ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕರುಗಳು ಪ್ರತಿಭಟನಾ ಧರಣಿ ನಡೆಸಿದರು.
ವಿವಿಯ ಕುವೆಂಪು ಶತಮಾನೋತ್ಸವ ಭವನದ ಮುಂದೆ ಸೇರಿದ್ದ ಅತಿಥಿ ಉಪನ್ಯಾಸಕರು, ಕುವೆಂಪು ವಿವಿಯು ಈ ಹಿಂದಿನ ಶೈಕ್ಷಣಿಕ ಸಾಲಿನಲ್ಲಿ, ಅತಿಥಿ ಉಪನ್ಯಾಸಕರ ವೇತನವನ್ನು ಸಿಂಡಿಕೇಟ್ ಸಭೆಯ ನಿರ್ಣಯದಂತೆ ಗರಿಷ್ಠ 45,000ರೂ ಗಳನ್ನು ನಿಗದಿ ಮಾಡಿ ನೀಡಿದ್ದರು. ಆದರೆ, ಹಠಾತ್ತನೇ ಈ ಶೈಕ್ಷಣಿಕ ಸಾಲಿನಲ್ಲಿ ಯಾವುದೇ ಸಿಂಡಿಕೇಟ್ ಸಭೆಯ ಗಮನಕ್ಕೆ ತರದೆ, ಸರ್ಕಾರದ ಆದೇಶದ ಪ್ರಕಾರ ನಮ್ಮ ವೇತನವನ್ನು ಕಡಿತಗೊಳಿಸಿರುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರವು ಪರಿಷ್ಕೃತ ಅತಿಥಿ ಉಪನ್ಯಾಸಕರ ವೇತನವನ್ನು ಜಾರಿಗೆ ತಂದಿದ್ದು, ಅದನ್ನು ಯಥಾವತ್ತಾಗಿ ನಿಗದಿಪಡಿಸಲು ವಿಳಂಬ ಧೋರಣೆಯನ್ನು ತೋರಿಸುತ್ತಿದೆ. ಆದ್ದರಿಂದ ಸರ್ಕಾರದ ಆದೇಶದ ಪ್ರಕಾರ ವೇತನವನ್ನು ಮತ್ತು ವಿಮಾ ಯೋಜನೆ, ಹಿಡಿಗಂಟು ಯೋಜನೆ, ಆಸ್ಪತ್ರೆ ಸವಲತ್ತು ಮುಂತಾದವುಗಳನ್ನು ಜನವರಿ 2024ರಿಂದಲೇ ಅನ್ವಯವಾಗುವಂತೆ, ತಕ್ಷಣ ಜಾರಿ ಮಾಡಿ ಬಾಕಿ ವೇತನವನ್ನು ಈ ಕೂಡಲೇ ಪಾವತಿಸುವಂತೆ ಆಗ್ರಹಿಸಿದರು.
ವಿಶ್ವವಿದ್ಯಾನಿಲಯದಲ್ಲಿ ಸತತವಾಗಿ 15-20 ವರ್ಷಗಳಿಂದ ಹಲವು ಮಂದಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ವಿಶ್ವವಿದ್ಯಾನಿಲಯದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಆದರೆ ನಮ್ಮ ಈ ಸೇವೆಯ ಅನುಭವವು ಯಾವ ಸಂಸ್ಥೆಯಲ್ಲಿಯೂ ಕೂಡ ಪರಿಗಣನೆಗೆ ತೆಗೆದುಕೊಳ್ಳದಿರುವುದು ವಿಷಾದನೀಯ ಎಂದು ಆಕ್ರೋಶ ಹೊರಹಾಕಿದರು.

ಈಗಾಗಲೇ ವಿಶ್ವವಿದ್ಯಾನಿಲಯದಲ್ಲಿ ಅತಿಥಿ ಉಪನ್ಯಾಸಕರಿಗೆ, 11 ತಿಂಗಳ ವೇತನ ನೀಡಲು ಸಿಂಡಿಕೇಟ್ ಸಭೆಯು ನಿರ್ಣಯ ಮಾಡಿತ್ತು. ಇದುವರೆಗೂ ಅದರ ಬಗ್ಗೆ ಯಾವುದೇ ಆದೇಶ ನೀಡದೆ ವಿಳಂಬ ನೀತಿಯನ್ನು ತೋರಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಶೈಕ್ಷಣಿಕ ವರ್ಷದಲ್ಲಿ ದಿಢೀರನೆ ಮೇ ತಿಂಗಳ ಸಂಬಳವನ್ನು ಕಡಿತ ಮಾಡಲು ಹೊರಟಿರುವುದು ಬಹಳ ಶೋಚನೀಯ ಸಂಗತಿ. ವಿಶ್ವವಿದ್ಯಾನಿಲಯದ ಅಧಿಕಾರಿಗಳು ಈ ಕೂಡಲೇ ಇದರ ಬಗ್ಗೆ ಕ್ರಮ ಕೈಗೊಂಡು ಸತತವಾಗಿ ವೇತನವನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಉಪನ್ಯಾಸಕರಿಗೆ ಸೇವಾ ಭದ್ರತೆ ಇಲ್ಲದಂತಾಗಿರುವುದು ಶೋಚನೀಯ ಸಂಗತಿಯಾಗಿದೆ. ಹಾಗಾಗಿ ಸೇವಾ ಭದ್ರತೆಯ ಈತ ದೃಷ್ಟಿಯಿಂದ ಹಿಂದಿನ ವರ್ಷದಲ್ಲಿ ಕಾರ್ಯ ನಿರ್ವಹಿಸಿದ ಯುಜಿಸಿ ನಿಯಮದಂತೆ ಅರ್ಹತೆಯನ್ನು ಹೊಂದಿರುವ ಎಲ್ಲ ಅತಿಥಿ ಉಪನ್ಯಾಸಕರನ್ನು ಮುಂದಿನ ಶೈಕ್ಷಣಿಕ ಸಾಲಿಗೂ ಯಾವುದೇ ಸಂದರ್ಶ ವಿಲ್ಲದೆ ಮುಂದುವರೆಸಿ ಸೇವಾ ಭದ್ರತೆಯನ್ನು ಒದಗಿಸಬೇಕು ಹಾಗೂ ಯುಜಿಸಿ ನಿಯಮದ ಅರ್ಹತೆ ಹೊಂದಿಲ್ಲದ ಮತ್ತು ಖಾಲಿ ಸ್ಥಾನಗಳಿಗೆ ಮಾತ್ರ ಸಂದರ್ಶನವನ್ನು ನಡೆಸಿ ಶೈಕ್ಷಣಿಕ ವರ್ಷದ ಮೊದಲ ದಿನದಿಂದಲೇ ಕೆಲಸಕ್ಕೆ ವರದಿ ಮಾಡಿಕೊಳ್ಳುವಂತೆ ಆಯ್ಕೆ ಮಾಡಿಕೊಳ್ಳಬೇಕೆಂದು ಅತಿಥಿ ಉಪನ್ಯಾಸಕರು ಆಗ್ರಹಿಸಿದರು.
