ಡಿಜಿಟಲ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ದೃಷ್ಟಿಯಿಂದ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ತನ್ನ ಸೇವೆಗಳಲ್ಲಿ ಮಹತ್ವಪೂರ್ಣ ನಿರ್ಧಾರ ಕೈಗೊಂಡಿದ್ದು, ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಓಎನ್‌ಡಿಸಿ) ಮೂಲಕ ಕ್ಯೂಆರ್ ಟಿಕೆಟ್ ಸೇವೆ ನೀಡಲು ಚಾಲನೆ ನೀಡಿದೆ.
ಈ ಹೊಸ ಸೌಲಭ್ಯದಿಂದಾಗಿ ಮೆಟ್ರೋ ಪ್ರಯಾಣಿಕರು ಇನ್ನು ಮುಂದೆ, ಈಜ್ ಮೈ ಟ್ರಿಪ್ (EaseMyTrip), ಹೈವೇ ಡಿಲೈಟ್ (Highway Delite), ಮೈಲ್ಸ್ ಆಂಡ್ ಕಿಲೋ ಮೀಟರ್ಸ್ (Miles & Kilometres via Telegram), ನಮ್ಮ ಯಾತ್ರಿ (Namma Yatri), ವನ್ ಟಿಕೆಟ್ (OneTicket), ರ್‍ಯಾಪಿಡೋ (Rapido), ರೆಡ್ ಬಸ್ (Redbus), ಟಮ್ಮಾಕ್ (Tummoc) ಮತ್ತು ಯಾತ್ರಿ – ಸಿಟಿ ಟ್ರಾವೆಲ್ ಗೈಡ್ (Yatri – City Travel Guide) ಎಂಬ ಒಂಬತ್ತು ಜನಪ್ರಿಯ ಅಪ್ಲಿಕೇಶನ್‌ಗಳ ಮೂಲಕ ಮೆಟ್ರೋ ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ.
ಈ ಹೊಸ ಆಯ್ಕೆಗಳು ಈಗಾಗಲೇ ಲಭ್ಯವಿರುವ ಟಿಕೆಟ್ ಬುಕ್ಕಿಂಗ್ ಆಯ್ದ ಮಾರ್ಗಗಳಾದ ನಮ್ಮ ಮೆಟ್ರೋ ಮೊಬೈಲ್ ಆಪ್ , ಬಿಎಂಆರ್‌ಸಿಎಲ್ ವಾಟ್ಸಾಪ್ ಚಾಟ್ ಬಾಟ್ (8105556677), ಪೇಟಿಎಂ (Paytm) ಆಪ್‌ಗೆ ಪೂರಕವಾಗಿ ಸೇರುತ್ತಿದ್ದು, ಡಿಜಿಟಲ್ ಬಳಕೆದಾರರಿಗೆ ಇನ್ನಷ್ಟು ಸುಲಭ, ಲಭ್ಯವಿರುವ ಮತ್ತು ಸಹಜ ಟಿಕೆಟ್ ಬುಕ್ಕಿಂಗ್ ಅನುಭವವನ್ನು ಒದಗಿಸುತ್ತವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಈ ಕುರಿತು ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಮಹೇಶ್ವರ ರಾವ್ ಮಾತನಾಡಿ, “ಡಿಜಿಟಲ್ ಟಿಕೆಟ್ ವ್ಯವಸ್ಥೆಯ ಈ ವಿಸ್ತರಣೆಯು ಮೊದಲ ಹಂತದಿಂದ ಕೊನೆಯ ಹಂತದ ಸಂಪರ್ಕವರೆಗೆ (ಫಸ್ಟ್, ಮಿಡ್ ಮತ್ತು ಲಾಸ್ಟ್ ಮೈಲ್ ಕನೆಕ್ಟಿವಿಟಿ) ಏಕೀಕೃತಗೊಳಿಸುವ ನಮ್ಮ ದೀರ್ಘಕಾಲಿಕ ಪ್ರಯತ್ನದ ಭಾಗವಾಗಿದೆ. ಈಗಾಗಲೇ 2023ರಿಂದ ಓಎನ್‌ಡಿಸಿ ನೆಟ್ವರ್ಕಿನಲ್ಲಿ ಆಟೋ ಮತ್ತು ಟ್ಯಾಕ್ಸಿ ಸೇವೆಗಳು ಲಭ್ಯವಿರುವ ಹಿನ್ನೆಲೆಯಲ್ಲಿ, ಮೆಟ್ರೋ ಟಿಕೆಟ್‌ಗಳ ಸೇರ್ಪಡೆ ಬಹುಮಾದ್ಯಮ ಸಂಚಾರ ವ್ಯವಸ್ಥೆಯ ಪ್ರಮುಖ ಅಂಗವಾಗುತ್ತಿದೆ. ಪ್ರಯಾಣಿಕರು ಇದೀಗ ಒಂದೇ ಅಪ್ಲಿಕೇಶನ್‌ನಿಂದ ತಮ್ಮ ಮನೆಯಿಂದ ತಾವು ಪ್ರಯಾಣಿಸುವ ನಿಗದಿತ ಸ್ಥಳದವರೆಗೆ ತಮ್ಮ ಸಂಪೂರ್ಣ ಪ್ರಯಾಣವನ್ನು ಸುಲಭವಾಗಿ ಯೋಜಿಸಬಹುದಾಗಿದೆ. ಇದು ಸಮಯ ಮತ್ತು ಶ್ರಮವನ್ನು ದ್ವಿಗುಣವಾಗಿ ಉಳಿಸುತ್ತದೆ. ಬಿಎಂಆರ್‌ಸಿಎಲ್ ಈ ಮೂಲಕ ಒಂದು ಮುಕ್ತ, ಒಳಗೊಳ್ಳುವಿಕೆಯಿಂದ ಕೂಡಿದ, ತಂತ್ರಜ್ಞಾನಾಧಾರಿತ ಭವಿಷ್ಯದ ನಗದುರಹಿತ ನಗರ ಸಂಚಾರ ವ್ಯವಸ್ಥೆ ಕಡೆಗೆ ನಿರ್ಣಾಯಕ ಹೆಜ್ಜೆ ಇಡುತ್ತಿದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬಳಕೆದಾರರ ಗೌಪ್ಯತೆಗೆ ಆದ್ಯತೆ, ಟ್ವಿಟರ್ ಸಹ ಸ್ಥಾಪಕ ಜಾಕ್ ಡಾರ್ಸಿಯಿಂದ ಹೊಸ ಮೆಸೇಜಿಂಗ್ ಆ್ಯಪ್ ಬಿಡುಗಡೆ
ನಮ್ಮ ಮೆಟ್ರೋ ಸೇವೆಯನ್ನು ವಾರದ ದಿನಗಳಲ್ಲಿ ಪ್ರತಿ ದಿನ 8.5 ಲಕ್ಷಕ್ಕಿಂತ ಹೆಚ್ಚು ಪ್ರಯಾಣಿಕರು ಬಳಸುತ್ತಿದ್ದಾರೆ. ಅವರೆಲ್ಲರಿಗೂ ಈ ಸೇವೆಯನ್ನು ಇನ್ನಷ್ಟು ಸುಲಭವಾಗಿಸುವ ನಿಟ್ಟಿನಲ್ಲಿ 9 ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಲಭ್ಯವಿರುವಂತೆ ಬಿಎಂಆರ್‌ಸಿಎಲ್ ಮಹತ್ವದ ಹೆಜ್ಜೆಯನ್ನಿಟ್ಟಿದೆ.





