋಷ್ಠಿಯಲ್ಲಿ ಅನುಪಮದ ಉಪ ಸಂಪಾದಕಿ ಸಬೀಹಾ ಫಾತಿಮಾ, ಸಂಪಾದಕ ಮಂಡಳಿಯ ಸಮೀನಾ ಯು., ಸಾಜಿದಾ ಮೂಮಿನ್, ಕರಾವಳಿ ಲೇಖಕಿ-ವಾಚಕಿಯರ ಸಂಘದ ಸದಸ್ಯೆ ಸುಖಾಲಾಕ್ಷಿ, ಹಿದಾಯ ಫೌಂಡೇಶನ್ನ ಅಧ್ಯಕ್ಷೆ ಖುರ್ಷಿದಾ ಹಾಗೂ ಮುಝಾಹಿರ ಸಾಮಾಜಿಕ ಕಾರ್ಯಕರ್ತೆ ಹರಿಣಿ ಕೆ. ಉಪಸ್ಥಿತರಿದ್ದರು.