ವಿಶ್ವವಿದ್ಯಾನಿಲಯದ ಮಾನವ ಸಂಪನ್ಮೂಲ ವಿಭಾಗದಿಂದ, ಆಗುತ್ತಿರುವ ತಪ್ಪು ಗ್ರಹಿಕೆಗಳು ಮತ್ತು ವೇತನದ ಬಿಲ್ಲುಗಳ ಪ್ರಕ್ರಿಯೆ ಮಾಡಲು ತೋರುತ್ತಿರುವ ವಿಳಂಬ ನೀತಿಯನ್ನು ತಡೆಗಟ್ಟಿ, ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಹಾಗೂ ವೇತನ ಬಿಲ್ಲು ನೀಡಿದ ಐದು ದಿನದೊಳಗೆ ವೇತನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಕುವೆಂಪು ವಿವಿ ಅತಿಥಿ ಉಪನ್ಯಾಸಕರು ಧರಣಿ ನಡೆಸುವ ಮೂಲಕ ಆಗ್ರಹಿಸಿದರು.
ಅತಿಥಿ ಉಪನ್ಯಾಸಕರ ಬೇಡಿಕೆಗಳು
- ಸರ್ಕಾರ ಜಾರಿಗೊಳಿಸಿರುವ ಅತಿಥಿ ಉಪನ್ಯಾಸಕರ ಸವಲತ್ತುಗಳನ್ನು ಮತ್ತು ವೇತನವನ್ನು ಕೂಡಲೇ ಜಾರಿಗೊಳಿಸುವುದು ಮತ್ತು ಜನವರಿ 2024 ರಿಂದಲೇ ಅನ್ವಯವಾಗುವಂತೆ ಬಾಕಿ ವೇತನವನ್ನು (arrears) ಪಾವತಿಸುವುದು.
- ಪ್ರತಿ ಶೈಕ್ಷಣಿಕ ವರ್ಷದ ಸಂದರ್ಶನವನ್ನು ರದ್ದುಗೊಳಿಸಿ ಮುಂದಿನ ಶೈಕ್ಷಣಿಕ ವರ್ಷಕ್ಕೂ ಅದೇ ಅತಿಥಿ ಉಪನ್ಯಾಸಕರನ್ನು ಮುಂದುವರೆಸಿ ಸೇವಾ ಭದ್ರತೆಯನ್ನು ಒದಗಿಸುವುದು.
- 11 ತಿಂಗಳ ವೇತನ ಜಾರಿಗೊಳಿಸುವುದು ಮತ್ತು ಸತತವಾಗಿ ವೇತನವನ್ನು ಪ್ರತಿ ತಿಂಗಳು ಐದನೇ ತಾರೀಕಿನ ಒಳಗೆ ನೀಡುವುದು.
- ಮಾನವ ಸಂಪನ್ಮೂಲ ವಿಭಾಗದಿಂದ ನಡೆಯುತ್ತಿರುವ ತಪ್ಪು ಗ್ರಹಿಕೆಗಳು ಮತ್ತು ವಿಳಂಬವನ್ನು ತಡೆಗಟ್ಟುವುದು.
- ಅತಿಥಿ ಉಪನ್ಯಾಸಕರ ಪದನಾಮವನ್ನು, ಸಹಾಯಕ ಬೋಧಕರಾಗಿ ಬದಲಾವಣೆ ಮಾಡಿ. ಕುಲಸಚಿವರು (ಆಡಳಿತ) ಸೇವಾ ಅನುಭವದ ಪ್ರಮಾಣ ಪತ್ರವನ್ನು ನೀಡುವುದು.
- ಅತಿಥಿ ಉಪನ್ಯಾಸಕರನ್ನು ಗೌರವಯುತವಾಗಿ ನಡೆಸಿಕೊಂಡು, ವಿಶ್ವವಿದ್ಯಾನಿಲಯದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ (ಮೌಲ್ಯಮಾಪನ, ಸ್ಮಾಡ್ ಡ್ಯೂಟಿ ಮುಂತಾದವು) ಬಳಸಿಕೊಳ್ಳುವುದು.





